ಮೈಸೂರು: ನಮ್ಮಲ್ಲಿ ಸದ್ಯ 3 ಮಿಲಿಯನ್ ಕಾಡು ಇದೆ. ಆದರೆ, 17 ಮಿಲಿಯನ್ ಅರಣ್ಯ ಪ್ರದೇಶ ವ್ಯಾಜ್ಯ, ಒತ್ತುವರಿಯಲ್ಲಿ ಸಿಲುಕಿಕೊಂಡಿದೆ. ಅದು ಅರಣ್ಯ ಇಲಾಖೆಗೆ ಬಂದರೆ ಸಂರಕ್ಷಣೆಗೆ ಅನುಕೂಲವಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹೇಳಿದರು.
ಮಾನಸ ಗಂಗೋತ್ರಿ ಪರಿಸರ ವಿಜ್ಞಾನ ವಿಭಾಗದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಣ್ಯ ಸಂರಕ್ಷಣೆ ಪುಸ್ತಕದಲ್ಲಿ ಇರುವುದಿಲ್ಲ. ಬರಿ ಮಾತಿನಲ್ಲಿ ಅರಣ್ಯ ರಕ್ಷಣೆ ಆಗುವುದಿಲ್ಲ. ಮನೆಯಲ್ಲಿ ಕೂತರೆ ಯಾವುದೇ ಕೆಲಸ ಆಗುವುದಿಲ್ಲ. ಕ್ಷೇತ್ರ ಭೇಟಿ ಮಾಡಬೇಕು. ಸಾಕಷ್ಟು ಅಧ್ಯಯನ ನಡೆಸಬೇಕು. ಆಗ ಮಾತ್ರ ಅರಣ್ಯ ಸಂರಕ್ಷಣೆ ಮಾಡಬಹುದು ಎಂದು ಹೇಳಿದರು.
ಮೈಸೂರು ಮೃಗಾಲಯ ಸರ್ಕಾರದ ಅನುದಾನದಿಂದ ನಡೆಯುತ್ತಿಲ್ಲ. ಝೂಗೆ ಭೇಟಿ ನೀಡುವ ಜನರಿಂದ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಒಂದಷ್ಟು ಸಮಸ್ಯೆ ಆಯಿತು. ಆದರೆ, ಸಾಕಷ್ಟು ದಾನಿಗಳು ನೆರವಿಗೆ ಮುಂದೆ ಬಂದರು ಎಂದು ವಿವರಿಸಿದರು.
ಎಲ್ಲೆಂದರಲ್ಲಿ ಕಸ ಎಸೆಯಬೇಡಿ: ಪರಿಸರ ಎಂದರೆ ಬರೀಯ ಕಾಡಲ್ಲ. ನಮ್ಮ ಸುತ್ತಮುತ್ತ ಇರುವ ಪ್ರದೇಶವೇ ಪರಿಸರ. ಈ ಪರಿಸರವನ್ನು ಸಂರಕ್ಷಣೆ ಮಾಡಬೇಕಿರುವುದು ಪ್ರತಿಯೊಬ್ಬರ ಹೊಣೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿ, ಭೂಮಿಗೆ ಚಿನ್ನಕ್ಕಿಂತ ಬೆಲೆ ಹೆಚ್ಚಿದೆ. ಇದನ್ನು ಕಳೆದುಕೊಳ್ಳಬಾರದು. ಮನುಷ್ಯ ಬದುಕಲು ಇರುವುದೊಂದೆ ಭೂಮಿ. ಇಂತಹ ಧರಣಿಯನ್ನು ಮುಂದಿನ ಪೀಳಿಗೆಗೆ ಉಳಿಸಿಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿದರು. ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಡಾ.ಜಿ.ವಿ.ವೆಂಕಟರಾಮಣ, ಡಾ.ಎಸ್.ಶ್ರೀಕಂಠಸ್ವಾಮಿ, ಡಾ.ಎನ್.ಎಸ್.ರಾಜು ಇದ್ದರು.