ಮುಳಬಾಗಿಲು: ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಇಲ್ಲೇ ಕೆಲಸ ಮಾಡುತ್ತಿರುವ ಕೆಲವು ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿ ಭೂ ಮಾಫಿಯಾ ದೊಂದಿಗೆ ಶಾಮೀಲಾಗಿ ಸರ್ಕಾರಿ ಜಮೀನು ಸಂರಕ್ಷಣೆ ಮಾಡದೇ, ನಕಲಿ ದಾಖಲೆಗಳ ಮೂಲಕ ಪರಭಾರೆ ಮಾಡುತ್ತಿದ್ದಾರೆ ಎಂಬ ಆರೋಪ ವಿದ್ದು, 9 ವರ್ಷಗಳ ಹಿಂದೆ 36 ಎಕರೆ ಸರ್ಕಾರಿ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದ್ದರೂ ವಶಪಡಿಸಿ ಕೊಂಡಿಲ್ಲ. ಹೀಗಾಗಿ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರಾದ್ರೂ ಈ ಕಡೆ ಗಮನ ಹರಿಸಬೇಕೆಂಬುದು ಸ್ಥಳೀಯರ ಮನವಿಯಾಗಿದೆ.
ತಾಲೂಕಿನ ಆವಣಿ ಹೋಬಳಿ ರಾಷ್ಟ್ರೀಯ ಹೆದಾರಿ 75ರ ಅಂಚಿನಲ್ಲಿರುವ ಜಮ್ಮನಹಳ್ಳಿ ಸರ್ವೆ ನಂಬರ್ 103ರಲ್ಲಿನ ಸರ್ಕಾರಿ ಗೋಮಾಳದಲ್ಲಿ 1969-72ನೇ ಸಾಲಿನಲ್ಲಿ ದೇವರಾಯಸಮುದ್ರ ಜಿ.ಎಸ್.ವೆಂಕಟೇಶ್ ಅಯ್ಯರ್ ಕಂದಾಯ ಇಲಾಖೆ ಕೆಲ ಅಧಿಕಾರಿಗಳ ಕುಮ್ಮಕ್ಕಿನಿಂದ ಸರ್ವೆ ನಂಬರ್ 103/4, 103/5, 103/6, 103/7 ರಲ್ಲಿ ತಲಾ 5 ಎಕರೆಯಂತೆ ಒಟ್ಟು 20 ಎಕರೆಯನ್ನು ನಕಲಿ ದಾಖಲೆಗಳ ಸೃಷ್ಟಿ ಮೂಲಕ ಪಡೆದುಕೊಂಡಿದ್ದರು. ಅದೇ ರೀತಿ ಎಂ.ಆರ್. ವೆಂಕಟೇಶ್‌ಅಯ್ಯರ್ ಸಹ ಜಮ್ಮನಹಳ್ಳಿ ಸರ್ವೆ ನಂಬರ್ 103/9, 103/10, 103/11, 103/13 ರಲ್ಲಿ ತಲಾ 4ರಂತೆ ಒಟ್ಟು 16 ಎಕರೆ ಸೇರಿ 36 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿಕೊಂಡು ಲಕ್ಷಾಂತರ ರೂ.ಗೆ ಬೆಂಗಳೂರಿನ ಸಯ್ಯದ್‌ಮಸ್ತಾನ್ ಅವರಿಗೆ ಮಾರಾಟ ಮಾಡಿದ್ದಾರೆ.
