Advertisement

ಮುಸ್ತಫಾಗೆ ವಿದೇಶೀ ನಂಟು: ಡಿಜಿಟಲ್‌ ಕರೆನ್ಸಿ ಮೂಲಕ ಹಣದ ವಹಿವಾಟು ಬಹಿರಂಗ

09:10 AM Jan 30, 2020 | mahesh |

ಬೆಂಗಳೂರು: ಸೈಬರ್‌ ಭಯೋತ್ಪಾದನೆ ಸಂಬಂಧ ಬಂಧಿತನಾಗಿ ಬೆಂಗಳೂರು ಪೊಲೀಸರ ವಶದಲ್ಲಿರುವ ಝಾರ್ಖಂಡ್‌ನ‌ ಗುಲಾಮ್‌ ಮುಸ್ತಫಾನಿಗೆ ಅಮೆರಿಕ ಮತ್ತಿತರ ವಿದೇಶಗಳಲ್ಲಿ ನೆಲೆಸಿರುವ ಉಗ್ರರ ಸಂಪರ್ಕ ಇರುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

Advertisement

ಇದಕ್ಕೆ ಸಾಕ್ಷಿ ಎಂಬಂತೆ ತಾನು ಎರಡು ಅಮೆರಿಕನ್‌ ಸಿಮ್‌ ಕಾರ್ಡ್‌ಗಳನ್ನು ಬಳಸಿಕೊಂಡಿರುವ ಬಗ್ಗೆ ಮುಸ್ತಫಾ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ. ಜತೆಗೆ ಇಲ್ಲಿನ ಹತ್ತಕ್ಕಿಂತಲೂ ಹೆಚ್ಚು ಸಿಮ್‌ ಕಾರ್ಡ್‌ಗಳನ್ನು ಆತ ಖರೀದಿಸಿದ್ದಾನೆ. ಈ ಎಲ್ಲ ಸಿಮ್‌ಗಳನ್ನು ಪಡೆಯಲು ಮುಸ್ತಫಾ ಐದಾರು ನಕಲಿ ಆಧಾರ್‌ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದ. ಅಮೆರಿಕನ್‌ ಸಿಮ್‌ ಕಾರ್ಡ್‌ಗಳನ್ನು ಬೇರೆಯವರ ಹೆಸರಿನಲ್ಲಿ ಪಡೆದುಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಜತೆಗೆ ಡಿಜಿಟಲ್‌ ಕರೆನ್ಸಿ ಮೂಲಕ ಈ ಶಂಕಿತ ಸೈಬರ್‌ ಉಗ್ರ ಹವಾಲಾ ದಂಧೆಯಲ್ಲಿ ನಿರತನಾಗಿರುವುದು ದೃಢಪಟ್ಟಿದ್ದು, ಉಗ್ರ ಸಂಘಟನೆಗಳಿಗೆ ಹಣ ಸಂದಾಯ ಮಾಡಿದ್ದಾನೆಯೇ ಎಂಬ ಬಗ್ಗೆ ಪ್ರಶ್ನಿಸ ಲಾಗು ತ್ತಿದೆ. ರಾಜಗೋಪಾಲನಗರ ಠಾಣೆ ಪೊಲೀಸರ ವಶದಲ್ಲಿರುವ ಆರೋಪಿ ಗುಲಾಮ್‌ ಮುಸ್ತಫಾ ನನ್ನು ಮಧ್ಯಪ್ರದೇಶ, ಝಾರ್ಖಂಡ್‌ ಪೊಲೀಸರು ಮತ್ತು ಆರ್‌ಪಿಎಫ್ ಹಾಗೂ ರಾಜ್ಯ ಗುಪ್ತಚರ ವಿಭಾಗದ ಅಧಿಕಾರಿಗಳು ನಡೆಸಿದ ವಿಚಾರಣೆ ಸಂದರ್ಭದಲ್ಲಿ ಈ ಪ್ರಮುಖ ಅಂಶ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿದೆ.

