Advertisement

ನಗರ ಹಸುರೀಕರಣಕ್ಕೆ ಅರಣ್ಯ ಇಲಾಖೆ ಒತ್ತು; ಮಂಗಳೂರಿನಲ್ಲಿ 2,000 ಹಣ್ಣಿನ ಗಿಡಗಳ ನಾಟಿ

11:08 AM Jul 28, 2020 | mahesh |

ಮಹಾನಗರ: ಅಭಿವೃದ್ಧಿ ದೃಷ್ಟಿಯಿಂದ ಮರಗಳು ನಾಶವಾಗುತ್ತಿರುವ ಈ ಸಮಯದಲ್ಲಿ ಮಂಗಳೂರು ನಗರ ಹಸುರೀಕರಣಕ್ಕೆ ಅರಣ್ಯ ಇಲಾಖೆ ಒತ್ತು ನೀಡುತ್ತಿದೆ. ಈ ಬಾರಿ ಅರಣ್ಯ ಇಲಾಖೆ ವತಿಯಿಂದ ಮಂಗಳೂರಿನ ವ್ಯಾಪ್ತಿಯಲ್ಲಿ ಒಟ್ಟು 6 ಸಾವಿರ ಗಿಡ ನೆಡಲಾಗಿದ್ದು, ಇದರಲ್ಲಿ ಸುಮಾರು 2,000 ಹಣ್ಣಿನ ಗಿಡಗಳಿಗೆ ಆದ್ಯತೆ ನೀಡಲಾಗಿದೆ.

Advertisement

ಅರಣ್ಯ ಇಲಾಖೆಯು ಪ್ರತಿವರ್ಷ ಮಳೆಗಾಲ ಆರಂಭದಲ್ಲಿ ಜಿಲ್ಲಾದ್ಯಂತ ಗಿಡಗಳನ್ನು ನೆಡುತ್ತದೆ. ಈ ಬಾರಿ ವಿಶೇಷ ಎಂಬಂತೆ ಮಂಗಳೂರಿನಿಂದ ಹಾದುಹೋಗುವ ಸುಮಾರು 25 ಕಿ.ಮೀ. ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ ನಡುವಿನಲ್ಲಿ, ಹೆದ್ದಾರಿ ಬದಿಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಅದರಲ್ಲೂ ಮುಖ್ಯವಾಗಿ ಹಲಸು, ನೇರಳೆ, ಪುನರ್ಪುಳಿ, ಉಂಡೆ ಹುಳಿ, ಮಂತು ಹುಳಿ, ರೆಂಜ ಸಹಿತ ವಿವಿಧ ರೀತಿಯ ಹಣ್ಣಿನ ಗಿಡಗಳಿಂದ ಕೂಡಿದೆ. ಪಕ್ಷಿಗಳಿಗೆ, ಪ್ರಾಣಿಗಳಿಗೆ ಸಹಿತ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಮಂಗಳೂರು ನಗರ ಮತ್ತು ತಾಲೂಕಿನಾದ್ಯಂತ ಹಣ್ಣಿನ ಗಿಡಗಳ ಜತೆಗೆ ಸುಮಾರು ಒಂದು ಸಾವಿರದಷ್ಟು ಹೂವಿನ (ಆಲಂಕಾರಿಕ)ಗಿಡಗಳನ್ನು ನೆಡಲಾಗಿದ್ದು, ಮೂರು ಸಾವಿರದಷ್ಟು ಸ್ಥಳೀಯವಾಗಿ, ಪಶ್ಚಿಮಘಟ್ಟದಲ್ಲಿ ಸಿಗುವ ಗಿಡಗಳನ್ನು ನೆಡಲಾಗಿದೆ.

