Advertisement
ಆನೆಗಳನ್ನು ತಡೆಯುವ ತಂತ್ರಗಳು ವಿಫಲಆನೆಗಳು ಮತ್ತು ಮಾನವರ ನಡುವಿನ ಸಂಘರ್ಷವನ್ನು ತಪ್ಪಿಸಲು ದೇಶದ ವಿವಿಧ ಭಾಗಗಳಲ್ಲಿ ಹಲವಾರು ತಂತ್ರಗಳನ್ನು ಅರಣ್ಯ ಇಲಾಖೆ ಕಾರ್ಯರೂಪಕ್ಕೆ ತಂದಿದ್ದರೂ ಅವೆಲ್ಲವೂ ನಿರೀಕ್ಷಿತ ಫಲ ನೀಡದೆ ವಿಫಲವಾಗಿದೆ ಎಂದೇ ಹೇಳಬಹುದು. ಆನೆ ನಿರೋಧಕ ಕಂದಕ, ಕಾಂಕ್ರೀಟ್ ಅಡೆತಡೆಗಳು, ಕಲ್ಲುಮಣ್ಣು ಗೋಡೆಗಳು, ಬಳಸಿದ ರೈಲು ಹಳಿಗಳನ್ನು ಉಪಯೋಗಿಸಿ ನಿರ್ಮಿಸುವ ರೈಲು ಬೇಲಿ, ಮೆಣಸಿನಕಾಯಿ ಬೇಲಿಗಳು, ಸೌರಶಕ್ತಿ ಚಾಲಿತ ಉನ್ನತ ವಿದ್ಯುತ್ ಬೇಲಿಗಳು, ಜೇನುಗೂಡಿನ ಬೇಲಿ, ಮುಳ್ಳಿನ ಸಸ್ಯಗಳನ್ನು ಉಪಯೋಗಿಸಿ ಜೈವಿಕ ಬೇಲಿ ಇತ್ಯಾದಿಗಳನ್ನು ಈಗಾಗಲೇ ಆನೆಗಳು ನಾಡಿಗೆ ಬಾರದಂತೆ ತಡೆಯಲು ಬಳಸಲಾಗಿದೆ. ಆದರೆ ಈ ತಂತ್ರಗಳಿಂದ ಹೆಚ್ಚಿನ ಪ್ರಯೋಜನವಾಗದೇ ಇರುವುದರಿಂದ ಆನೆಗಳನ್ನು ಹಿಮ್ಮೆಟ್ಟಿಸಲು ಸರಕಾರವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಗಂಭೀರ ಚಿಂತನೆ ನಡೆಸಬೇಕಿದೆ ಎನ್ನುವುದು ಆನೆ ಹಾವಳಿಯಿಂದ ತೊಂದರೆ ಅನುಭವಿಸುತ್ತಿರುವ ಜನರ ಆಗ್ರಹವಾಗಿದೆ.
ಅರಣ್ಯ ಇಲಾಖೆಯು ಆನೆಗಳು ಅರಣ್ಯದಿಂದ ಜನವಸತಿ ಪ್ರದೇಶಗಳಿಗೆ ಬಾರದಂತೆ ಕಾಡಂಚಿನಲ್ಲಿ ಆನೆ ಕಂದಕ (ಎಲಿಫೆಂಟ್ ಪ್ರೂಫ್ ಟ್ರೆಂಚಸ್)ಗಳನ್ನು ನಿರ್ಮಿಸುತ್ತಿದೆ. ಈ ಆನೆ ಕಂದಕಗಳೂ ಆನೆಗಳನ್ನು ತಡೆಯುಲ್ಲಿ ವಿಫಲವಾಗಿದೆ. ಕಂದಕಗಳಲ್ಲಿ ಒಂದೇ ವರ್ಷದಲ್ಲಿ ಹೂಳು ತುಂಬುವುದು ಅಥವಾ ಮೇಲಕ್ಕೆ ಅಗೆದು ಹಾಕಿದ ಮಣ್ಣು ಮತ್ತೆ ಕಂದಕಕ್ಕೆ ಬೀಳುವುದರಿಂದ ಆನೆಗಳು ಸುಲಭವಾಗಿ ಕಂದಕಗಳನ್ನು ದಾಟುತ್ತಿವೆ. ಮಾತ್ರವಲ್ಲದೆ ಕಾಡು ಹಂದಿಗಳು ಕಂದಕ ದಾಟಿ ಹೊಲ ಮತ್ತು ಹಳ್ಳಿಗಳನ್ನು ಪ್ರವೇಶಿಸಲು ಬಳಸುವ ದಾರಿಗಳನ್ನು ಕಂಡುಹಿಡಿದು ಆನೆಗಳೂ ಅದೇ ದಾರಿಗಳಲ್ಲಿ ನಾಡು ಪ್ರವೇಶಿಸುತ್ತಿವೆ. ಕೆಲವು ಕಡೆ ನಿಗದಿತ ಅಳತೆಯಲ್ಲಿ ಆನೆ ಕಂದಕ ನಿರ್ಮಿಸದಿರುವುದೂ ಸಮಸ್ಯೆಗೆ ಕಾರಣವಾಗಿದೆ. ಕೆಲವು ಕಡೆ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಅರಣ್ಯ ಪ್ರದೇಶಗಳಲ್ಲಿ ಮೇಯಿಸಲು ಮತ್ತು ಅರಣ್ಯ ಪ್ರವೇಶಿಸಲು ಆನೆ ಕಂದಕಗಳಿಗೆ ಮಣ್ಣು ತುಂಬಿ ದಾರಿ ಮಾಡುತ್ತಿರುವುದು ಕಂಡುಬರುತ್ತಿದೆ.
Related Articles
ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುವುದರೊಂದಿಗೆ ಸರಕಾರದ ನೆರವಿನಿಂದ ಹಳೆಯ ತಂತ್ರಗಳನ್ನೇ ಮತ್ತಷ್ಟು ಅಭಿವೃದ್ಧಿಪಡಿಸಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುವುದು.
-ಡಾ|ವಿ.ಕರಿಕಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು.
Advertisement
– ನಾಗರಾಜ್ ಎನ್.ಕೆ.