Advertisement

ಕಾಡಲ್ಲಿನ ಮಕ್ಕಳು ಶಾಲೆಗೆ ಕರೆತರಲು ಪ್ರಯತ್ನ

02:52 PM Jan 31, 2020 | Team Udayavani |

ಶ್ರೀನಿವಾಸಪುರ: ಶಾಲೆಯಿಂದ ದೂರು ಉಳಿದು ಅರಣ್ಯದಲ್ಲಿ ಇರುವ ಮಕ್ಕಳು ಹಾಗೂ ಪೋಷಕರನ್ನು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡ ಭೇಟಿ ಮಾಡಿ, ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮನವಿ ಮಾಡಿದೆ. ಆದರೆ, ಇದಕ್ಕೆ ಮಕ್ಕಳ ಪೋಷಕರು ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಪಟ್ಟಣದಿಂದ 5 ಕಿ.ಮೀ.ದೂರದ ಅರಣ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬಂದಿರುವ ಕೂಲಿ ಕಾರ್ಮಿಕರು ನೀಲಗಿರಿ ಮರ ಕಡಿಯುವ ಕೆಲಸದಲ್ಲಿ ತೊಡಗಿದ್ದಾರೆ.

Advertisement

ಶಾಲೆಯಿಂದ ದೂರ ಉಳಿದಿದ ಮಕ್ಕಳೂ ಇದ್ದಾರೆ. ಯಾವುದೇ ಸೌಲಭ್ಯಗಳಿಲ್ಲದೇ, ಅರಣ್ಯದಲ್ಲಿ ಆದಿ ಮಾನವರಂತೆ ಬದುಕು ನಡೆಸುತ್ತಿದ್ದಾರೆ. ಈ ಬಗ್ಗೆ ಉದಯವಾಣಿಯಲ್ಲಿ ಜ.28ರಂದು ವರದಿ ಪ್ರಕಟ ಮಾಡಿತ್ತು. ಇದರಿಂದ ಎಚ್ಚೆತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಇಲಾಖೆಯ ಬಿಅರ್‌ಪಿ ಹಾಗೂ ಸಿಅರ್‌ಪಿಗಳನ್ನು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ, ವರದಿ ನೀಡುವಂತೆ ತಿಳಿಸಿದ್ದಾರೆ. ಆದರೆ, ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡಕ್ಕೆ ಮಕ್ಕಳ ಪೋಷಕರು ಸಮರ್ಪಕ ಮಾಹಿತಿ ನೀಡಿಲ್ಲ.

ಸ್ಪಂದಿಸುತ್ತಿಲ್ಲ: ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಕ್ಷೇತ್ರ ಸಂಪನ್ಮೂಲ ಸಂಯೋಜಕರಾದ ಕೆ.ಸಿ.ವಸಂತ, ಬಿಆರ್‌ಪಿ, ಸಿಆರ್‌ಪಿ ಹಾಗೂ ಸ್ಥಳೀಯ ಶಾಲೆಯ ಶಿಕ್ಷಕರು ಅರಣ್ಯಕ್ಕೆ ಭೇಟಿ ನೀಡಿ, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಇದು ಕಡ್ಡಾಯವಾಗಿದೆ ಎಂದು ಪೋಷಕರಿಗೆ ತಿಳಿಸಿದ್ದರೂ ಅದಕ್ಕೆ ಸರಿಯಾದ ರೀತಿ ಸ್ಪಂದಿಸಿಲ್ಲ.

