Advertisement

ನಿಷೇಧಿತ ನೀಲಗಿರಿ, ಅಕೇಶಿಯಾ ಬೆಳೆಗೆ ಪ್ರೋತ್ಸಾಹ: ಸದನದಲ್ಲಿ ಗದ್ದಲ

03:45 AM Feb 10, 2017 | Harsha Rao |

ವಿಧಾನಸಭೆ: ರಾಜ್ಯದಲ್ಲಿ ಪರಿಸರಕ್ಕೆ ಹಾನಿ ಮಾಡುವ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ನಿಷೇಧಿಸುವ ಕುರಿತು ಸದನದಲ್ಲಿ ಕಾಯ್ದೆ ತಿದ್ದುಪಡಿ ಮಾಡಿದರೂ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅವುಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿರುವುದು ಗುರುವಾರ ಗದ್ದಲಕ್ಕೆ ಕಾರಣವಾಯಿತು.

Advertisement

ಮಧ್ಯಪ್ರವೇಶಿಸಿದ ಆರೋಗ್ಯ ಸಚಿವ ರಮೇಶ್‌ಕುಮಾರ್‌, ಈ ವಿಚಾರದಲ್ಲಿ ನಮಗೆ ಕಾಳಜಿಯಿದೆ. ನನಗೆ ಎರಡು ದಿನ
ಕಾಲಾವಕಾಶ ಕೊಡಿ. ಈ ಸದನ ಮುಂದೂಡುವುದರೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ಅಕೇಶಿಯಾ
ಮತ್ತು ನೀಲಗಿರಿ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದರು. ಅಕೇಶಿಯಾ ಹಾಗೂ ನೀಲಗಿರಿ ಸಸಿಗಳನ್ನು ನಿಷೇಧಿಸಬೇಕೆಂದು ವಿಧಾನಸಭೆಯಲ್ಲಿ ಕಾಯ್ದೆ ತಿದ್ದುಪಡಿ ಅಂಗೀಕಾರ ಮಾಡಿದ್ದರೂ ಅರಣ್ಯ
ಇಲಾಖೆ ಅಧಿಕಾರಿಗಳು ಇದಕ್ಕೆ ಮಾನ್ಯತೆ ನೀಡದೆ ನೆಡುತೋಪುಗಳಲ್ಲಿ ಅವುಗಳನ್ನು ಬೆಳೆಸಲು ವಿವಾದಿತ ಆದೇಶ ಹೊರಡಿಸಿ ಗೊಂದಲ ಮೂಡಿಸುತ್ತಿರುವ ಬಗ್ಗೆ ಸದಸ್ಯ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಗಮನ ಸೆಳೆಯುವ ಸೂಚನೆ ಪ್ರಸ್ತಾಪದ ವೇಳೆ ಪ್ರತಿಪಕ್ಷ ಸದಸ್ಯರು ಅರಣ್ಯ ಇಲಾಖೆ ವಿರುದ್ಧ ತಿರುಗಿ ಬಿದ್ದರು.

ಗಮನ ಸೆಳೆಯುವ ಸೂಚನೆಗೆ ಅರಣ್ಯ ಸಚಿವರ ಪರವಾಗಿ ಉತ್ತರಿಸಿದ ಸಚಿವ ಟಿ.ಬಿ.ಜಯಚಂದ್ರ, ತಿದ್ದುಪಡಿ ಕಾಯ್ದೆಯಂತೆ ಪ್ರಥಮ ಹಂತವಾಗಿ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ
ಹಂತ ಹಂತವಾಗಿ ನೀಲಗಿರಿ ಬೆಳೆಸುವುದನ್ನು ನಿರ್ಬಂಧಿಸಲು ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿ ಸಿದ ಬಿಜೆಪಿಯ ಕೆ.ಜಿ.ಬೋಪಯ್ಯ, ಅಕೇಶಿಯಾ ಮತ್ತು ನೀಲಗಿರಿ ನಿಷೇಧ ಕುರಿತು ಸದನದಲ್ಲಿ ತಿದ್ದುಪಡಿ ಕಾಯ್ದೆ ಅಂಗೀಕರಿಸಿದ ಬಳಿಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಈ
ಗಿಡಗಳನ್ನು ನೆಡುತೋಪುಗಳಲ್ಲಿ ಹಾಕಲು ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳಿಗೆ ಸದನದ ನಿರ್ಣಯದ ಬಗ್ಗೆ ಗೌರವವಿಲ್ಲವೇ ಎಂದು ಪ್ರಶ್ನಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರಶ್ನಿಸಿದರೆ,
ನಿಷೇಧದ ಬಗ್ಗೆ ಯಾವುದೇ ಆದೇಶ ಬಂದಿಲ್ಲ ಎನ್ನುತ್ತಿದ್ದಾರೆ. ಸದನಕ್ಕಿಂತ ಅವರು ದೊಡ್ಡವರೇ ಎಂದು ಕೇಳಿದರು. ಪುಟ್ಟಣ್ಣಯ್ಯ ಸೇರಿ ಹಲವು ಸದಸ್ಯರು ಅರಣ್ಯಾಧಿಕಾರಿಗಳು ಮತ್ತು ಅರಣ್ಯ ಸಚಿವರ ವಿರುದ್ಧ ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next