Advertisement

ಗಲ್ಫ್ನಲ್ಲಿ ಕಾರ್ಕಳದ ಜೆಸಿಂತಾ ರಕ್ಷಣೆಗೆ ವಿದೇಶಾಂಗ ಇಲಾಖೆ

03:45 AM Jun 28, 2017 | Team Udayavani |

ಉಡುಪಿ: ಅನಧಿಕೃತ ಏಜೆಂಟ್‌ ಕತಾರ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸೌದಿ ಅರೇಬಿಯಾಕ್ಕೆ ಕರೆದುಕೊಂಡು ಹೋಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ಸಂಕಷ್ಟದಲ್ಲಿರುವ ಸಂತ್ರಸ್ತ ಮಹಿಳೆ ಜೆಸಿಂತಾ ಮೆಂಡೊನ್ಸಾ ರಕ್ಷಣೆಗೆ ವಿದೇಶಾಂಗ ಇಲಾಖೆ ಧಾವಿಸಿದೆ. ಕೂಡಲೇ ಭಾರತಕ್ಕೆ ಕಳುಹಿಸಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಆದೇಶಿಸಿದ್ದಾರೆ. 

Advertisement

ಕೇಂದ್ರ ವಿದೇಶಾಂಗ ಇಲಾಖೆಯ ಈ ಆದೇಶದ ಕುರಿತಂತೆ ಪ್ರತಿಕ್ರಿಯಿಸಿರುವ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಅಹ್ಮದ್‌ ಜಾವೇದ್‌ ಅವರು ಜೆಸಿಂತಾ ಬಿಡುಗಡೆಗಾಗಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಡಾ| ರವೀಂದ್ರನಾಥ ಶಾನುಭಾಗ್‌ ಅಧ್ಯಕ್ಷತೆಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ಸಂದೇಶ ರವಾನಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಕಾರ್ಕಳದ ಜೆಸಿಂತಾ ಪತಿ ಕಳೆದ ವರ್ಷ ಅಸೌಖ್ಯದಿಂದ ನಿಧನ ಹೊಂದಿದ್ದು, ಮೂವರು ಮಕ್ಕಳ
ಪಾಲನೆ, ವಿದ್ಯಾಭ್ಯಾಸ ಜೆಸಿಂತಾ ಅವರಿಂದ ಅಸಾಧ್ಯ ವಾಯಿತು. ಇದೇ ವೇಳೆ ಕತಾರ್‌ನಲ್ಲಿ ಕೆಲಸವಿದ್ದು ತಿಂಗಳಿಗೆ 25,000 ರೂ. ಸಂಬಳ ಕೊಡುವುದಾಗಿ ಮಂಗಳೂರಿನ ಏಜೆಂಟ್‌ ಜೇಮ್ಸ್‌ ನಂಬಿಸಿದ್ದ. ಯಾವ ಖರ್ಚುಗಳನ್ನು ತೆಗೆದುಕೊಳ್ಳದೇ ಪ್ರಯಾಣಕ್ಕೆ ಬೇಕಾಗಿರುವ ಪಾಸ್‌ಪೋರ್ಟ್‌ ವ್ಯವಸ್ಥೆ ಮಾಡಿದ್ದರಿಂದ ಆತನ ವಂಚನೆ ಬಗ್ಗೆ ಅರಿವಿಗೆ ಬರಲಿಲ್ಲ. 

ಜೆಸಿಂತಾ ಕಳೆದ ವರ್ಷ ಜೂ. 19ರಂದು ಮುಂಬಯಿಯಿಂದ ವಿಮಾನ ಮೂಲಕ ತೆರಳಿದ್ದು, ಅಲ್ಲಿ ತಲುಪಿದಾಗ ತಾನು ಬಂದಿದ್ದು ಕತಾರ್‌ಗಲ್ಲ, ಸೌದಿ ಅರೇಬಿಯಾಕ್ಕೆ ಎಂದು ಗೊತ್ತಾಯಿತು. ಆ ಬಳಿಕ ಅಲ್ಲಿ ಕಳೆದ ಒಂದು ವರ್ಷದಿಂದ ಅನೇಕ ಕಷ್ಟಗಳನ್ನು ಎದುರಿಸಿದ್ದು, ಭಾರತಕ್ಕೆ ಬರಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. 

