ಬೆಂಗಳೂರು: ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ನಡುವಿನ ಮೆಟ್ರೋ ಸುರಂಗ ಮಾರ್ಗ ನಿರ್ಮಿಸುವಾಗ ಒಂದೊಂದೇ ಟಿಬಿಎಂ(ಟನಲ್ ಬೋರಿಂಗ್ ಮಷಿನ್-ರಂಧ್ರ ಕೊರೆಯುವ ಯಂತ್ರ) ಗಳನ್ನು ಬಳಸಿ ನಾನಾ ರೀತಿಯ ತೊಂದರೆ ಅನುಭವಿಸಿದ್ದ ಮೆಟ್ರೋ ತನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿಕೊಂಡಿದೆ. “ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿರುವ 13.79 ಕಿಮೀಯ ಅತಿ ದೊಡ್ಡ ಸುರಂಗ ಮಾರ್ಗದಲ್ಲಿ ಒಂದೊಂದು ಕಿಲೋಮೀಟರ್‌ಗೆ ಒಂದೊಂದು ಟಿಬಿಎಂಗಳನ್ನನ್ನು ಬಳಸಿ ಕ್ಷಿಪ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಚಿಂತನೆ ನಡೆಸಿದೆ.
ಮೆಟ್ರೋ ಎರಡನೇ ಹಂತದ ಯೋಜನೆಯಲ್ಲಿ ಐಐಎಂಬಿ-ನಾಗವಾರ ನಡುವೆ 13.79 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಗೊಳ್ಳಲಿದ್ದು, ಈ ಸಂಬಂಧ ಮಣ್ಣಿನ ಪರೀಕ್ಷೆ ಪೂರ್ಣಗೊಂಡಿದೆ. ಅದರಂತೆ “ಈ ಸುರಂಗದಲ್ಲಿ ಒಂದು ಟಿಬಿಎಂ ಎರಡು ಕಿ.ಮೀ.ಗಿಂತ ಹೆಚ್ಚು ಕೊರೆಯದು’ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ನಿಲ್ದಾಣದಲ್ಲೊಂದು ಟಿಬಿಎಂ ಅನ್ನು ಬಳಸಿ, ತ್ವರಿತ ಗತಿಯಲ್ಲಿ ಸುರಂಗ ಕೊರೆಯಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಹಂತದ ಮೆಟ್ರೋ ಸುರಂಗಗಳಲ್ಲಿನ ಮಣ್ಣಿಗೂ ಮತ್ತು ಎರಡನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುರಂಗ ಮಾರ್ಗದಲ್ಲಿನ ಮಣ್ಣಿಗೂ ತುಂಬಾ ವ್ಯತ್ಯಾಸ ಕಾಣುತ್ತಿಲ್ಲ. ಈ ಭಾಗದಲ್ಲಿ ಹೆಚ್ಚು-ಕಡಿಮೆ ಗಟ್ಟಿಕಲ್ಲು, ಮಣ್ಣು ಮತ್ತು ಕಲ್ಲಿನಿಂದ ಮಿಶ್ರಿತವಾದ ಮಣ್ಣಿನ ಪದರವಿದೆ. ಹಾಗಾಗಿ, ಹೆಚ್ಚು ಟಿಬಿಎಂಗಳನ್ನು ಬಳಸುವುದನ್ನು ಹೊರತುಪಡಿಸಿ, ತಜ್ಞರ ಮುಂದೆ ಸದ್ಯಕ್ಕೆ ಅನ್ಯಮಾರ್ಗಗಳಿಲ್ಲ. ಆದ್ದರಿಂದ ಮಾರ್ಗದುದ್ದಕ್ಕೂ ಬರುವ ಎಲ್ಲ 12 ನಿಲ್ದಾಣಗಳಲ್ಲಿ ತಲಾ ಒಂದು ಟಿಬಿಎಂಗಳನ್ನು ಬಳಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದಕ್ಕಾಗಿ ದೇಶದ ಇತರೆಡೆ ನಡೆಯುತ್ತಿರುವ ಮೆಟ್ರೋ ಸುರಂಗ ನಿರ್ಮಾಣ ಕಾಮಗಾರಿಗಳತ್ತ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ದೃಷ್ಟಿ ನೆಟ್ಟಿದೆ. ದೆಹಲಿ, ಚೆನ್ನೈ, ನಾಗಪುರದಲ್ಲಿ ಮೆಟ್ರೋ ಕಾಮಗಾರಿಗಳು ನಡೆದಿವೆ. ದೆಹಲಿಯಲ್ಲಿ 10ರಿಂದ 15 ಟಿಬಿಎಂಗಳು ಈಗಾಗಲೇ ಕೆಲಸ ಪೂರ್ಣಗೊಳಿಸಿವೆ. ಇದೇ ಟಿಬಿಎಂಗಳನ್ನು “ನಮ್ಮ ಮೆಟ್ರೋ’ಗೆ ಬಳಸಲು ಅವಕಾಶ ಇದೆ. ಅಥವಾ ಹೊರದೇಶಗಳಿಂದಲೂ ಯಂತ್ರಗಳನ್ನು ತರಲು ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಯಾವುದು ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ ಎಂದು ನಿಗಮದ ತಜ್ಞರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಏನಾಗಿತ್ತು?: ಮೊದಲ ಹಂತದಲ್ಲಿ ಪೂರ್ವ-ಪಶ್ಚಿಮ ಮತ್ತು ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ ಎರಡು ಜೋಡಿ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ 17.64 ಕಿ.ಮೀ. (ತಲಾ 8.82 ಕಿ.ಮೀ.) ವಿಸ್ತೀರ್ಣದ ಸುರಂಗ ಕೊರೆಯಲು ಆರು ಟಿಬಿಎಂಗಳನ್ನು ಬಳಸಲಾಗಿತ್ತು. ನಿತ್ಯ ಕನಿಷ್ಠ 4 ಮೀ. ಸುರಂಗ ಕೊರೆಯಬಹುದು ಎಂದು ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದರು. ಆದರೆ, ಬೆಂಗಳೂರಿನ ಮಣ್ಣು ಈ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿತ್ತು. ದಿನವೊಂದರಲ್ಲಿ 1 ಮೀ. ಕೊರೆಯಲಿಕ್ಕೂ ತಜ್ಞರು ಪರದಾಡಿದರು. ಎರಡನೇ ಹಂತದಲ್ಲೂ ಈ ತಪ್ಪು ಮರುಕಳಿಸದಿರಲು ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಲಾಗಿದೆ.
ಪ್ರತಿ 25 ಮೀ.ಗೆ ಮಣ್ಣಿನ ಪರೀಕ್ಷೆ: ಮಣ್ಣಿನ ಪರೀಕ್ಷೆಗಾಗಿ ಈಗಾಗಲೇ ಐಐಎಂಬಿ-ನಾಗವಾರ ಮಧ್ಯೆ ವಿಜ್ಞಾನಿಗಳು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸಾಮಾನ್ಯವಾಗಿ 50 ಮೀಟರ್‌ಗೆ ಒಂದು ಕೊಳವೆ ಕೊರೆದು, ಮಣ್ಣಿನ ಮಾದರಿ ಸಂಗ್ರಹಿಸಲಾಗುತ್ತದೆ. ಆದರೆ, ಉದ್ದೇಶಿತ ಮಾರ್ಗದಲ್ಲಿ 25 ಮೀ.ಗೊಂದು ಮಾದರಿಯನ್ನು ಪಡೆಯಲಾಗಿದೆ. 40 ಅಡಿ ಆಳದಲ್ಲಿ ಸುರಂಗ ನಿರ್ಮಾಣಗೊಳ್ಳುವುದರಿಂದ ಸುಮಾರು 50 ಅಡಿ ಆಳಕ್ಕೆ ಇಳಿದು ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ವ್ಯತ್ಯಾಸ ಕಂಡುಬಂದರೆ, ಎರಡು ಪಾಯಿಂಟ್‌ಗಳ ನಡುವೆ ಮತ್ತೂಂದು ಮಾದರಿ ಸಂಗ್ರಹಿಸಲಾಗುವುದು ಎಂದು ಮಣ್ಣಿನ ಪರೀಕ್ಷೆ ನಡೆಸುತ್ತಿರುವ ವಿಜ್ಞಾನಿಗಳು ತಿಳಿಸಿದ್ದಾರೆ.
ಶೀಘ್ರ ಟೆಂಡರ್: ಗೊಟ್ಟಿಗೆರೆ-ನಾಗವಾರ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗೆ ಈಗಾಗಲೇ ಸಿದ್ಧತೆಗಳು ನಡೆದಿದ್ದು, ಏಪ್ರಿಲ್‌ನಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದೆ. ನಂತರ ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. 2020ಕ್ಕೆ 72.095 ಕಿ.ಮೀ. ಉದ್ದದ ಎರಡನೇ ಹಂತ ಪೂರ್ಣ ಗೊಳಿಸುವ ಗುರಿ ಇದೆ.
* ವಿಜಯಕುಮಾರ್ ಚಂದರಗಿ