ಶಿರಸಿ: ಸಿದ್ದಾಪುರ ಕಾನಸೂರು ಬಳಿ ವಿಧವಾ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಅರಣ್ಯಾಧಿಕಾರಿಗಳ ನಡೆ ವಿರೋಧಿಸಿ ಜಿಲ್ಲಾ ಅತಿಕ್ರಮಣದಾರರ ಹೋರಾಟ ವೇದಿಕೆ ಅಧ್ಯಕ್ಷ ಏ. ರವೀಂದ್ರ ನಾಯ್ಕರ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಅರಣ್ಯ ಅತಿಕ್ರಮಣದಾರರು ಪ್ರತಿಭಟನೆ ನಡೆಸಿದರು.
ಕಾನಸೂರಿನ ಗೀತಾ ಗಣಪತಿ ನಾಯ್ಕ ಮೇಲೆ ದೌರ್ಜನ್ಯ ಎಸಗಿದ ಅಧಿಕಾರಿಗಳನ್ನು ಅಮಾನತ್ತುಗೊಳಸಿವುದರ ಜೊತೆಯಲ್ಲಿ ಇಂತಹ ಅಮಾನವೀಯ ಕೈತ್ಯಗಳು ಮತ್ತೂಮ್ಮೆ ಮರುಕಳಿಸದಂತೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎ.ರವೀಂದ್ರ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ 80ಸಾವಿರಕ್ಕೂ ಅಧಿಕ ಅತಿಕ್ರಮಣದಾರರು ಹಕ್ಕು ಪತ್ರ ವಿತರಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸುವುದರ ಜೊತೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಸುವಂತಿಲ್ಲ ಎಂದು ಉಚ್ಚನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದರೂ ಅಧಿಕಾರಿಗಳು ಅತಿಕ್ರಮಣದಾರರಿಗೆ ಅನಗತ್ಯ ತೊಂದರೆ ನೀಡುತ್ತಿರುವುದು ಬೇಸರದ ಸಂಗತಿ. ಮಹಿಳೆ ಮೇಲೆ ಅನಗತ್ಯ ಕಾನೂನು ಪೌರುಷ ತೋರುವ ಅಧಿಕಾರಿಗಳದ್ದು ಅಮಾನವೀಯ ಕೃತ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕುಗಳ ಮತ್ತು ಮಹಿಳಾ ಆಯೋಗದಲ್ಲಿಯೂ ಪ್ರಕಣರಣ ದಾಖಲಿಸುವುದಾಗಿ ತಿಳಿಸಿದರು.
ಭಟ್ಕಳದ ರಾಮಾ ಮೊಗೇರ್, ಜಿಲ್ಲೆಯಲ್ಲಿ ಶೇ.80 ರಷ್ಟು ಅರಣ್ಯ ಭೂಮಿ ಇರುವ ಮಾಹಿತಿ ತಿಳಿದಾಗ್ಯೂ ಸಹ ಅಧಿಕಾರಿಗಳು ಜಿಲ್ಲೆಯ ಜನರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ಇದೇರೀತಿ ಮುಂದುವರಿದಲ್ಲಿ ಅಧಿಕಾರಿಗಳ ಮನೆಯಲ್ಲೆ ವಾಸ್ತವ್ಯ ಹೂಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಸ್ಪಂದನೆ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ ಹೆಗಡೆ, ಅರಣ್ಯ ಅಧಿಕಾರಿಗಳು ಕಾನೂನಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುತ್ತೇವೆ. ಕಾನಸೂರಿನ ಗೀತಾ ನಾಯ್ಕ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರತಿಭಟನಾ ಸ್ಥಳದಲ್ಲಿಯೇ ಪರಿಶೀಲಿಸಿ, ಆಕೆಯ ವಾಸ್ತವ್ಯಕ್ಕೆ ಸಂಬಂಧಿಸಿ ಇಲಾಖೆಯಿಂದ ಯಾವುದೆ ಆತಂಕ ನೀಡುವುದಿಲ್ಲ. ಕಾನಸೂರು ಪ್ರಕರಣದಲ್ಲಿ ಭಾಗಿಯಾದ ಇಲಾಖೆ ಸಿಬ್ಬಂದಿಗಳನ್ನು ಕೂಡಲೆ ವರ್ಗಾವಣೆ ಮಾಡುತ್ತೇವೆ ಎಂದರು.
ಜಿಪಂ ಸದಸ್ಯ ಜಿ.ಎನ್ ಹೆಗಡೆ ಮುರೇಗಾರ್, ಶೋಭಾ ನಾಯ್ಕ. ಮಂಜುನಾಥ ಮರಾಠಿ ಇತರರು ಇದ್ದರು.