ಮಂಗಳೂರು ಆರ್‌ಎಫ್‌ಒ ಆರ್‌. ಶ್ರೀಧರ್‌ ಅವರು ಈ ಬಗ್ಗೆ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಮಂಗಳೂರಿನಲ್ಲಿ ಈ ಬಾರಿ ಒಟ್ಟು 6 ಸಾವಿರ ಗಿಡಗಳ ಪೈಕಿ 2 ಸಾವಿರದಷ್ಟು ಹಣ್ಣಿನ ಗಿಡ ನೆಡಲು ಆದ್ಯತೆ ನೀಡಿದ್ದೇವೆ. ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳಿಗೆ 2 ವರ್ಷಗಳ ಕಾಲ ಅರಣ್ಯ ಇಲಾಖೆಯಿಂದಲೇ ಪೋಷಣೆ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ನಿಟ್ಟೆ ಡೀಮ್ಡ್ ಯೂನಿವರ್ಸಿಟಿಯು 2011ರ ಜನಗಣತಿಗೆ ಅನುಗುಣವಾಗಿ 2016ರಲ್ಲಿ ಸರ್ವೆಯೊಂದನ್ನು ನಡೆಸಿತ್ತು. ಈ ವೇಳೆ ಮಂಗಳೂರಿನ ಬಂದರು, ಕುದ್ರೋಳಿ ವಾರ್ಡ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮರಗಳಿವೆ ಎಂಬ ವಿಷಯ ಬೆಳಕಿಗೆ ಬಂತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯು ಇದೀಗ ಮಂಗಳೂರು ನಗರದ ಹಸುರೀಕರಣಕ್ಕೂ ಆದ್ಯತೆ ನೀಡಲು ತೀರ್ಮಾನಿಸಿದೆ.

Advertisement

ಜಿಲ್ಲೆಯಲ್ಲಿ 6 ಲಕ್ಷ ಗಿಡ ನಾಟಿ
ದ.ಕ. ಜಿಲ್ಲೆಯ ಅರಣ್ಯ ಇಲಾಖೆ ವಲಯಗಳಾದ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ಪಂಜ, ಸುಳ್ಯ, ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶಗಳ ಒಟ್ಟು 1,400 ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 6 ಲಕ್ಷ ವಿವಿಧ ತಳಿಯ ಗಿಡಗಳನ್ನು ನೆಡಲಾಗಿದೆ. ಪಶ್ಚಿಮ ಘಟ್ಟದಲ್ಲಿ ಸಿಗುವಂತಹ ಸಸ್ಯ, ಹಣ್ಣಿನ ಗಿಡಗಳು, ಆಲ, ಅರಳಿ ಸಹಿತ ವಿವಿಧ ತಳಿಯ ಗಿಡಗಳನ್ನು ನೆಡುವ ಯೋಜನೆ ಅರಣ್ಯ ಇಲಾಖೆಗಿದೆ. ಮೂರು ವರ್ಷಗಳ ಕಾಲ ಗಿಡಗಳ ನಿರ್ವಹಣೆ ಮಾಡಲಿದೆ.

ಹಸುರಿಗೆ ಆದ್ಯತೆ
ಮಂಗಳೂರು ವ್ಯಾಪ್ತಿಯಲ್ಲಿ ಸುಮಾರು 6,000ಗಳಷ್ಟು ಗಿಡಗಳನ್ನು ನೆಡಲಾಗಿದೆ. ಮುಖ್ಯವಾಗಿ ಸುಮಾರು 2,000ದಷ್ಟು ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಉಳಿದಂತೆ ಹೂವಿನ ಗಿಡ, ಪಶ್ಚಿಮಘಟ್ಟ ತಪ್ಪಲಿನ ಸಸ್ಯಗಳನ್ನು ನೆಟ್ಟಿದ್ದೇವೆ. ಪರಿಸರ ಪ್ರೇಮಿಗಳು ಕೂಡ ನಮ್ಮ ಜತೆ ಕೈಜೋಡಿಸಿದ್ದಾರೆ. ನಗರ ಪ್ರದೇಶವನ್ನು ಹಸುರಾಗಿಸುವ ಉದ್ದೇಶಕ್ಕೆ ಮಹತ್ವ ನೀಡುತ್ತೇವೆ.
– ಕರಿಕಾಳನ್‌, ದ.ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next