ನಕಲಿ ದಾಖಲಿ ಸೃಷ್ಟಿ: ಈ ಭೂ ಕಬಳಿಕೆಯ ಸುಳಿವನ್ನು ಅರಿತ ದಸಂಸ ತಾಲೂಕು ಸಂಚಾಲಕ ಕೀಲುಹೊಳಲಿ ಸತೀಶ್ ಮತ್ತು ಕಾರ್ಗಿಲ್ ವೆಂಕಟೇಶ್ ಅಕ್ರಮ ಭೂ ದಾಖಲೆ ರದ್ದುಗೊಳಿಸಿ ಜಮೀನನ್ನು ಸರ್ಕಾರ ಮುಟ್ಟು ಗೋಲು ಹಾಕಿಕೊಳ್ಳಬೇಕೆಂದು 2008ರಲ್ಲಿ ಅಂದಿನ ಜಿಲ್ಲಾಧಿಕಾರಿಗೆ ಅರ್ಜಿ ನೀಡಿದ್ದರು. ಅದರ ಅನ್ವಯ ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ 2010ರಲ್ಲಿ ಅಂದಿನ ತಹಶೀಲ್ದಾರ್ ಜಯಮಾಧವ್, ನಕಲಿ ದಾಖಲೆ ರದ್ದುಗೊಳಿಸಿ ರಾಷ್ಟ್ರೀಯ ಹೆದ್ದಾರಿ 75ರ ಅಂಚಿನಲ್ಲಿ ರುವ ಜಮೀನನ್ನು ಮುಟ್ಟುಗೋಲು ಹಾಕಿ ಕೊಂಡಿದ್ದರು.
ಅಲ್ಲದೇ, ಇಲಾಖೆ ವಶಕ್ಕೆ ಪಡೆಯಲು ಆದೇಶಿಸಿದ್ದಾರೆ. ಅದರಂತೆ, ಈ ಜಮ್ಮನಹಳ್ಳಿ ಸರ್ವೆ ನಂಬರ್ 103/9, 103/10, 103/11, 103/13 ರಲ್ಲಿ ತಲಾ 4 ಎಕರೆಯಂತೆ ಒಟ್ಟು 16 ಎಕರೆ ಸೇರಿದ ಪಹಣಿಗಳಲ್ಲಿ ಮಾತ್ರ ಎಂ.ಆರ್.8/2011-12, ದಿ.7/2/12 ರಂತೆ ಸರ್ಕಾರಕ್ಕೆ ಎಂದು ನಮೂದಿಸಲಾಗಿದೆ. ಆದರೆ, ಮುಟ್ಟುಗೋಲು ಹಾಕಿಕೊಂಡ ಜಮ್ಮನಹಳ್ಳಿ ಸರ್ವೆ ನಂಬರ್ 103/4, 103/5, 103/6, 103/7 ರಲ್ಲಿ ತಲಾ 5 ಎಕರೆ ಸೇರಿ 20 ಎಕರೆ ಜಮೀನು ಪಹಣಿಗಳಲ್ಲಿ ಮಾತ್ರ ಎಂ.ಆರ್ .13/2011/12, ದಿ.31/1/12 ರಂತೆ ಸರ್ಕಾರಕ್ಕೆ ಮತ್ತು ಬೆಳೆ ಕಾಲಂನಲ್ಲಿ ರಾಗಿ ಎಂದು ನಮೂದಿಸಿದೆ.
ಕೋರ್ಟ್ ತಡೆಯಾಜ್ಞೆ: ಅಲ್ಲದೇ, ನ್ಯಾಯಾಲಯದ ಡಬ್ಯೂಪಿ ನಂಬರ್ 13679/2012, ಜು.24, 2012 ರಂದು ತಡೆಯಾಜ್ಞೆ ನೀಡಿದೆ ಎಂದು ನಮೂದಿಸ ಲಾಗಿದೆ. ಆದರೆ, 2010ರ ನ.12 ರಂದು ಅಂದಿನ ತಹಶೀಲ್ದಾರ್ ಜಯಮಾದವ್, ದೇವರಾಯಸಮುದ್ರ ಜಿ.ಎಸ್.ವೆಂಕಟೇಶ್‌ಅಯ್ಯರ್ ಹೆಸರಿನಲ್ಲಿದ್ದ 20 ಎಕರೆ ಮತ್ತು ಎಂ.ಆರ್.ವೆಂಕಟೇಶ್ ಅಯ್ಯರ್ ಹೆಸರಿನಲ್ಲಿದ್ದ 16 ಎಕರೆ ಸೇರಿ 36 ಎಕರೆ ಜಮೀನನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿತ್ತು. ಆದರೆ, ಜಿ.ಎಸ್.ವೆಂಕಟೇಶ್‌ಅಯ್ಯರ್ ಹೆಸರಿನಲ್ಲಿದ್ದ 20 ಎಕರೆ ಜಮೀನು ವಿಚಾರವಾಗಿ ಎರಡು ವರ್ಷಗಳ ನಂತರ 2012ರಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಏಳು ವರ್ಷಗಳೇ ಕಳೆದರೂ ತಹಶೀಲ್ದಾರ್ ಯಾರೂ ತಡೆಯಾಜ್ಞೆ ತೆರವುಗೊಳಿಸಿಲ್ಲ. ಅಲ್ಲದೇ, ಯಾವುದೇ ಅಡೆತಡೆಯಿಲ್ಲದ ಎಂ.ಆರ್.ವೆಂಕಟೇಶ್‌ಅಯ್ಯರ್ ಹೆಸರಿನಲ್ಲಿದ್ದ 16 ಎಕರೆ ಜಮೀನನ್ನೂ ವಶಕ್ಕೆ ತೆಗೆದುಕೊಳ್ಳದೇ ಕೈ ಬಿಟ್ಟಿದ್ದಾರೆ.
