ಚಿಕ್ಕೋಡಿ: ಕೃಷ್ಣಾ ನದಿ ತಟದ ಚೆಂದೂರ, ಯಡೂರ ಮತ್ತು ಯಡೂರವಾಡಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಕಳೆದ ಒಂದು ವಾರದಿಂದ ಜನ ಭಯ ಭೀತಿಯಲ್ಲಿದ್ದು, ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕೃಷ್ಣಾ ನದಿ ತೀರದ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಚಿರತೆ ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿದೆ ಎಂದು ಜನ ಅಲ್ಲಲ್ಲಿ ಮಾತನಾಡುವುದು ಕಂಡು ಬಂದಿತ್ತು. ಕುರಿ, ಆಡು ಮತ್ತು ನಾಯಿ ಮೇಲೆ ದಾಳಿ ಮಾಡಿದ ಮೇಲೆ ಚಿರತೆ ಇರುವುದು ಖಚಿತವಾಗಿತ್ತು. ಈಗಾಗಲೇ ಮೂರು ಗ್ರಾಮದಲ್ಲಿ ಎರಡರಿಂದ ಮೂರು ನಾಯಿ ಮತ್ತು ಮೇಕೆಗಳನ್ನು ಎಳೆದು ತಿಂದಿರುವುದು ಖಚಿತವಾಗಿದೆ.
ಸುದ್ದಿ ತಿಳಿದ ಕೂಡಲೇ ಚಿಕ್ಕೋಡಿ ಅರಣ್ಯ ಇಲಾಖೆ ಸಿಬ್ಬಂದಿಗಳು ಚೆಂದೂರ. ಚಂದೂರ ಟೇಕ ಮತ್ತು ಯಡೂರ ಗ್ರಾಮದಲ್ಲಿ ಸಂಚರಿಸಿ ಪರಿಶೀಲಿಸಿದ್ದು. ಚಿರತೆಯ ಹೆಜ್ಜೆ ಗುರ್ತು ಕಾಣಿಸಿವೆ. ನಿನ್ನೆ ರಾತ್ರಿ ಚಿರತೆ ನಾಯಿ ಮೇಲೆ ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಮೂರು ಗ್ರಾಮದಲ್ಲಿ ಚಿರತೆ ಹಿಡಿಯುವ ಮೂರು ಬೋನ್ ಇಟ್ಟು ಹಿಡಿಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.
ರಾತ್ರಿ ಹೊತ್ತು ಜನರು ಹೊರಬರದಂತೆ ಡಂಗೂರ: ರಾತ್ರಿ ಹೊತ್ತು ಒಬ್ಬೊಬ್ಬರಾಗಿ ತಿರುಗಾಡಬಾರದೆಂದು ಆಯಾ ಗ್ರಾಮ ಪಂಚಾಯತಿ ವತಿಯಿಂದ ಡಂಗೂರ ಸಾರಿದ್ದಾರೆ. ಕೃಷ್ಣಾ ನದಿ ನೀರಿನ ಮಟ್ಟ ಇಳಿಕೆ ಕಂಡಿರುವುದರಿಂದ ಜಮೀನಿಗೆ ನೀರಿನ ಪಂಪ್‌ಸೆಟ್ ಚಾಲು ಮಾಡಲು ರೈತರು ಹೊಲಗಳತ್ತ ಹೋಗುತ್ತಾರೆ. ಚಿರತೆ ಇರುವುದರಿಂದ ಜನ ಆತಂಕಗೊಂಡಿದ್ದು. ರಾತ್ರಿ ಹೊತ್ತು ನಾಲ್ಕೈದು ಜನ ಕೂಡಿಕೊಂಡು ಹೊರಗೆ ಹೋಗಬೇಕೆಂದು ಡಂಗೂರ ಸಾರಿದ್ದಾರೆ.
ಶೀಘ್ರವಾಗಿ ಹಿಡಿಯುತ್ತೇವೆ: ಯಡೂರ, ಚೆಂದೂರ ಮತ್ತು ಚೆಂದೂರ ಟೇಕ ಗ್ರಾಮಗಳಲ್ಲಿ ಚಿರತೆ ಇರುವುದು ನಿಜ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಎಲ್ಲ ಕ್ರಮ ಕೈಗೊಂಡಿದೆ. ಬೋನು ಮತ್ತು ಕ್ಯಾಮೆರಾ ಅಳವಡಿಸಿದ್ದು, ಶೀಘ್ರವಾಗಿ ಚಿರತೆ ಹಿಡಿಯುತ್ತೇವೆ. ಜನರು ಹೆದರುವ ಅವಶ್ಯಕತೆ ಇಲ್ಲ. –
ಪ್ರಶಾಂತ ಗೌರಾಣಿ ಆರ್‌ಎಫ್‌ಒ, ಚಿಕ್ಕೋಡಿ