Advertisement

ಮುಖ್ಯಾಧ್ಯಾಪಕನ ವರ್ಗಾವಣೆಗೆ ಒತ್ತಾಯ

12:07 PM May 28, 2019 | Suhan S |

ಮುದ್ದೇಬಿಹಾಳ: ಶೈಕ್ಷಣಿಕ ಪ್ರಗತಿ ಕುಂಠಿತಕ್ಕೆ ಕಾರಣವಾಗಿರುವ ಬಳಬಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಪಿ.ಕೆ. ರಾಠೊಡ ಅವರನ್ನು ಕೂಡಲೇ ವರ್ಗಾಯಿಸದಿದ್ದರೆ ಜೂನ್‌ ಮೊದಲನೇ ವಾರ ಶಾಲೆ ಬಂದ್‌ ಮಾಡಿ, 8ನೇ ತರಗತಿಗೆ ಯಾರೂ ಪ್ರವೇಶ ಪಡೆಯದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಬಳಬಟ್ಟಿ ಗ್ರಾಮಸ್ಥರು, ವಿದ್ಯಾರ್ಥಿಗಳು, ಎಸ್‌ಡಿಎಂಸಿ ಅಧ್ಯಕ್ಷರು ಇಲ್ಲಿನ ಬಿಇಒ ಎಸ್‌.ಡಿ. ಗಾಂಜಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

2019ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಕಡಿಮೆ ಬರಲು ರಾಠೊಡರ ಉದ್ಧಟತನ ಮತ್ತು ಅತಿರೇಕದ ನಡವಳಿಕೆ ಕಾರಣವಾಗಿದೆ. ಪರೀಕ್ಷೆಗೆ ಕುಳಿತ 92 ವಿದ್ಯಾರ್ಥಿಗಳಲ್ಲಿ ಶೇ. 95 ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಇದಕ್ಕೆ ಕಾರಣ ಏನು ಅನ್ನುವುದನ್ನು ಬಳಬಟ್ಟಿ ಪರೀಕ್ಷಾ ಕೇಂದ್ರದಲ್ಲಿ ಕೆಲಸ ಮಾಡಿದ ಕೊಠಡಿ ಮೇಲ್ವಿಚಾರಕರು, ರೂಟ್ ಆಫೀಸರ್ಸ್‌, ಪೊಲೀಸ್‌ ಮತ್ತು ಜಾಗೃತ ದಳದ ಸಿಬ್ಬಂದಿಗಳನ್ನು ವಿಚಾರಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗಣಿತ ಶಿಕ್ಷಕರೂ ಆಗಿರುವ ಮುಖ್ಯಾಧ್ಯಾಪಕ ರಾಠೊಡ ಒಂದು ದಿನವೂ ಪಾಠ ಮಾಡಿಲ್ಲ. ಸರಣಿ ಪರೀಕ್ಷೆಗಳಲ್ಲಿ ಹೆಚ್ಚುವರಿ ಪುರವಣಿ ಕೊಡದೆ ಸತಾಯಿಸಿದ್ದೂ ಅಲ್ಲದೆ ಪುರವಣಿ ಕೇಳಿದರೆ ನೀವು ಎಷ್ಟು ಓದೀರಿ ನನಗೆ ಗೊತ್ತೈತಿ, ಪೇಪರ್‌ ಬೇಗ ಮುಗಿಸ್ರಿ ಎಂದು ನಮಗೆ ಗದರಿಸುತ್ತಿದ್ದರು. ಬಿಇಒ ಕಚೇರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳೊಂದಿಗೆ ನೇರ ಫೋನ್‌ ಇನ್‌ ಕಾರ್ಯಕ್ರಮ, ವಿಷಯ ಕ್ವಿಜ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿಲ್ಲ.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಾಗ ವಿನಾಕಾರಣ ತೊಂದರೆ ಕೊಟ್ಟಿದ್ದೂ ಅಲ್ಲದೆ ಪರೀಕ್ಷಾ ಕೊಠಡಿಯಲ್ಲೇ ಮನಸ್ಸಿಗೆ ಬಂದಂತೆ ಕಿರುಚಾಡುತ್ತ ತಿರುಗಾಡಿ ಶಾಂತಿಗೆ ಭಗ್ನ ತಂದಿದ್ದಾರೆ. ಮುಚ್ಚಳವಿಲ್ಲದ ಟ್ಯಾಂಕ್‌ನಲ್ಲಿನ ಜೊಂಡುಗಟ್ಟಿದ ನೀರನ್ನೇ ನಮಗೆ ಕುಡಿಯಲು ಕೊಡುತ್ತಿದ್ದರು. ಪರೀಕ್ಷೆಯಲ್ಲಿ ಕ್ಲಿಪ್‌ಪ್ಯಾಡ್‌ ಕಸಿದು ಕಾರಿಡಾರ್‌ನಲ್ಲಿ ಬಿಸಾಡಿ ತೊಂದರೆ ಕೊಟ್ಟರು. ಪರೀಕ್ಷೆ ಸಮಯ ನಮಗೆ ಮದ್ಯಾಹ್ನ ಬಿಸಿಯೂಟ ಕೊಡದೇ ಇದ್ದರೂ ಕೊಟ್ಟಿರುವುದಾಗಿ ಖರ್ಚು ಹಾಕಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೆಲ ವಿದ್ಯಾರ್ಥಿಗಳನ್ನು ಸ್ಟೋರ್‌ ರೂಂನಲ್ಲಿ ಕೂಡಿಸಿ ಪರೀಕ್ಷೆ ಬರೆಸಿದ್ದಾರೆ. ವಿದ್ಯಾರ್ಥಿನಿಯರಿಗೆ ಅಸಭ್ಯ, ಅಶ್ಲಿಲ ಪದಗಳನ್ನು ಬಳಸಿ ಬೈಯುತ್ತಾರೆ. ಅತಿಥಿ ಶಿಕ್ಷಕ ಎಸ್‌.ಸಿ. ಬೀಳಗಿ ಅವರನ್ನು ಹೆದರಿಸಿ ತಮ್ಮ ಮನೆ ಕಟ್ಟಡ ಕೆಲಸಕ್ಕೆ ಬಳಸಿಕೊಂಡಿದ್ದರಿಂದ ಅವರು ಸರಿಯಾಗಿ ಪಾಠ ಮಾಡದೆ ನಮಗೆ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ವಿದ್ಯಾರ್ಥಿಗಳು ದೂರಿದ್ದಾರೆ.

