Advertisement

ಅರಣ್ಯದಂಚಿನ ಗ್ರಾಮಗಳು ಸೌದೆ ಒಲೆ ಮುಕ್ತ​​​​​​​

06:00 AM Nov 20, 2018 | |

ಬೆಂಗಳೂರು: ಮಲೆ ಮಹದೇಶ್ವರ ವನ್ಯಜೀವಿ ಸಂರಕ್ಷಣಾ ಧಾಮದೊಳಗಿನ ಹಾಗೂ ಸುತ್ತಮುತ್ತಲ ಗ್ರಾಮಗಳು ಶೇ.100 ರಷ್ಟು ಸೌದೆ ಒಲೆ ಮುಕ್ತ ಗ್ರಾಮಗಳಾಗಿ ಮಾರ್ಪಾಡಾಗುತ್ತಿದ್ದು, ಅರಣ್ಯ ಸಂರಕ್ಷಣೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

Advertisement

ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಅನಿಲ ಸಂಪರ್ಕವಿಲ್ಲದ ಬಡ ಕುಟುಂಬಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉಚಿತ ಗ್ಯಾಸ್‌ ಸಿಲಿಂಡರ್‌ ನೀಡುವ ಯೋಜನೆ ಹಮ್ಮಿಕೊಂಡಿವೆ. ಆದರೆ, ಆ ಯೋಜನೆ ಗುಡ್ಡಗಾಡು, ಅರಣ್ಯ ಪ್ರದೇಶ ಗ್ರಾಮಗಳಿಗೆ ತಲುಪುವುದಕ್ಕೆ ಮುಂಚಿತವಾಗಿಯೇ ಮಲೆ ಮಹಾದೇಶ್ವರ ವನ್ಯಜೀವಿ ಸಂರಕ್ಷಣಾ ವಲಯದ ಎಲ್ಲಾ ಗ್ರಾಮಗಳು ಅರಣ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಾಯದಿಂದ ಗ್ಯಾಸ್‌ ಸಿಲಿಂಡರ್‌ ಸಂಪರ್ಕ ಪಡೆದುಕೊಂಡಿವೆ. ಇದರ ಜೊತೆಗೆ ಕಾಡಂಚಿನ ಗ್ರಾಮಗಳಲ್ಲೂ ಸೌದೆ ಮುಕ್ತಿಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.

ಕಾಡಂಚಿನ ಗ್ರಾಮಸ್ಥರು ಉರುವಲಿಗೆ ಕಾಡನ್ನೇ ಅವಲಂಭಿಸಿದ್ದಾರೆ. ಇದರಿಂದಾಗಿ ಕಾಡಿನ ಮರಗಳು ಸೇರಿದಂತೆ ವಿಶೇಷ ಸಸ್ಯಸಂಪತ್ತು ಹಾನಿಯಾಗುತ್ತಿದೆ. ಇದರ ಜತೆಗೆ ಮಾನವ- ಪ್ರಾಣಿ ಸಂಘರ್ಷ, ಕಾಡ್ಗಿಚ್ಚಿನಂಥ ಅವಘಡ ಸಂಭವಿಸುತ್ತವೆ.ಇವಕ್ಕೆ ಪರಿಹಾರವೆಂಬಂತೆ ಅರಣ್ಯ ಇಲಾಖೆ ಹಾಗೂ ನೇಚರ್‌ ಕನ್ಸರ್ವೆಷನ್‌ ಫೌಂಡೇಶನ್‌ ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಮಸ್ಥರಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಿಕೊಡುತ್ತಿದ್ದಾರೆ.

ಈಗಾಗಲೇ ವನ್ಯಜೀವ ಧಾಮದ ಪೊನ್ನಾಚಿ, ಚಂಗಡಿ, ಕಬಗಟ್ಟಿ, ಕೊಕಬರೆ,ತೋಕರೆ, ದೊಡ್ಡಾಣೆ, ಇಂಡಿನಾಥ, ಹನೂರು, ಮರೂರು, ತುಳಸಿ ಕೆರೆ,ಮೆದಗಾಣೆ, ದಂಟಳ್ಳಿ ಸೇರಿ ಹಲವು ಗ್ರಾಮದ ಬಹುತೇಕ ಕುಟುಂಬಗಳು ಗ್ಯಾಸ್‌ ಸಿಲಿಂಡರ್‌ ಬಳಸುತ್ತಿವೆ. ಈ ಗ್ರಾಮದ ಕುಟುಂಬಗಳಿಗೆ ಇಲಾಖೆ 5,500 ರೂ.ಬೆಲೆಯ ಗ್ಯಾಸ್‌ ಸ್ಟೌ ಹಾಗೂ ಸಿಲಿಂಡರ್‌ ಅನ್ನು ಉಚಿತವಾಗಿ ನೀಡಿದೆ.