ಸೌದಿ ಕನ್ನಡಿಗರ ಪ್ರಯತ್ನ 
ಪ್ರತಿಷ್ಠಾನದಿಂದ ಪ್ರಕರಣದ ಮಾಹಿತಿ ಪಡೆದ ರಿಯಾದ್‌ನಲ್ಲಿರುವ ಕರ್ನಾಟಕ ಅನಿವಾಸಿ ಸಂಘದ ಸ್ಥಾಪಕ ಬಿ. ಕೆ. ಶೆಟ್ಟಿ ಹಾಗೂ ರೋಶನ್‌ ರೋಡ್ರಿಗಸ್‌ ಜೆಸಿಂತಾ ಅವರ ಉದ್ಯೋಗದಾತ ಅಬ್ದುಲ್‌ ಅಲ್ಮುತ್ಯಾರಿಯನ್ನು ಸಂಪರ್ಕಿಸಿದರು. ಈ ಸಂದರ್ಭ ಏಜೆಂಟರು ತನ್ನಿಂದ 24,000 ಸೌದಿ ರಿಯಾಲ್‌ (ಸುಮಾರು 4 ಲ. ರೂ.)  ಪಡೆದುಕೊಂಡಿದ್ದು, ಅದನ್ನು ಹಿಂದಿರುಗಿಸಿದಲ್ಲಿ ಅವರನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಆತ ಹೇಳಿದ್ದಾಗಿ ತಿಳಿದುಬಂದಿದೆ.

ಈ ವಿಚಾರವನ್ನು ಪ್ರತಿಷ್ಠಾನ ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದ ಕೂಡಲೇ ಸಚಿವಾಲಯದ ಹಿರಿಯ ಅಧಿಕಾರಿ ಮಹಾರಾಷ್ಟ್ರ ಸರಕಾರ ಹಾಗೂ ಪೊಲೀಸ್‌ ಮಹಾ ನಿರ್ದೇಶಕರಿಗೆ ಪತ್ರ ಬರೆದು ತನಿಖೆಗೆ ಆದೇಶಿಸಿದರು. 2 ತಿಂಗಳಾದರೂ ಪೊಲೀಸರು ಮುಂಬಯಿಯಲ್ಲಿರುವ ಅನಧಿಕೃತ ಏಜೆಂಟ್‌ ಶಾಭಾಖಾನ್‌ ವಿರುದ್ಧ ತನಿಖೆ ನಡೆಸಿರಲಿಲ್ಲ. ಮಂಗಳೂರಿನ ಏಜೆಂಟರ ವಿಚಾರಣೆಯೂ ನಡೆಸಿರಲಿಲ್ಲ.

Advertisement

ಶೀಘ್ರ ಕರೆತರುವ ಸಾಧ್ಯತೆ
ಕಳೆದ ವಾರ ವಿದೇಶಾಂಗ ಇಲಾಖೆ ಹೈದ್ರಾಬಾದಿನ ಮೂವರು ಮಹಿಳೆಯರನ್ನು ಗಲ್ಫ್ನಿಂದ ಕರೆತಂದಿದೆ. ಆ ಹಿನ್ನೆಲೆಯಲ್ಲಿ ಜೆಸಿಂತಾ ಪ್ರಕರಣವನ್ನು ಟ್ವಿಟರ್‌ ಮೂಲಕ ಮತ್ತೆ ವಿದೇಶಾಂಗ ಇಲಾಖೆ ಗಮನಕ್ಕೆ ತಂದಾಗ ಅವರು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರ ಕರೆತರುವ ಪ್ರಯತ್ನ ಮಾಡುತ್ತಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ಅಡ್ವೋಕೇಟ್‌ ವಿಜಯಲಕ್ಷ್ಮೀ ತಿಳಿಸಿದ್ದಾರೆ.

ಜೆಸಿಂತಾ ಮರಳಿದ ಬಳಿಕ ಏಜೆಂಟ್‌ ವಿರುದ್ಧ  ಕ್ರಮ ಕೈಗೊಳ್ಳಲಾಗುವುದು ಎಂದು ಕದ್ರಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಮಾರುತಿ ನಾಯಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next