ಆಳಂದ: ದಿನೇ ದಿನೇ ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಗೆ ಅರಣ್ಯ ಇಲಾಖೆ ಮೂಲಕ ಜೂನ್ ತಿಂಗಳಲ್ಲಿ ಸರ್ಕಾರ ಸಸಿಗಳನ್ನು ನೆಡಲು ಅನೇಕ ಜಾಗೃತಿ, ಉಪನ್ಯಾಸ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಕಾಯ್ದಿಟ್ಟ ಅರಣ್ಯ ಪ್ರದೇಶ ಹಾಗೂ ಹೆದ್ದಾರಿ, ಇನ್ನಿತರ ಪ್ರಮುಖ ರಸ್ತೆ ಮಾರ್ಗದ ಬದಿಗಳಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡುವ ಕಾರ್ಯವಾಗುತ್ತಿದೆ. ಅದೇ ರೀತಿ ಶಾಲೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಸಿ ನೆಡಲು ಸಾಮಾಜಿಕ ಅರಣ್ಯ ಇಲಾಖೆಯಿಂದ ಅರಣ್ಯೀಕರಣ ಹಾಗೂ ಸಸಿಗಳನ್ನು ವಿತರಿಸುವ ಕೆಲಸ ನಡೆಯುತ್ತದೆ. ಹೀಗೆ ಅರಣ್ಯ ಇಲಾಖೆ ಎರಡು ವಿಧದಲ್ಲಿ ಕಾರ್ಯ ಹಂಚಿಕೊಂಡು ನಿರ್ವಹಿಸುತ್ತಿದೆ. ಹೀಗೆ ಇಲಾಖೆಯಿಂದ ಒಟ್ಟು 293080 ಸಸಿಗಳನ್ನು ಬೆಳೆಸಲಾಗಿದೆ.
ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ ಸಾರ್ವಜನಿಕವಾಗಿ ಸಸಿಗಳು (ಆರ್‌ಎಸ್‌ಪಿಡಿ), ಮನೆಗೊಂದು ಮರ ಹಾಗೂ ಶಾಲೆಗೊಂದು ವನ (ಎಂಎಂಎಸ್‌ವಿ) ಎನ್ನುವ ಯೋಜನೆಗಳ ಮೂಲಕ ವಿವಿಧ ರೀತಿಯ ಸಸಿಗಳನ್ನು ವಿತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ ಆಸಕ್ತರು ಸಸಿಗಳನ್ನು ಖರೀದಿಸಬಹುದಾಗಿದೆ.
Advertisement
ಕಲಬುರಗಿ ಜಿಲ್ಲೆಯನ್ನು ಒಳಗೊಂಡು ಆಳಂದ ತಾಲೂಕಿನ ಅಲ್ಲಲ್ಲಿ ಮಳೆ ಶುರುವಾಗಿದೆ. ಆದ್ದರಿಂದ ಮನೆ, ಕಚೇರಿ, ಶಾಲೆ, ಕಾಲೇಜು ಸಂಘ, ಸಂಸ್ಥೆ ಆವರಣಗಲ್ಲಿ ಸಸಿ ನೆಡಲು ಮುಂದಾಗುವ ಕೈಗಳಿಗೆ ಅರಣ್ಯ ಇಲಾಖೆಯಿಂದ ಕಡಿಮೆ ದರದಲ್ಲಿ ಹಾಗೂ ಉದ್ಯೋಗ ಖಾತ್ರಿಯಲ್ಲಿ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
171080 ಸಸಿ ಉತ್ಪಾದನೆ:
ಪ್ರಾದೇಶಿಕ ಅರಣ್ಯ ವಲಯದ ಎರಡು ಸಸ್ಯ ಸಂರಕ್ಷಣಾ ಕ್ಷೇತ್ರ ಕೋರಳ್ಳಿ, ಕಡಗಂಚಿಯಲ್ಲಿ ಪ್ರಸಕ್ತ ಹಂಗಾಮಿಗಾಗಿ ಒಟ್ಟು 171080 ಸಸಿಗಳನ್ನು ಬೆಳಸಲಾಗಿದೆ. 171080 ಸಸಿಗಳಲ್ಲಿ 39 ಸಾವಿರ ಸಸಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ತಲಾವೊಂದಕ್ಕೆ 3 ರೂ. ಗಳಂತೆ ಮಾರಾಟ ಮಾಡಲಾಗುವುದು. 14 ಸಾವಿರ ಸಸಿಗಳನ್ನು ಹಸಿರು ಕರ್ನಾಟಕ ಯೋಜನೆಯಲ್ಲಿ ಸಂಘ, ಸಂಸ್ಥೆ, ಶಾಲೆ, ಕಾಲೇಜು ಮತ್ತು ಮಕ್ಕಳಿಗೆ ವಿತರಣೆಗಾಗಿ ಹಾಗೂ ಬಾಕಿ 12808 ಸಸಿಗಳು ಅರಣ್ಯೀಕರಣ ಗುರಿಹೊಂದಲಾಗಿದೆ. •ಜಗನಾಥ ಕೋರಳ್ಳಿ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ
122000 ಸಸಿ ನೆಡುವ ಗುರಿ:
ಸಾಮಾಜಿಕ ಅರಣ್ಯ ಇಲಾಖೆಯಿಂದ ಉದ್ಯೋಗ ಖಾತ್ರಿ ಅಡಿಯಲ್ಲಿ ತಾಲೂಕಿನ ಅಮರ್ಜಾ ಅಣೆಕಟ್ಟು ಪ್ರದೇಶ, ಬಬಲೇಶ್ವರ ಸಸ್ಯ ಉತ್ಪಾದನೆ ಹಾಗೂ ಸಂರಕ್ಷಣಾ ಕ್ಷೇತ್ರದಲ್ಲಿ ಆಲ, ಅರಳಿ, ಬೇವು, ಹೊಂಗೆ, ಚಳ್ಳೆ, ಮಹಾಗನಿ, ಶಿಶು, ಸಿರಸಿ, ಹುಣಸೆ, ಹೆಬ್ಬೇವು, ಪೇರು, ನುಗ್ಗೆ ತಪಸಿ, ಹಿಪ್ಪೆನೆರಳೆ, ಶ್ರೀಗಂಧ ಹೀಗೆ 122000 ಸಸಿಗಳು ಲಭ್ಯವಾಗಿವೆ. ಇವುಗಳಲ್ಲಿ ರಸ್ತೆ ಬದಿ, ವನಮೋತ್ಸವ, ದೇವಸ್ಥಾನ, ಸ್ಮಶಾನ ಭೂಮಿ, ಶಾಲೆ, ಕಾಲೇಜುಗಳಲ್ಲಿ ಇಲಾಖೆಯಿಂದಲೇ ನೆಡಲಾಗುವುದು. ಅಲ್ಲದೆ, ಉದ್ಯೋಗ ಖಾತ್ರಿ ಅಡಿಯಲ್ಲಿ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುವುದು. ರೈತಾಪಿ ವರ್ಗದವರು ಇಲಾಖೆಯ ನೆರವಿನ ಲಾಭ ಪಡೆಯಬೇಕು. •ಮೌಲಾಲಿ, ಸಾಮಾಜಿಕ ಅರಣ್ಯ ಅಧಿಕಾರಿ