16 ಸಾವಿರ ಗ್ಯಾಸ್‌ ಸಂಪರ್ಕ: ಅರಣ್ಯ ಇಲಾಖೆ ಎಸಿಪಿ, ಟಿಎಸ್‌ಪಿ ಯೋಜನೆ ಯಡಿ 7-8 ವರ್ಷದಿಂದ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಗ್ಯಾಸ್‌ ಸಂಪರ್ಕ ಕೊಡಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ 2,500 ಕುಟುಂಬಗಳಿಗೆ ನೀಡಲಾಗಿದ್ದು,ಮುಂದಿನ ವರ್ಷ 3,000 ಸಂಪರ್ಕಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ಇಲ್ಲಿಯವರೆಗೂ ಒಟ್ಟು 16 ಸಾವಿರ ಕುಟುಂಬಗಳಿಗೆ ಗ್ಯಾಸ್‌ ಸಿಲೆಂಡರ್‌ ಸಂಪರ್ಕ ಸಿಕ್ಕಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಇದರ ಜತೆಗೆ ನೇಚರ್‌ ಕನ್ಸರ್ವೇಶನ್‌ ಫೌಂಡೇಶನ್‌ ಕೂಡ ಅರಣ್ಯ ಸಂರಕ್ಷಣಾ ಕಾರ್ಯಕ್ರಮದಡಿ ವಿವಿಧ ಗ್ರಾಮಗಳ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್‌ ಸ್ಟೌ ಹಾಗೂ ಸಿಲಿಂಡರ್‌ ವಿತರಣೆ ಮಾಡುತ್ತಿದೆ.

ವಾಕಿಟಾಕಿ ನೆರವು
ಮಲೆಮಹಾದೇಶ್ವರ ವನ್ಯಜೀವಿ ಸಂರಕ್ಷಣಾಧಾಮದ ಸುತ್ತಮುತ್ತ ಮಾನವ-ಪ್ರಾಣಿ ಸಂಘರ್ಷ ನಿರಂತರವಾಗಿದೆ. ಈ ವೇಳೆ ಅರಣ್ಯ ಇಲಾಖೆಯನ್ನು ಸಂಪರ್ಕಿಸಲು ಅಲ್ಲಿನ ಜನರಿಗೆ ತೊಂದರೆಯಾಗಿದೆ. ಈ ಸಮಸ್ಯೆ ನಿವಾರಿಸಲು ಅರಣ್ಯ ಇಲಾಖೆ ಆ ಗ್ರಾಮಗಳಿಗೆ ವಾಕಿಟಾಕಿ ನೀಡಲು ಮುಂದಾಗಿದೆ.

ಈಗಾಗಲೇ ವನ್ಯಧಾಮದ ಸುತ್ತಮುತ್ತಲ 35 ಗ್ರಾಮಗಳನ್ನು ಗುರುತಿಸಿದ್ದು, ಗ್ರಾಮದ ವ್ಯಾಪ್ತಿ ಪರಿಗಣಿಸಿ ಒಂದು ಅಥವಾ ಎರಡು ವಾಕಿಟಾಕಿ ನೀಡಲಾಗುತ್ತಿದೆ.ಇದರಿಂದ ಗ್ರಾಮಸ್ಥರ ಸಂಪರ್ಕ ಸಾಧನೆ ಮತ್ತು ಸಂಘರ್ಷದ  ವೇಳೆ ನೆರವು ಸಿಗಲಿದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡಕೊಂಡಲು ತಿಳಿಸಿದರು.

ಕಾಡಿನ ಬಹುತೇಕ ಗ್ರಾಮಗಳಿಗೆ ಈವರೆಗೂ 16 ಸಾವಿರ ಗ್ಯಾಸ್‌ ಸಂಪರ್ಕ ಕಲ್ಪಿಸಿದ್ದು, ಪ್ರಸ್ತಕ ಸಾಲಿನಲ್ಲಿ ಮೂರು ಸಾವಿರ ಗ್ಯಾಸ್‌ ಸಂಪರ್ಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಡಿನ ಸುತ್ತಮುತ್ತಲ ಗ್ರಾಮಗಳನ್ನು ಸೌದೆ ಒಲೆ ಮುಕ್ತ ಗ್ರಾಮವಾಗಿಸುವ ಗುರಿ ಹೊಂದಿದ್ದೇವೆ.
–  ಏಡುಕೊಂಡಲು,
ಉಪ ಅರಣ್ಯ ಸಂರಕ್ಷಣಾಧಿಕಾರಿ

– ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next