ಪುನೀತ್ ರಾಜಕುಮಾರ್ ಅವರನ್ನು ಹೀರೋ ಆಗಿ ಪರಿಚಯಿಸಿದ್ದ ಪುರಿ ಜಗನ್ನಾಥ್, ಇದೀಗ ಕನ್ನಡ ಚಿತ್ರರಂಗಕ್ಕೆ ಮತ್ತೂಬ್ಬ ಹೀರೋನನ್ನ ಪರಿಚಯಿಸುವುದಕ್ಕೆ ರೆಡಿಯಾಗುತ್ತಿದ್ದಾರೆ. ಬರೀ ಕನ್ನಡವೇನೂ, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಪರಿಚಯಿಸುವುದಕ್ಕೆ ಸಜ್ಜಾಗಿದ್ದಾರೆ. ಆ ಹೀರೋ ಹೆಸರು ಇಶಾನ್ ಮತ್ತು ಚಿತ್ರದ ಹೆಸರು “ರೋಗ್’ ಎಂಬುದು ಗೊತ್ತಿರಲಿ.
ಈ ಇಶಾನ್ ಯಾರು ಎಂಬ ಪ್ರಶ್ನೆ ಸಹಜ. ನಿರ್ಮಾಪಕ ಸಿ.ಆರ್. ಮನೋಹರ್ ಅವರ ಸಹೋದರನೇ ಈ ಇಶಾನ್. ಮನೋಹರ್ ತಮ್ಮ ಸಹೋದರನನ್ನು ಚಿತ್ರರಂಗಕ್ಕೆ ಪರಿಚಯಿಸಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಇದ್ದೇ ಇತ್ತು. ಈಗ ಅದು “ರೋಗ್’ ಚಿತ್ರದ ಮೂಲಕ ಈಡೇರಿದೆ. “ರೋಗ್’ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಚಿತ್ರ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು, ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.
ಮೊದಲ ಹಂತವಾಗಿ ಚಿತ್ರದ ಪೋಸ್ಟರ್ ಅಷ್ಟೇ ಬಿಡುಗಡೆಯಾಗಿದೆ. ಒಂದೆರೆಡು ತಿಂಗಳ ಹಿಂದೆಯೇ ಹೈದರಾಬಾದ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಪ್ಲಾನ್ ಮಾಡಿದ್ದರು ಮನೋಹರ್. ಕಾರಣಾಂತರಗಳಿಂದ ಆಡಿಯೋ ಬಿಡುಗಡೆ ಸಮಾರಂಭ ಮುಂದಕ್ಕೆ ಹೋಗಿತ್ತು. ಸದ್ಯದಲ್ಲೇ ಮೊದಲು ಹಾಡುಗಳು ಬಿಡುಗಡೆಯಾಗಿ, ನಂತರ ಚಿತ್ರ ಸಹ ಬಿಡುಗಡೆಯಾಗಲಿದೆ.
ಒಟ್ಟಾರೆ ಈ ಚಿತ್ರದ ಮೂಲಕ ತಮ್ಮ ಸಹೋದರನನ್ನು ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ವೇದಿಕೆ ಸಿದ್ಧ ಮಾಡುತ್ತಿದ್ದಾರೆ ಸಿ.ಆರ್. ಮನೋಹರ್. ಈ ಚಿತ್ರದಲ್ಲಿ ಇಶಾನ್‌ಗೆ ಇಬ್ಬರು ನಾಯಕಿಯರು. ಒಬ್ಟಾಕೆ ಪ್ರಿಯಾಂಕಾ ಚೋಪ್ರಾ ಅವರ ಕಸಿನ್ ಆಗಿರುವ ಮನ್ನಾರಾ ಚೋಪ್ರಾ ಆದರೆ, ಇನ್ನೊಬ್ಟಾಕೆ ಆ್ಯಂಜೆಲಾ ಕ್ರಿಸ್ಲಿಂಕಿ. ಆ್ಯಂಜೆಲಾ ಇದಕ್ಕೂ ಮುನ್ನ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು, ಇರ್ಫಾನ್ ಖಾನ್, ರಣಬೀರ್ ಕಪೂರ್, ಹೃತಿಕ್ ರೋಶಾನ್ ಮುಂತಾದವರ ಜೊತೆಗೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು “ಜ್ಯೋತಿಲಕ್ಷ್ಮೀ’ ಹಾಗೂ “ಸೈಜ್ ಜೀರೋ’ ಎಂಬ ತೆಲುಗು ಚಿತ್ರಗಳಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಮನ್ನಾರಾ ಚೋಪ್ರಾ ಇದಕ್ಕೂ ಮುನ್ನ ವರುಣ್ ಸಂದೇಶ್ ಜೊತೆಗೆ “ನಿನ್ನಲ್ಲೇ ನಾನು’ ಎಂಬ ಕನ್ನಡ-ತೆಲುಗು ಚಿತ್ರದಲ್ಲಿ ನಟಿಸುವುದಕ್ಕೆ ಬೆಂಗಳೂರಿಗೆ ಬಂದಿದ್ದರು. ಚಿತ್ರದ ಮುಹೂರ್ತವಾದರೂ, ಕಾರಣಾಂತರಗಳಿಂದ ಚಿತ್ರದ ಚಿತ್ರೀಕರಣ ಮುಂದುವರೆಯಲಿಲ್ಲ.
ಈಗ “ರೋಗ್’ ಚಿತ್ರದ ಮೂಲಕ ಮನ್ನಾರಾ ಕೊನೆಗೂ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಈ ಚಿತ್ರಕ್ಕೆ ಸುನೀಲ್ ಕಶ್ಯಪ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಲವು ತೆಲುಗು ಚಿತ್ರಗಳಿಗೆ ಮತ್ತು ಕೆಲವು ತಮಿಳು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸುನೀಲ್ ಕಶ್ಯಪ್, ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಮುಖೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.