ಕಲ್ಲಿನ ಕಾಂಪೌಂಡು: ಒಟ್ಟಿನಲ್ಲಿ ತಹಶೀಲ್ದಾರ್ ಜಯ ಮಾದವ್ ಆದೇಶ ಮಾಡಿ 9 ವರ್ಷಗಳೇ ಕಳೆದರೂ ಕಂದಾಯ ಅಧಿಕಾರಿಗಳು ಜಮೀನನ್ನು ತೆರವುಗೊಳಿ ಸದೇ ಇರುವುದರಿಂದ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಮೀನು ಸಯ್ಯದ್‌ಮಸ್ತಾನ್ ಅವರ ವಶ ದಲ್ಲಿದ್ದು, ಅವರು ಜಮೀನಿನ ಸುತ್ತಲೂ ಕಲ್ಲಿನ ಕಾಂಪೌಂಡ್ ನಿರ್ಮಿಸಿ, ಅದರಲ್ಲಿ ರೋಜಾ ಹೂ ಹಾಗೂ ಮತ್ತಿತರ ಬೆಳೆ ಬೆಳೆಯುತ್ತಿದ್ದಾರೆ. ಜಿಲ್ಲಾಧಿಕಾರಿ ಆಗಲಿ ತಹಶೀಲ್ದಾರ್ ಆಗಲಿ ಮುಟ್ಟು ಗೋಲು ಹಾಕಿಕೊಂಡಿರುವ ಜಮೀನನ್ನು ವಶಕ್ಕೆ ತೆಗೆದುಕೊಳ್ಳದೇ ಇರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ನಿರ್ಲಕ್ಷ್ಯ: ಭೂಕಬಳಿಕೆ ತಡೆಗಟ್ಟಲು ಸರ್ಕಾರ ಹಲವು ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಲಾಗುತ್ತಿದ್ದರೂ ಇತ್ತ ಕೋಟ್ಯಂತರ ರೂ. ಸರ್ಕಾರಿ ಜಮೀನು ದಲಿತ ಸಂಘ ಟನೆಗಳ ಕಾನೂನು ಹೋರಾಟದಿಂದ ಸರ್ಕಾರಕ್ಕೆ ದಕ್ಕಿದ್ದರೂ ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಸರ್ಕಾರಿ ಜಮೀನು ಪರಭಾರೆ ಮಾಡುವಲ್ಲಿ ಇರುವ ಉತ್ಸಾಹ ಸರ್ಕಾರಿ ಜಮೀನು ಸಂರಕ್ಷಣೆ ಮಾಡುವಲ್ಲಿ ಇಲ್ಲದೇ, ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಜಮೀನು ಖಾಸಗಿ ವ್ಯಕ್ತಿಯ ಆಧೀನದಲ್ಲೇ ಉಳಿದಿರುವುದರಿಂದ ಪ್ರಾದೇ ಶಿಕ ಆಯಕ್ತ ಹರ್ಷಗುಪ್ತ ಇತ್ತ ಗಮನ ಹರಿಸಬೇಕಾಗಿದೆ.
-ಎಂ.ನಾಗರಾಜಯ್ಯ