ಬಿಟ್‌ಕಾಯಿನ್‌ ವಹಿವಾಟು
ರೈಲ್ವೇ ಇಲಾಖೆಗೆ ವಂಚಿಸಿದ 20 ಕೋಟಿ ರೂ.ಗೂ ಅಧಿಕ ಹಣವನ್ನು ಮೂರು ಸಾವಿರ ಖಾತೆ ಗಳಿಗೆ ವರ್ಗಾಯಿಸಿಕೊಂಡಿದ್ದ ಮುಸ್ತಫಾ, ಈ ಹಣವನ್ನು ಮಧ್ಯವರ್ತಿಗಳ ಮೂಲಕ ಡಿಜಿಟಲ್‌ ಕರೆನ್ಸಿಗಳನ್ನಾಗಿ ಪರಿವರ್ತಿಸಿಕೊಂಡಿದ್ದಾನೆ. ಬಳಿಕ ಹವಾಲಾ ಮಾತ್ರವಲ್ಲದೆ, ಬಿಟ್‌ಕಾಯಿನ್‌ ಮತ್ತು ಕ್ರಿಪ್ಟೋ ಕರೆನ್ಸಿ (ಡಿಜಿಟಲ್‌ ಕರೆನ್ಸಿ) ಮೂಲಕ ಈ ವಹಿವಾಟು ನಡೆಸದಿದೆ. ಕ್ರಿಪ್ಟೋ ಕರೆನ್ಸಿ ಮೂಲಕ ಹಣ ವರ್ಗಾವಣೆಗೆ ಮಧ್ಯವರ್ತಿಗಳ ಅಗತ್ಯವಿಲ್ಲ. ಜತೆಗೆ ಬ್ರಾಡ್‌ಕಾಸ್ಟ್‌ ಸೇರಿ ಯಾವುದೇ ನೆಟ್‌ವರ್ಕ್‌ ಗಳಲ್ಲಿ ಈ ಮಾಹಿತಿ ಸಂಗ್ರಹವಾಗುವುದಿಲ್ಲ. ಹೀಗಾಗಿ ಈ ಮೂಲಕ ಶಂಕಿತ ಸಂಘಟನೆ ಮತ್ತು ಸದಸ್ಯರಿಗೆ ಆರ್ಥಿಕ ಸಹಾಯ ಮಾಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಗೂಗಲ್‌ ಡ್ರೈವ್‌ನಲ್ಲಿ ಮಾಹಿತಿ
ಪೊಲೀಸರು ಮತ್ತು ತನಿಖಾಧಿಕಾರಿಗಳಿಗೆ ವಂಚಿಸಲು ಆರೋಪಿ ಪಾಕ್‌ ಮತ್ತು ಇತರ ದೇಶಗಳ ವ್ಯಕ್ತಿಗಳ ಜತೆ ಹೊಂದಿರುವ ಮಾಹಿತಿ, ಸಾಫ್ಟ್ವೇರ್‌ಗಳ ಮಾಹಿತಿ, ಬಿಟ್‌ಕಾಯಿನ್‌ ಮತ್ತು ಕ್ರಿಪ್ಟೋ ಕರೆನ್ಸಿ ವರ್ಗಾವಣೆಯ ವಿವರಗಳನ್ನು ಗೂಗಲ್‌ ಡ್ರೈವ್‌ನಲ್ಲಿ ಸಂಗ್ರಹಿಸಿದ್ದ. ಆತನ ಲ್ಯಾಪ್‌ಟಾಪ್‌ ವಶಕ್ಕೆ ಪಡೆದಾಗ ಸಂಪೂರ್ಣ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಯೂಟ್ಯೂಬ್‌ ನೋಡಿ ಕಲಿತ
2015ರಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ ಪೀಣ್ಯದಲ್ಲಿ ವಾಸವಾಗಿದ್ದು, ಮಸೀದಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಒಮ್ಮೆ ಝಾರ್ಖಂಡ್‌ಗೆ ಹೋಗಲು ರೈಲ್ವೇ ಆ್ಯಪ್‌ ಮೂಲಕ ಟಿಕೆಟ್‌ ಕಾಯ್ದಿರಿಸಿದ್ದ. ಈ ವೇಳೆ ಸ್ನೇಹಿತರೊಬ್ಬರು ತಮಗೂ ಟಿಕೆಟ್‌ ಕಾಯ್ದಿರಿಸುವಂತೆ ಕೋರಿ ಹಣ ನೀಡಿದ್ದರು. ಈ ಹಣದ ಆಮಿಷಕ್ಕೊಳಗಾದ ಆರೋಪಿ, ಯೂಟ್ಯೂಬ್‌ನಲ್ಲಿ ಸಾಫ್ಟ್ವೇರ್‌ಗಳನ್ನು ಹ್ಯಾಕ್‌ ಮಾಡುವುದು ಹೇಗೆ, ಹೊಸ ಸಾಫ್ಟ್ವೇರ್‌ಗಳನ್ನು ಅಭಿವೃದ್ಧಿಪಡಿಸುವುದು ಹೇಗೆ, ಆನ್‌ಲೈನ್‌ ಮೂಲಕ ಹೇಗೆಲ್ಲ ವಂಚನೆ ಮಾಡಬಹುದು ಎಂಬುದನ್ನು ಕರಗತ ಮಾಡಿಕೊಂಡಿದ್ದಾನೆ. ಬಳಿಕ ಪಾಕ್‌ ಮೂಲದ ಡಾರ್ಕ್‌ನೆಟ್‌ ಸಾಫ್ಟ್ವೇರ್‌ ಅನ್ನು ತನ್ನ ಬಳಿ ಇರಿಸಿಕೊಂಡಿದ್ದು, ಇದರ ಮೂಲಕ ಹ್ಯಾಕ್‌ ಸಾಫ್ಟ್ವೇರ್‌ವೊಂದನ್ನು ಅಭಿವೃದ್ಧಿಪಡಿಸಿಕೊಂಡು ರೈಲ್ವೇ ಇಲಾಖೆ ಹಾಗೂ ಇತರ ಸರಕಾರಿ ಮತ್ತು ಖಾಸಗಿ ಸಾಫ್ಟ್ವೇರ್‌ಗಳನ್ನು ಹ್ಯಾಕ್‌ ಮಾಡಿಕೊಂಡು ವಂಚಿಸಿದ್ದಾನೆ.