ಇಲ್ಲ ಸಲ್ಲದ ಸಬೂಬು: ನಾವು ಹೊರಟು ಹೋಗುತ್ತೇವೆ. ನಮಗೆ ಶಿಕ್ಷಣ ಬೇಡ, ಒಂದೆರೆಡು ವಾರ ಇಲ್ಲಿ ಇರುತ್ತೇವೆ. ಹಬ್ಬಕ್ಕಾಗಿ ಮಕ್ಕಳು ಇಲ್ಲಿಗೆ ಬಂದಿದ್ದಾರೆ ಎಂದು ಇಲ್ಲ ಸಲ್ಲದ ಸಬೂಬು ಹೇಳಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಲ್ಲಿನ ಸತ್ಯಾಂಶ ತಿಳಿದು ಬಂತು, 1 ಗಂಟೆಗಳ ಕಾಲ ಪೋಷಕರೊಂದಿಗೆ ಚರ್ಚೆ ನಡೆಸಿದರೂ ವಿಫ‌ಲ ವಾಗಿದೆ. ಆದರೂ ಒಲ್ಲದ ಮನಸ್ಸಿನಲ್ಲಿ ಕೂಲಿ ಕಾರ್ಮಿಕರನ್ನು ಕರೆ ತಂದಿರುವ ಶಂಕರ್‌, ಗುರುವಾರ ರಾತ್ರಿ ಪೋಷಕರೊಂದಿಗೆ ಚರ್ಚಿಸಿ, ಶುಕ್ರವಾರ ನಿಮಗೆ ತಿಳಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಇರುವ ಉಚಿತ ಸೌಲಭ್ಯಗಳು, ಅವರ ಭವಿಷ್ಯದ ಬಗ್ಗೆ ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಹೆಚ್ಚು ತಿಳಿವಳಿಕೆ ನೀಡಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆ ತಂದರೂ ಸರಿ, ಇಲ್ಲವೇ ತಾವು ಇರುವ ಸ್ಥಳದಲ್ಲಿಯೇ ಬೋರ್ಡ್‌ ಹಾಕಿ ಮಕ್ಕಳಿಗೆ ಅಕ್ಷರ ಕಲಿಸುತ್ತೇವೆ. ಪುಸ್ತಕ, ಪೆನ್ನು, ಬಿಸಿಯೂಟ ಸಹ ಇಲ್ಲಿಗೆ ತಂದು ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಎಲ್ಲಾ ಪ್ರಯತ್ನಗಳ ನಡುವೆ ಕೂಲಿ ಕಾರ್ಮಿಕರನ್ನು ಕರೆತರುವ ನಟರಾಜ್‌, ಸ್ಥಳಕ್ಕೆ ಬಂದಿದ್ದು, ಅವರಿಗೂ ಮಕ್ಕಳ ಭವಿಷ್ಯದ ಬಗ್ಗೆ ತಿಳಿಸಿಕೊಡಲಾಗಿದೆ. ಈ ಮಕ್ಕಳಿಗೆ ಕೊಳ್ಳೂರಿನ ಶಾಲೆಯ ಪ್ರತ್ಯೇಕ ಕೊಠಡಿಯಲ್ಲಿ ಅಕ್ಷರ ಕಲಿಸಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಪೋಷಕರು ಒಪ್ಪಿಗೆನೀಡುವ ಸಾಧ್ಯತೆ ಇದ್ದು, ಮಕ್ಕಳು ಶುಕ್ರವಾರ ಶಾಲೆಗೆ ಮರಳುವ ಸಾಧ್ಯತೆಗಳು ಇದೆ. ಈ ಬಗ್ಗೆ ಕೋಲಾರದ ಮಕ್ಕಳ ರಕ್ಷಣಾ ಘಟಕ ಸಹ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿವಸ್ತು ಸ್ಥಿತಿ ಬಗ್ಗೆ ಮಾತುಕತೆ ನಡೆಸಿದೆ. ಅದೇ ರೀತಿ ಸಾರ್ವಜನಿಕರು, ಕೆಲವು ಸಂಘಗಳು ಈ ಬಗ್ಗೆ ಚರ್ಚೆಗೆ ಮುಂದಾಗಿವೆ.  ಒಟ್ಟಾರೆ ಶಿಕ್ಷಣದಿಂದ ವಂಚಿತ ರಾಗಿರುವ ಈ ಮಕ್ಕಳು ಮರಳಿ ಶಾಲೆಗೆ ಬರ ಬೇಕೆಂಬುದು ಉದಯವಾಣಿ ಆಶಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next