Advertisement

ಹಸಿರ ಸಿರಿ ಸೃಷ್ಟಿಗೆ ಅರಣ್ಯ ಇಲಾಖೆ ಕಂಕಣ

03:32 PM Jun 05, 2022 | Team Udayavani |

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯ ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರದಲ್ಲಿ ಅರಣ್ಯ ಇಲಾಖೆಯಿಂದ ಈ ವರ್ಷವೂ ಅರಣ್ಯೀಕರಣಕ್ಕೆ ಲಕ್ಷಾಂತರ ಸಸಿಗಳು ಸಿದ್ಧಗೊಂಡಿದ್ದು, ಸದ್ಯ ಇಲ್ಲಿ ಭೂತಾಯಿಗೆ ಹಸಿರು ಸೀರೆ ಉಡಿಸಲು ತಯಾರಾಗಿರುವ ಸಸ್ಯಕಾಶಿ ಪರಿಸರ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

Advertisement

ಸುಮಾರು 30 ಎಕರೆ ವಿಸ್ತೀರ್ಣದ ಶೆಟ್ಟಿಕೇರಿಯ ಕೆರೆಯಂಚಿನ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯ 2 ಪ್ರತ್ಯೇಕ ಸಸ್ಯಪಾಲನಾ ಕೇಂದ್ರಗಳಿವೆ. ಅಲ್ಲಿನ ಅಧಿಕಾರಿಗಳು, ಸಿಬ್ಬಂದಿ, ದಿನಗೂಲಿ ಕೆಲಸಗಾರರು ಕರ್ತವ್ಯ ನಿಷ್ಠೆ, ಅರಣ್ಯ ಕಾಳಜಿಯಿಂದ ಸಸಿಗಳ ಪಾಲನೆ-ಪೋಷಣೆ ಮಾಡುವ ಮೂಲಕ ಹಸಿರೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.

ಶೆಟ್ಟಿಕೇರಿ ವಿವಿಧ ಜಾತಿ ಸಸಿಗಳು: ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರದಲ್ಲಿ ರೈತರಿಗೆ ವಿತರಿಸಲು ರಸ್ತೆ ಬದಿ, ಶಾಲಾ, ಕಾಲೇಜು ಮೈದಾನಗಳಲ್ಲಿ ನೆಡಲು ಬೇವು, ತಪಸಿ, ಹಲಗಲ, ಗುಲ್‌ಮೋಹರ್‌, ಅಶೋಕ, ಹುಣಸಿ, ಮಹಾಗನಿ, ಶ್ರೀಗಂಧ, ಕಾಡು ಬಾದಾಮಿ, ಬಂಗಾಳಿ, ಕರಿಬೇವು, ನೆಲ್ಲಿ, ಸಾಗವಾನಿ, ನುಗ್ಗಿ, ರೆಂಟ್ರಿ, ಇಲಾತಿ, ಹುಣಸಿ, ಬನ್ನಿ, ಪೇರಲ, ಮಾವು ಇತರೇ ಸಸಿಗಳಿವೆ. ಸಾಮಾಜಿಕ ಅರಣ್ಯ ವಲಯ ವಿಭಾಗದಿಂದ 1,05,732 ಸಸಿಗಳು ಮತ್ತು ಪ್ರಾದೇಶಿಕ ವಲಯದಿಂದ 2,27,700 ವಿವಿಧ ಗಾತ್ರದ ಚೀಲದಲ್ಲಿ ಬೆಳೆಸಿದ ಸಸಿಗಳು ಸಿದ್ಧಗೊಂಡಿವೆ. ಈಗಾಗಲೇ ರೈತರು, ಸಾರ್ವಜನಿಕರು, ಸರ್ಕಾರಿ ಇಲಾಖೆಯವರು, ಗ್ರಾಪಂ, ತಾಪಂ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಿಗೆ ಜೂನ್‌ 5 ಪರಿಸರ ದಿನಾಚರಣೆಯಂದು ಉಚಿತವಾಗಿ ಸಸಿಗಳನ್ನು ನೀಡಲು ಸಜ್ಜುಗೊಂಡಿವೆ.

ಕಪ್ಪತ್ತಗುಡ್ಡ ಆಕ್ಸಿಜನ್‌ ಪಾಯಿಂಟ್‌: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಅನೇಕ ಜಾತಿಯ ಗಿಡ ಮರಗಳು, ಔಷಧ ಸಸ್ಯಗಳು, ಕುರುಚಲು ಗಿಡಗಳನ್ನು ಒಳಗೊಂಡು ಒಟ್ಟು 11665 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಇದರಲ್ಲಿ ಶೇ. 80ಕ್ಕಿಂತ ಹೆಚ್ಚು ಪ್ರದೇಶ ಕಪ್ಪತಗುಡ್ಡ ಅರಣ್ಯ ವ್ಯಾಪ್ತಿಗೊಳಪಡುತ್ತದೆ.