ಈ ರೀತಿ ಮೂರು ವರ್ಷಗಳಿಂದ ಆರೋಪಿ ಅಕ್ರಮದಲ್ಲಿ ತೊಡಗಿದ್ದು, ಇದುವರೆಗೂ 20 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಅನಂತರ 8-10 ತಿಂಗಳಿಂದ ರಾಜಗೋಪಾಲನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕುಳಿತು ಲ್ಯಾಪ್‌ಟಾಪ್‌ ಮೂಲಕ ಎಲ್ಲವನ್ನು ನಿರ್ವಹಿಸುತ್ತಿದ್ದ ಎಂಬುದು ತಿಳಿದು ಬಂದಿರುವುದಾಗಿ ಮೂಲಗಳು ತಿಳಿಸಿವೆ.

ಇಸ್ರೋ ಮಾಹಿತಿ: ತಲೆನೋವು
ವಿಚಾರಣೆ ಸಂದರ್ಭದಲ್ಲಿ ತಾನು ಅನಕ್ಷರಸ್ಥ ಎಂದು ಮುಸ್ತಫಾ ಹೇಳಿಕೊಂಡಿದ್ದಾನೆ. ಆದರೆ ಆತ ತಾಂತ್ರಿಕವಾಗಿ ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಹೇಗೆ ಸಾಧ್ಯ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಆತನ ಹಿನ್ನೆಲೆ ಬಗ್ಗೆ ತಿಳಿಯಲು ಝಾರ್ಖಂಡ್‌ ಪೊಲೀಸರು ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಇಸ್ರೋದ ಕಾಟೋìಸ್ಯಾಟ್‌ನ ಮಾಹಿತಿಯನ್ನು ಆತ ಹೇಗೆ ಪಡೆದುಕೊಂಡಿದ್ದಾನೆ, ಯಾಕೆ ಪಡೆದುಕೊಂಡಿದ್ದಾನೆ ಎಂಬ ಕುರಿತು ಬಾಯಿ ಬಿಡುತ್ತಿಲ್ಲ. ಒಂದು ವೇಳೆ ರಾಜ್ಯ ಮತ್ತು ದೇಶದ ಕೆಲವು ಸೂಕ್ಷ್ಮ ಪ್ರದೇಶಗಳ ಬಗ್ಗೆ ತಿಳಿಯಲು ಆತ ಕಾಟೋìಸ್ಯಾಟ್‌ ಮಾಹಿತಿ ಪಡೆದುಕೊಂಡಿದ್ದನೆ ಎಂಬ ಅನುಮಾನ ವ್ಯಕ್ತವಾಗಿದ್ದು, ಇದು ದೊಡ್ಡ ತಲೆನೋವಾಗಿದೆ ಎಂದು ಮೂಲಗಳು ತಿಳಿಸಿವೆ.

ಸೈಬರ್‌ ಅವ್ಯವಹಾರ ಚತುರ
ರೈಲ್ವೇ ಇ-ಟಿಕೆಟ್‌ ವಂಚನೆ ಮಾಡುತ್ತಿದ್ದ ಮುಸ್ತಫಾ, ಎರಡು ಡೊಮೈನ್‌ ಖರೀದಿಸಿದ್ದಾನೆ. ರೈಲ್ವೇ ಇಲಾಖೆಯ ಸಾಫ್ಟ್ವೇರ್‌ ಹ್ಯಾಕ್‌ ಮಾಡಿದ್ದ ಆರೋಪಿ, ಅದರಲ್ಲಿ ಟಿಕೆಟ್‌ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಆನ್‌ಲೈನ್‌ ಅಥವಾ ವಾಟ್ಸ್‌ ಆ್ಯಪ್‌ ಕಾಲ್‌ ಮೂಲಕ ಸಂಪರ್ಕಿಸಿ ಟಿಕೆಟ್‌ ಮಾರಾಟ ಮಾಡುತ್ತಿದ್ದ. ಈ ಹಣವನ್ನು ಫೋನ್‌ಪೇ, ಪೇಟಿಯಂ ಅಥವಾ ನೇರವಾಗಿಯೂ ಪಡೆದುಕೊಳ್ಳುತ್ತಿದ್ದ ಎಂಬುದು ಗೊತ್ತಾಗಿದೆ.

- ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next