Advertisement

ನಿರಾಶ್ರಿತರಾಗುವ ಭೀತಿಯಲ್ಲಿ ಅರಣ್ಯ ಅತಿಕ್ರಮಣದಾರರು

11:01 AM Jan 15, 2019 | Team Udayavani |

ಕುಮಟಾ: ವಾಸ್ತವ್ಯ ಹಾಗೂ ಸಾಗುವಳಿಗಾಗಿ ತಾಲೂಕಿನಾದ್ಯಂತ ಅರಣ್ಯ ಭೂಮಿ ಅತಿಕ್ರಮಿಸಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ನಿರೀಕ್ಷೆಯಲ್ಲಿರುವ ಅತಿಕ್ರಮಣದಾರರಲ್ಲಿ ನಿರಂತರ ಅರ್ಜಿಗಳು ತಿರಸ್ಕಾರವಾಗಿರುವುದರಿಂದ ಅರಣ್ಯ ಅತಿಕ್ರಮಣದಾರರು ಆತಂಕದಲ್ಲಿದ್ದು, ನಿರಾಶ್ರಿತರಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ.

Advertisement

ಕುಮಟಾ ತಾಲೂಕಿನಾದ್ಯಂತ ಒಟ್ಟೂ 6602 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಪಾರಂಪರಿಕ 6204, ಪರಿಶಿಷ್ಟ ಪಂಗಡ 1 ಹಾಗೂ ಸಮೂಹ ಉದ್ದೇಶಕ್ಕೆ ಸಲ್ಲಿಸಿದ 397 ಅರ್ಜಿಗಳು ಆಗಿದ್ದು, ಅವುಗಳಲ್ಲಿ 5674 ತಿರಸ್ಕೃತವಾಗಿದ್ದು, ಅವುಗಳಲ್ಲಿ 289 ಸಮುದಾಯ ಉದ್ದೇಶಕ್ಕೆ ಹಾಗೂ 5385 ಪಾರಂಪರಿಕ ಅರಣ್ಯವಾಸಿಗಳಿಗೆ ಸೇರಿದ್ದಾಗಿದೆ.

ಜೀವನ ಪೂರ್ತಿ ಶ್ರಮದಿಂದ ಗಳಿಸಿರುವಂತಹ ಹಣ, ಅರಣ್ಯಭೂಮಿಗೆ ತೊಡಗಿಸಿ ಜೀವನಕ್ಕೆ ಆಧಾರವಾಗಿರುವ ಅತಿಕ್ರಮಣ ಭೂಮಿಯನ್ನೇ ನಂಬಿರುವ ಕುಟುಂಬಗಳಲ್ಲಿ ಡಿಸೆಂಬರ್‌ ಅಂತ್ಯದವರೆಗೆ ತಾಲೂಕಿನಲ್ಲಿ ಶೇ.90.32 ರಷ್ಟು ಅರ್ಜಿಗಳು ತಿರಸ್ಕಾರವಾಗಿರುವುದು ಆಘಾತಕಾರಿಯಾಗಿದೆ. ಬಂದಿರುವ ಅರ್ಜಿಗಳಲ್ಲಿ ಒಟ್ಟೂ 5963 ರಷ್ಟು ತಿರಸ್ಕೃತಗೊಂಡಿದ್ದು ಕೇವಲ 26 ಅರ್ಜಿಗಳಿಗೆ ಮಾನ್ಯತೆ ದೊರಕಿರುವುದನ್ನು ಅವಲೋಕಿಸಿದರೆ ಮಂಜೂರಿ ಪ್ರಗತಿ ಕುಂಠಿತವಾಗಿದ್ದು ಅರಣ್ಯವಾಸಿಗಳು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕರೆದಿರುವ ಅತಿಕ್ರಮಣದಾರರ ಮಹತ್ವದ ಸಭೆ ಮುಂದಿನ ಹೋರಾಟಕ್ಕೆ ದಿಕ್ಸೂಚಿ ಸಭೆಯಾಗುವುದಲ್ಲದೇ ಈಗಾಗಲೇ ಸವೋಚ್ಚ ನ್ಯಾಯಾಲಯದಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರಗೊಂಡಿರುವ ಅತಿಕ್ರಮಣ ಭೂಮಿಯಿಂದ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬೇಕೆಂಬ ಅಂತಿಮ ವಿಚಾರಣೆ ಜನೆವರಿ ತಿಂಗಳಲ್ಲಿರುವುದರಿಂದ ಜನಪ್ರತಿನಿಧಿ ಹಾಗೂ ಸರ್ಕಾರ ಇಂತಹ ಸಂಕಷ್ಟ ಸಮಯದಲ್ಲಿಯೂ ಸ್ಪಂದಿಸದೇ ಇರುವುದಕ್ಕೆ ಅತಿಕ್ರಮಣದಾರರ ಸಭೆ ಕರೆಯಲಾಗಿದೆ.

ಜಾಗೃತಿ ಕಾರ್ಯಕ್ರಮ: ಈ ಹಿನ್ನೆಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕೃತವಾಗಿರುವ ಅರ್ಜಿಗಳ ಮಾಹಿತಿ ಹಾಗೂ ಕಾನೂನಾತ್ಮಕ ತಿಳಿವಳಿಕೆ ನೀಡುವ ದಿಶೆಯಲ್ಲಿ ಹೋರಾಟ ಸಮಿತಿಯು ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ತಿಳಿಸಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕೃತವಾಗಿರುವ ಅರ್ಜಿಗಳ ಮಾಹಿತಿ ಹಾಗೂ ಕಾನೂನಾತ್ಮಕ ತಿಳಿವಳಿಕೆ ನೀಡುವ ದಿಶೆಯಲ್ಲಿ ಹೋರಾಟ ಸಮಿತಿಯು ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಪ್ರತಿ ತಾಲೂಕು ಮಟ್ಟದಲ್ಲಿಯೂ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next