ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಪ್ರವಾಹ ಉಂಟಾಗಿ ಶಾಮಣ್ಣ ಗಾರ್ಡನ್‌ನಲ್ಲಿ ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೂಚನೆ ನೀಡಿದ್ದಾರೆ.
ಗುರುವಾರ ಪಾಲಿಕೆ ಅಧಿಕಾರಿಗಳೊಂದಿಗೆ ಶಾಮಣ್ಣ ಗಾರ್ಡನ್‌ನಲ್ಲಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಮಳೆಯಿಂದ ಮನೆಗಳ ಕಟ್ಟಡ ಶಿಥಿಲಗೊಂಡು ಬೀದಿ ಪಾಲಾಗಿದ್ದೇವೆ ಎಂದು ಸ್ಥಳೀಯ ಅವಲತ್ತುಕೊಂಡಾಗ, ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಬೇರೆ ಕಡೆ ವಸತಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅರ್ಹತೆ ಇದ್ದರೆ ಗೃಹ ಮಂಡಳಿಯಲ್ಲಿ ರಿಯಾಯಿತಿ ದರದಲ್ಲಿ ಪ್ಲ್ರಾಟ್ ಕೊಡಿಸುವ ಬಗ್ಗೆಯೂ ಪ್ರಯತ್ನಿಸಿ ಎಂದು ಹೇಳಿದರು.
ಸಚಿವರು ಜಯನಗರದ ಶಾಮಣ್ಣ ಗಾರ್ಡನ್ ರೈಲ್ವೆ ಗೇಟ್‌ನ ಪೈಪ್‌ಲೈನ್ ಭಾಗದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಕಾಲುವೆ ಉಕ್ಕಿ ಹರಿಯುವುದರಿಂದ ಮನೆಯ ಅಡಿಪಾಯಕ್ಕೆ ತೊಂದರೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ಮನೆಗಳು ಕುಸಿಯುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಜಕಾಲುವೆಯ ಅಭಿವೃದ್ಧಿ ಯೋಜನೆಗೆ ನಗರಾಭಿವೃದ್ಧಿ ಸಚಿವರ ನಿಧಿಯಿಂದ 10 ಕೋಟಿ ರೂ. ವಿಶೇಷ ಅನುದಾನ ನೀಡುವುದಾಗಿ ತಿಳಿಸಿದ ಸಚಿವರು, ಕೂಡಲೇ ಈ ಭಾಗದ ಬೃಹತ್ ಮಳೆನೀರುಗಾಲುವೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇದಕ್ಕೂ ಮೊದಲು ಗೋವಿಂದರಾಜನಗರ ವ್ಯಾಪ್ತಿಯ ಕಾಮಾಕ್ಷಿಪಾಳ್ಯದ ಚೆನ್ನಪ್ಪ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಕೈಗಾರಿಕಾ ಬಡಾವಣೆಯ ಪರಿಸ್ಥಿತಿ ಗಮನಿಸಿ, ಈ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಕೂಡಲೇ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದರು. ಜತೆಗೆ 36.5 ಕೋಟಿ ವೆಚ್ಚದಲ್ಲಿ ರಸ್ತೆ, ಪಾದಚಾರಿ ಮಾರ್ಗ, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಜಯನಗರದ ಆರ್‌ಪಿಸಿ ಬಡಾವಣೆಯ ಬೃಹತ್ ಮಳೆನೀರು ಕಾಲುವೆ ಪರಿಶೀಲಿಸಿ ಜಾರ್ಜ್, ಕಾಲುವೆ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗದಂತೆ ಕೂಡಲೇ ಕ್ರಮೈವಹಿಸುವಂತೆ ತಿಳಿಸಿದರು. ಈ ವೇಳೆ ವಸತಿ ಸಚಿವ ಎಂ.ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ, ಮೇಯರ್ ಜಿ.ಪದ್ಮಾವತಿ, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸೇರಿದಂತೆ ಪ್ರಮುಖರು ಹಾಜರಿದ್ದರು.