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯುವ ಕಪ್ಪತ್ತಗುಡ್ಡದ ಅರಣ್ಯ ವ್ಯಾಪ್ತಿ 64 ಕಿ.ಮೀ. ಉದ್ದ ಮತ್ತು 15 ಕಿ.ಮೀ.ನಷ್ಟು ಅಗಲವಿದ್ದು, ಒಟ್ಟು 33 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಬ್ಬಿಕೊಂಡಿದೆ. ಈ ಪ್ರದೇಶದಲ್ಲಿ ಅರಣ್ಯ ಭೂಮಿ ಹೆಚ್ಚಲು ಉಭಯ ತಾಲೂಕಿನ ಅರಣ್ಯ ಇಲಾಖೆಯ ಕಾಣಿಕೆಯೂ ಬಹಳಷ್ಟಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಸಮೀಕ್ಷೆಯಲ್ಲಿ ಗದಗ ಜಿಲ್ಲೆ ದೇಶದಲ್ಲಿಯೇ ಉತ್ತಮ ಗಾಳಿ ಹೊಂದಿರುವ 2ನೇ ಜಿಲ್ಲೆಯಾಗಿದೆ ಎಂಬ ಗರಿ ಹೊಂದಲು ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರದ ಕಾರ್ಯವೂ ಇದೆ ಎನ್ನಬಹುದಾಗಿದೆ.

Advertisement

ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರಗಳಲ್ಲಿ ಸಿದ್ಧಪಡಿಸಿದ ನೂರಾರು ಜಾತಿಯ ವಿವಿಧ ಜಾತಿಯ ಸಸಿಗಳನ್ನು ಪ್ರತಿ ವರ್ಷ ಜೂನ್‌ 5 ವಿಶ್ವ ಪರಿಸರ ದಿನಾಚರಣೆಯಂದು ಉಚಿತವಾಗಿ ತರಲಾಗುತ್ತದೆ. ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ಜನತೆಗೆ ಸಸ್ಯಕಾಶಿಯೇ ಆಗಿದೆ. ಇಲ್ಲಿಂದ ತರುವ ವಿವಿಧ ಜಾತಿಯ ಪಟ್ಟಣದ 23 ವಾರ್ಡ್‌ಗಳ ವ್ಯಾಪ್ತಿಯ ರಸ್ತೆ ಬದಿ, ಶಾಲೆ, ದೇವಸ್ಥಾನದ ಪ್ರಾಂಗಣ, ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿ ಆವರಣ, ಕೆರೆ ದಂಡೆ, ಉದ್ಯಾನಗಳಲ್ಲಿ ನೆಡಲಾಗಿದೆ. ಅವುಗಳ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದೆ. –ಬಸವೇಶ ಮಹಾಂತ ಶೆಟ್ಟರ, ಪರಿಸರ ಪ್ರೇಮಿ, ಲಕ್ಷ್ಮೇಶ್ವರ

ಸಾರ್ವಜನಿಕರು, ರೈತರು, ಸಂಘ-ಸಂಸ್ಥೆಗಳವರು, ಸರ್ಕಾರಿ ಇಲಾಖೆಗಳ ಅಧಿಕಾರಿಗಳೆಲ್ಲರೂ ಸಸಿಗಳ ಪಾಲನೆ-ಪೋಷಣೆಗೆ ಕಾಳಜಿ ತೋರಬೇಕು. ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವಗಳು “ಕಾಡು ಬೆಳೆಸಿ ನಾಡು ಉಳಿಸಿ’ “ಹಸಿರೇ ಉಸಿರು’ ಎಂಬ ಘೋಷಣೆಗೆ ಮತ್ತು ಪ್ರಚಾರಕ್ಕೆ ಸೀಮಿತವಾಗಬಾರದು. ಬದಲಾಗಿ ಗಿಡ ಬೆಳೆಸುವ ಕಾರ್ಯ ನಿತ್ಯನೂತನವಾಗಬೇಕು. ಅಂದಾಗ ಸರಕಾರದ ಉದ್ದೇಶ ಈಡೇರುತ್ತದೆ. –ಸುಮಾ ಎಚ್‌. ಹಳೆಹೊಳಿ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ

                                                       -ಕೌಶಿಕ ದಳವಾಯಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next