Advertisement
ಅರಣ್ಯ ಇಲಾಖೆಯು ವೈಲ್ಡ್ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯುಟಿಐ) ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಗರುಡಾಕ್ಷಿ ಆನ್ಲೈನ್/ ಡಿಜಿಟಲ್ ಎಫ್ಐಆರ್ ವ್ಯವಸ್ಥೆಗೆ ಮಂಗಳವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಅನಂತರ ಈ ವಿಷಯ ತಿಳಿಸಿದ ಅವರು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅರಣ್ಯ ಅಪರಾಧ ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ಆಗುವುದನ್ನು ಖಾತ್ರಿಪಡಿಸಲು ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ, ಬೆಂಗಳೂರು ಅರಣ್ಯ ಸಂಚಾರಿ ದಳ, ಭದ್ರಾವತಿ, ಶಿರಸಿ ವಿಭಾಗ ಮತ್ತು ಮಲೈಮಹದೇಶ್ವರ ವನ್ಯಜೀವಿ ವಿಭಾಗಗಳಲ್ಲಿ ಜಾರಿಗೊಳಿಸಲಾಗುತ್ತದೆ. ಹಂತ-ಹಂತವಾಗಿ ಉಳಿದೆಡೆ ವಿಸ್ತರಿಸಲಾಗುವುದು ಎಂದರು.
ಪ್ರಸ್ತುತ ಆರ್ಎಫ್ಒ ಮತ್ತು ಅದಕ್ಕಿಂತ ಮೇಲಿನ ಹಂತದಲ್ಲಿರುವ ಅರಣ್ಯ ಇಲಾಖೆ ಸಿಬಂದಿಗೆ ದೂರು ದಾಖಲಿಸಲು ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯಾವ ವಲಯದಲ್ಲಿ ಹೆಚ್ಚು ಆನ್ಲೈನ್ ಎಫ್ಐಆರ್ ದಾಖಲಿಸಿ, ನಿಗದಿತ ಕಾಲಮಿತಿಯೊಳಗೆ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುತ್ತಾರೋ ಆ ವಲಯದ ಆರ್ಎಫ್ಒಗಳಿಗೆ ಭಡ್ತಿ ನೀಡುವಾಗ, ಇದನ್ನು ದಕ್ಷತೆಯ ಮಾನದಂಡವಾಗಿ ಪರಿಗಣಿಸುವ ಚಿಂತನೆ ಇದೆ ಎಂದ ಸಚಿವರು, ಬರುವ ದಿನಗಳಲ್ಲಿ ಸಾಮಾನ್ಯರಿಗೂ ಆನ್ಲೈನ್ ಮೂಲಕವೇ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.