ಬೆಂಗಳೂರು: ಅರಣ್ಯ ಹುತಾತ್ಮರ ಕುಟುಂಬಕ್ಕೆ 30 ಲಕ್ಷ ಇದ್ದ ಪರಿಹಾರದ ಮೊತ್ತವನ್ನು 50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ನಗರದ ಮಲ್ಲೇಶ್ವರದಲ್ಲಿರುವ ಅರಣ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಈ ಹಿಂದೆ ಅರಣ್ಯ ಹುತಾತ್ಮರ ಕುಟುಂಬದ ಸ್ಥಿರತೆ ಮತ್ತು ಭದ್ರತೆ ದೃಷ್ಟಿಯಿಂದ 20 ಲಕ್ಷ ರೂ.ಗಳಿದ್ದ ಪರಿಹಾರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 30 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದರು. ಈಗ ಅದನ್ನು 50 ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದು ಪ್ರಕಟಿಸಿದರು.
“ಅರಣ್ಯ ಸಿಬ್ಬಂದಿ ಕಲ್ಯಾಣ, ಹುತಾತ್ಮರ ಅವಲಂಬಿತ ಕುಟುಂಬದಲ್ಲಿ ಒಬ್ಬರಿಗೆ ನೇಮಕಾತಿ ಸೇರಿದಂತೆ ಎಲ್ಲವನ್ನೂ ಸರ್ಕಾರ ಅತ್ಯಂತ ಸಹಾನುಭೂತಿಯಿಂದ ಮಾಡಲಿದೆ. ನೀವು ಅರಣ್ಯ ರಕ್ಷಣೆ ಮಾಡಿ, ಸರ್ಕಾರ ನಿಮ್ಮ ರಕ್ಷಣೆ ಮಾಡಲಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಶೇ. 21ರಷ್ಟಿರುವ ಅರಣ್ಯ ಪ್ರದೇಶವನ್ನು ಶೇ. 30ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.