Advertisement

ಅರಣ್ಯೀಕರಣ ಹೆಚ್ಚಳಕ್ಕೆ 100 ಕೋಟಿ ರೂ.: ಸಿಎಂ ಬೊಮ್ಮಾಯಿ

08:37 PM Sep 11, 2022 | Team Udayavani |

ಬೆಂಗಳೂರು: ಈ ವರ್ಷ 100 ಕೋಟಿ ರೂ.ಗಳಲ್ಲಿ ಅರಣ್ಯೀಕರಣ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದ ಮಲ್ಲೇಶ್ವರದಲ್ಲಿರುವ ಅರಣ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ನಾಲ್ಕು ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಬಂಜರು ಭೂಮಿ ಇದ್ದು, ಇದನ್ನು ನಾವು ಅರಣ್ಯೀಕರಣ ಮಾಡುವ ಮೂಲಕ ಅರಣ್ಯ ಪ್ರದೇಶ ಹೆಚ್ಚಿಸಬಹುದು. ಬಹಳಷ್ಟು ಗುಡ್ಡಗಾಡುಗಳಿವೆ. ಅಲ್ಲಿ ಮೂಲ ಗಿಡಗಳನ್ನು ಬೆಳೆಸುವ ಮೂಲಕ ಉತ್ತಮಗೊಳಿಸಬಹುದು. ಟಾಟಾ ಸಂಸ್ಥೆಯ ಕಬ್ಬಿಣದ ಅದಿರಿನ ಗಣಿಗಳು ಜೆಮ್‌ಶೇಡ್‌ಪುರದಲ್ಲಿದ್ದು, ಅಲ್ಲಿ ಎಲ್ಲೆಡೆ ಹಸಿರಿನಿಂದ ತುಂಬಿದೆ. ಗಣಿಗಳಲ್ಲಿ ಮಾಡಬಹುದಾದರೆ ಗುಡ್ಡಗಾಡಿನಲ್ಲಿ ಸಾಧ್ಯವಿಲ್ಲವೇ? ಇಚ್ಚಾಶಕ್ತಿ ಇದ್ದರೆ ಅರಣ್ಯ ಪ್ರದೇಶ ಹೆಚ್ಚಿಸೋಣ. ಮುಂದಿನ ಜನಾಂಗಕ್ಕೆ ಇದಕ್ಕಿಂತ ಹೆಚ್ಚಿನ ಕೊಡುಗೆ ಮತ್ತೊಂದಿಲ್ಲ ಎಂದು ಹೇಳಿದರು.

ಒಂದು ವರ್ಷದಲ್ಲಿ ಆಗುವ ಪರಿಸರ ನಷ್ಟವನ್ನು ಅದೇ ವರ್ಷ ತುಂಬುವ ಕೆಲಸ ಮಾಡಬೇಕು. ದೇಶದಲ್ಲಿ ಪರಿಸರ ಆಯವ್ಯಯ ರೂಪಿಸಿದ ಪ್ರಥಮ ರಾಜ್ಯ ನಮ್ಮದು. ನೂರು ಕೋಟಿ ರೂ.ಗಳನ್ನು ಇದಕ್ಕೆ ಮೀಸಲಿಡಲಾಗಿದೆ.

ಈಗಾಗಲೇ ಪರಿಸರ ಆಯವ್ಯಯ ಮಾಡುವ ಬಗೆಯನ್ನು ಇಲಾಖೆ ರೂಪಿಸಿದೆ. ಸರ್ಕಾರ ಕ್ರಿಯಾಯೋಜನೆಗೆ ಅನುಮೋದನೆ ಕೂಡ ನೀಡಿದೆ. ಅರಣ್ಯ ಸೂಕ್ಷ್ಮ ಪ್ರದೇಶಗಳನ್ನು ಉಳಿಸಿಕೊಳ್ಳಲು ವಿಶೇಷ ಕಾರ್ಯಕ್ರಮವನ್ನು ಇಲಾಖೆ ಮಾಡಿದೆ. ಅರಣ್ಯ ಮತ್ತು ಪರಿಸರ ಇಲಾಖೆ ನೈಸರ್ಗಿಕ ಸಂಪತ್ತು ರಕ್ಷಿಸಿ, ಪರಿಸರ ನಷ್ಟ ತುಂಬುವ ಪ್ರಯತ್ನವನ್ನು ಆಸಕ್ತಿ ವಹಿಸಿ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವರ್ಷ ಕ್ರಿಯಾಯೋಜನೆ ಅನುಷ್ಠಾನಗೊಳಿಸುವ ಮೂಲಕ ಹೊಸ ಮಾದರಿ ಸಿದ್ಧಪಡಿಸಿ ಬರುವ ದಿನಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಬಹುದು ಎಂದರು.

Advertisement

ಅರಣ್ಯ ಇಲಾಖೆ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಕಡಿಮೆ ಮಾಡುವತ್ತ ಶ್ರಮಿಸಬೇಕು. ಆನೆಗಳ ಕಾಟ ದೊಡ್ಡ ಪ್ರಮಾಣದಲ್ಲಿದೆ. ಅವುಗಳನ್ನು ರಕ್ಷಣೆ ಮಾಡಲು ಹೊಸ ವಿಧಾನ ಬಳಸಲು 100 ಕೋಟಿ ರೂ.ಗಳನ್ನು ಇದಕ್ಕಾಗಿಯೇ ಒದಗಿಸಲಾಗಿದೆ. ಮಾಜಿ ಸಚಿವ ಉಮೇಶ್‌ ಕತ್ತಿ ಬಹಳ ಆಸಕ್ತಿ ವಹಿಸಿದ್ದರು. ಬೇಲಿ ಹಾಕುವ ಹೊಸ ವಿಧಾನಗಳ ಬಗ್ಗೆ ಚರ್ಚೆ ಮಾಡಿ ಬಂಡೀಪುರದಲ್ಲಿ ಅದರ ಪ್ರಯೋಗವೂ ನಡೆಯುತ್ತಿದೆ. ಉಮೇಶ್‌ ಕತ್ತಿ ಅವರು ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅವರ ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸಿ ಯಾವುದೇ ರಾಜಿಯನ್ನು ಮಾಡಿಕೊಳ್ಳದ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು.

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್‌ ಕಿಶೋರ್‌ಸಿಂಗ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next