Advertisement

ವನ್ಯಜೀವಿಗಳ ಮೃತದೇಹ ಇನ್ನು ಮುಂದೆ ಸುಡುವಂತಿಲ್ಲ; ಹೂಳುವಂತೆಯೂ ಇಲ್ಲ..!

08:01 AM Apr 13, 2022 | Team Udayavani |

ಬೆಂಗಳೂರು: ಇನ್ನು ಮುಂದೆ ವನ್ಯಜೀವಿಗಳ ಮೃತದೇಹಗಳನ್ನು ಸುಡುವಂತಿಲ್ಲ. ಹಾಗೆಯೇ ಹೂಳು ವಂತೆಯೂ ಇಲ್ಲ. ವನ್ಯಜೀವಿಗಳ ಮೃತದೇಹಗಳನ್ನು ಕೊಳೆಯಲು ಬಿಟ್ಟು ಇತರ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಿಸಬೇಕು. ಏಕೆಂದರೆ, ವನ್ಯಪ್ರಾಣಿಗಳ ಮೃತದೇಹಗಳು ಕೊಳೆತ ಅನಂತರ ಪೋಷಕಾಂಶಗಳಿಂದ ಸಮೃದ್ಧವಾಗುತ್ತವೆ.

Advertisement

ಹೀಗೆಂದು ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ವನ್ಯಜೀವಿ ತಜ್ಞ ಡಾ| ಸಂಜಯ್‌ ಗುಬ್ಬಿ ಅವರ ಮನವಿಯಂತೆ ಅರಣ್ಯ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

ನಿರ್ಣಾಯಕ ಸಂಪನ್ಮೂಲ
ಡಾ| ಸಂಜಯ್‌ ಗುಬ್ಬಿಯವರ ಅಭಿಪ್ರಾಯದಂತೆ ವನ್ಯಜೀವಿಗಳ ಮೃತದೇಹಗಳು ಪರಿಸರ ವ್ಯವಸ್ಥೆ ಕಾರ್ಯನಿರ್ವಹಣೆಗೆ ನಿರ್ಣಾಯಕ ಸಂಪನ್ಮೂಲ ವಾಗಿರುವುದಲ್ಲದೇ ವನ್ಯಜೀವಿಗಳು ತಮ್ಮ ಸಾವಿನ ಅನಂತರವೂ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇನ್ನು ಮುಂದೆ ಎಲ್ಲ ವನ್ಯಜೀವಿಗಳ ಮೃತದೇಹಗಳನ್ನು ನೈಸರ್ಗಿಕ ಆವಾಸಸ್ಥಾನಗಳಲ್ಲಿ ಸುಡುವ ಅಥವಾ ಹೂಳುವ ಪದ್ಧತಿಯನ್ನು ತತ್‌ಕ್ಷಣದಿಂದ ನಿಲ್ಲಿಸಿ, ಅರಣ್ಯದೊಳಗೆ ಕೊಳೆಯಲು ಬಿಟ್ಟು, ಮೃತದೇಹ ಅವಲಂಬಿಸಿ ಬದುಕುವ ಪ್ರಾಣಿ-ಪಕ್ಷಿಗಳ ಆಹಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಸೂಚಿಸಿದೆ. ಈ ಮಾರ್ಗಸೂಚಿಗಳು ರಾಷ್ಟ್ರೀಯ ಪ್ರಾಣಿ ಹುಲಿಗೆ ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ
ಸಸ್ಯಹಾರಿ ಮತ್ತು ಮಾಂಸಹಾರಿ ವನ್ಯಪ್ರಾಣಿಗಳು ಸ್ವಾಭಾವಿಕ ಅಥವಾ ಅಸ್ವಾಭಾವಿಕವಾಗಿ ಮೃತಪಟ್ಟರೆ ಅವುಗಳ ಮೃತದೇಹವನ್ನು ಸುಡಲಾಗುತ್ತದೆ. ಆದರೆ, ವನ್ಯಪ್ರಾಣಿಗಳ ಮೃತದೇಹ ಕೊಳೆತ ಅನಂತರ ಪೋಷಕಾಂಶಗಳಿಂದ ಸಮೃದ್ಧವಾಗಿ ಹಲವಾರು ಜಾತಿಯ ಪ್ರಾಣಿ, ಪಕ್ಷಿಗಳಿಗೆ ಆಹಾರವನ್ನು ಒದಗಿಸಿ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅದಲ್ಲದೇ, ಪ್ರಮುಖವಾಗಿ ರಣಹದ್ದುಗಳು ವನ್ಯಜೀವಿ ಮೃತದೇಹದ ಶರೀರದ ಆಹಾರವನ್ನು ಸೇವಿಸಿ ಅದರ ನೈಸರ್ಗಿಕ ಸಂಖ್ಯೆ ಹೆಚ್ಚಿಸಿಕೊಳ್ಳುತ್ತದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next