ಶಾಲೆ ಶಿಕ್ಷಕರಿಗೆ ವಿನಾಕಾರಣ ಪಗಾರ, ಇನ್‌ಕ್ರಿಮೆಂಟ್ ಬಂದ್‌ ಮಾಡುವುದು, ಶಾಲೆಗೆ ಲೇಟಾಗಿ ಬರುವ ಶಿಕ್ಷಕರನ್ನು ಗೇಟ್ ಹೊರಗೆ ನಿಲ್ಲಿಸಿ ತೊಂದರೆ ಕೊಡುತ್ತಾರೆ. ಶಿಕ್ಷಕರ ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾರೆ. 1-3-2019ರಿಂದ 8-2-2019ರವರೆಗೆ 8 ದಿನ ರಜೆ ಮೇಲಿದ್ದರೂ ಹಾಜರಿ ಪುಸ್ತಕದಲ್ಲಿ 4 ಸಿಎಲ್ ಹಾಕಿ, 4 ಸಹಿ ಮಾಡಿದ್ದಾರೆ. ಗ್ರಾಮದ ಹಿರಿಯರು ಎಚ್ಚರಿಕೆ ಕೊಟ್ಟ ಮೇಲೂ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಾರೆ. ಅತಿಥಿ ಶಿಕ್ಷಕರ ಸಂಬಳ ಕೊಡಲು ಲಂಚ ಕೇಳುತ್ತಾರೆ ಎಂದೆಲ್ಲ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ದೂರಿದ್ದಾರೆ.

Advertisement

ಶಾಲೆಯಲ್ಲಿ, ಪರೀಕ್ಷೆಯಲ್ಲಿ ಉತ್ತಮ ವಾತಾವರಣ ನಿರ್ಮಿಸುವಲ್ಲಿ ವಿಫಲರಾಗಿರುವ ರಾಠೊಡರು ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಇವರ ತಾತ್ಸಾರ ಮನೋಭಾವದಿಂದ ಮಕ್ಕಳ ಭವಿಷ್ಯ ಹಾಳಾಗತೊಡಗಿದೆ. ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲದ ಸ್ಥಿತಿಗೆ ಬಂದು ತಲುಪಿದೆ. ಇವರ ವರ್ಗಾವಣೆಯೊಂದೇ ಸದ್ಯಕ್ಕಿರುವ ಪರಿಹಾರ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಬಳಬಟ್ಟಿ ಪ್ರತಿನಿಧಿಸುವ ಗ್ರಾಪಂ ಅಧ್ಯಕ್ಷೆ ರೇಣುಕಾ ಹುಗ್ಗಿ, ಜಿಪಂ ಸದಸ್ಯೆ ಪ್ರೇಮಬಾಯಿ ಚವ್ಹಾಣ, ತಾಪಂ ಸದಸ್ಯೆ ಲಕ್ಷ್ಮೀಬಾಯಿ ರಾಠೊಡ ಇವರು ಮುಖ್ಯಾಧ್ಯಾಪಕರ ವರ್ಗಾವಣೆಗೆ ನೀಡಿರುವ ಶಿಫಾರಸು ಪತ್ರಗಳನ್ನು ಮನವಿ ಜೊತೆ ಲಗತ್ತಿಸಲಾಗಿದೆ. ಎಸ್‌ಡಿಎಂಸಿ ಅಧ್ಯಕ್ಷ ವೈ.ಎ. ಬೋಳಿ, ಗ್ರಾಮಸ್ಥರಾದ ರಮೇಶ ದಡ್ಡಿ, ಮುದ್ದಪ್ಪ ಡೋಣೂರ, ರವಿಚಂದ್ರ ಬೀಳಗಿ, ಜಗದೀಶ ದಡ್ಡಿ, ಶಿವಪ್ಪ ಬೀಳಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next