ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳ ತಿರುಗಾಟ ಚಾಲನೆ ಪ್ರಯುಕ್ತ ಕಟೀಲಿನಲ್ಲಿ ಶುಕ್ರವಾರ ರಾತ್ರಿ ನಡೆದ ಸೇವಾ ಪ್ರದರ್ಶನ ವೇಳೆ ಮೇಳದ ಓರ್ವ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ರಂಗಸ್ಥಳದಿಂದ ವಾಪಸ್ ಕರೆಯಿಸಿದ ಪ್ರಸಂಗ ಸಂಭವಿಸಿದೆ.
ರಾತ್ರಿ 1.30ರ ವೇಳೆಗೆ ತನ್ನ ಭಾಗವತಿಕೆಯ ಸಮಯ ಬಂದಾಗ ರಂಗಸ್ಥಳಕ್ಕೆ ಬಂದ ಸತೀಶ್ ಶೆಟ್ಟಿ ಅವರು ಭಾಗವತಿಕೆಗೆಂದು ಕುಳಿತುಕೊಳ್ಳುವಷ್ಟರಲ್ಲೇ ರಂಗಸ್ಥಳದ ಹಿಂಭಾಗದಿಂದ ಅವರನ್ನು ವಾಪಸ್ ಕರೆಯಲಾಯಿತು. ಸತೀಶ್ ಶೆಟ್ಟಿ ಅವರು ಕೆಳಗಿಳಿದು ಅಲ್ಲಿಂದ ತೆರಳಿದರು.
ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಯಕ್ಷಗಾನಾಸಕ್ತರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಶನಿವಾರ ಪಟ್ಲ ಅವರ ಅಭಿಮಾನಿಗಳು ಮಂಗಳೂರಿನಲ್ಲಿ ಸಭೆ ಕೂಡ ನಡೆಸಿದರು. ಪಟ್ಲ ಸತೀಶ್ ಶೆಟ್ಟಿ ಅವರು “ಈ ವರ್ಷದಿಂದ ಭಾಗವತಿಕೆ ಮಾಡುವುದು ಬೇಡವೆಂದು ಮೊದಲೇ ಅವರಿಗೆ ತಿಳಿಸಲಾಗಿತ್ತು.
ಆದರೂ ಅವರು ಭಾಗವತಿಕೆ ಮಾಡಲು ಮುಂದಾದರು’ ಎಂದು ಮೇಳದ ಸಂಚಾಲಕರು ಪ್ರತಿಕ್ರಿಯಿಸಿದ್ದಾರೆ. ಸತೀಶ್ ಶೆಟ್ಟಿ ಅವರು ಕಳೆದ 20 ವರ್ಷಗಳಿಂದ ಕಟೀಲು ಮೇಳದಲ್ಲಿ ಭಾಗವತರಾಗಿದ್ದಾರೆ. 2 ವರ್ಷಗಳ ಹಿಂದೆ ಮೇಳದ 7 ಕಲಾವಿದರು ರಾಜೀನಾಮೆ ನೀಡಿದ್ದರು. ಅನಂತರ ಮೇಳದ ಕುರಿತಾದ ವಿವಾದ ಬೆಳೆದು ಉತ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಪಟ್ಲ ಸತೀಶ್ ಶೆಟ್ಟಿ ಅವರು ಮೇಳದ ಸಂಚಾಲಕರು, ಆಡಳಿತದ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿರುವುದರಿಂದ ಮತ್ತು ಮೇಳಕ್ಕೆ ಸಂಬಂಧಿಸಿದ ಯಾವುದೇ ಸಂಪ್ರದಾಯಗಳನ್ನು ಪಾಲಿಸದೇ ಇರುವುದರಿಂದ ಅವರನ್ನು ಈ ವರ್ಷದ ತಿರುಗಾಟದಿಂದ ಮೇಳದಲ್ಲಿ ಸೇರಿಸಿಕೊಳ್ಳದಿರಲು ನಿರ್ಧರಿಸಿದ್ದೆವು.
-ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಮೇಳದ ಸಂಚಾಲಕ