ಒಂದು ವಾರದ ರಜೆ, ಒಂದು ದಿನದಂತೆ ಕಳೆದುಹೋಗಿದ್ದೇ ಗೊತ್ತಾಗಲಿಲ್ಲ. ಮತ್ತೆ ಮನೆಯನ್ನು ಬಿಟ್ಟು ಹಾಸ್ಟೆಲ…ಗೆ ಹೋಗುವಾಗ ಅಮ್ಮ, ಒಂದು ಬ್ಯಾಗ್ ಲಗೇಜನ್ನು ಎರಡಾಗಿಸಿದ್ದಳು. ಅದನ್ನೆಲ್ಲ ಹಿಡಿದು ಹೊರಟಿ¨ªೆ. ಕೈ ಸ್ವಲ್ಪ ನೋವಾಗಿದ್ದರೂ ಅದರ ಕಡೆ ಗಮನ ಕೊಡಲಿಲ್ಲ. ಬಸ್ ಬದಲಿಸುವಾಗ, ಆ ಬ್ಯಾಗ್ ಹಿಡಿದುಕೊಳ್ಳಲಾಗದೇ ಒದ್ದಾಡುತ್ತಿದ್ದೆ. ಆಗ ಒಬ್ಬ ವ್ಯಕ್ತಿ “ತಂಗಿ ಬ್ಯಾಗ್ ಹಿಡಿದುಕೊಳ್ಳಬೇಕೆ?’ ಎಂದು, ನನ್ನನ್ನು ಬಸ್ ಹತ್ತಿಸಿದ ಹೋದ. ಅಪರಿಚಿತ ಅಣ್ಣನಿಗೊಂದು ಥ್ಯಾಂಕ್ಸ್ ಹೇಳಿ ಬಸ್ ಒಳಗೆ ಬ್ಯಾಗ್ ಎಳೆಯುತ್ತಾ ಬಂದೆ.
ಆ ಬಸ್ಸಿನಲ್ಲಿ ಡ್ರೈವರ್ ಪಕ್ಕದ ಸೀಟ್ ಬಿಟ್ಟರೆ, ಒಂದೆರಡು ಸೀಟ್ ಮಾತ್ರ ಖಾಲಿ ಇತ್ತು. ಅಲ್ಲೊಬ್ಬ ವ್ಯಕ್ತಿ ಕುಳಿತಿದ್ದ. ಅವನ ಪಕ್ಕದಲ್ಲೂ ಒಂದು ಸೀಟ್ ಇತ್ತು. “ಎಕ್ಸ್‌ಕ್ಯೂಸ್ ಮಿ’ ಎಂದು ಸೀಟ್ ಕೇಳಿದೆ. ನನ್ನ ಲಗೇಜ್ ನೋಡಿ ಆತ, “ನೀರು ಚೆಲ್ಲಿದೆ ಆಗಲ್ಲ’ ಎಂದ. ನನಗಂತೂ ಅಲ್ಲಿ ನೀರು ದುರ್ಬೀನ್ ಹಾಕಿಕೊಂಡು ಹುಡುಕಿದರೂ ಕಾಣಿಸಲಿಲ್ಲ. ಬ್ಯಾಗ್ ನೋಡಿ ಹೇಳಿದ ಎಂದು ತಿಳಿಯಿತು. ಸುಮ್ಮನೇ ಏನೂ ಹೇಳದೇ ಅಡ್ಡ ಸೀಟಿಗೆ ಹೋಗಿ ಕುಳಿತೆ.
ಅಷ್ಟರಲ್ಲೇ ಒಬ್ಬಳು ಚೆಂದುಳ್ಳಿ ಬಸ್ ಹತ್ತಿದಳು. ಬೇರೆಲ್ಲೂ ಸೀಟಿಲ್ಲದ ಕಾರಣ ಆ ಅಪ್ಸರೆ ತನ್ನ ಬಳಿಯೇ ಬಂದು ಕೂರುತ್ತಾಳೆ ಎಂದುಕೊಂಡ ಆತ ಜೇಬಿನಿಂದ ಕಚೀìಫನ್ನು ತೆಗೆದು, ಒರೆಸತೊಡಗಿದ. ನನಗೆ ಅವನ ಮೇಲೆ ಕೋಪ ಉಕ್ಕಿತು. ಅವಳು ಇವನ ಸೀಟಿನ ಬಳಿ ಬರುವ ಮುನ್ನವೇ ನನ್ನ ಪಕ್ಕದಲ್ಲಿ ಕುಳಿತ ಮಹಿಳೆಯು, ತನ್ನೆರಡು ಲಗೇಜ್ ಹಾಗೂ ಮಗುವಿನೊಂದಿಗೆ ಅವನ ಬಳಿ ಹೋಗಿ ಕುಳಿತಳು. ಒಮ್ಮೆಲೆ ನನಗೆ ನಗು ಬಂತು. ನಂತರ ಆ ಚೆಲುವೆ ನನ್ನ ಬಳಿ ಬಂದು ಕುಳಿತಳು. ಅವನ ಮುಖ ಇಂಗು ತಿಂದ ಮಂಗನಂತಾಗಿತ್ತು.
ಆ ಲಗೇಜ್ ಹಾಗೂ ಮಗುವಿನಿಂದ ಅವನು ಪಟ್ಟ ಪಾಡು ಅಷ್ಟಿಷ್ಟಲ್ಲ. ಆ ಮಗು ಕಿಟಾರನೆ ಕಿರುಚುತ್ತಿತ್ತು, ಅವನಿಗೆ ತನ್ನ ಪುಟ್ಟ ಕಾಲಿನಿಂದ ಒದೆಯುತ್ತಿತ್ತು, ಕೈಗಳಿಂದ ಡಿಶುಂ ಡಿಶುಂ ಎನ್ನುತ್ತಿತ್ತು… ಇನ್ನೂ ಏನೇನೋ ಹಿಂಸೆ ಮಾಡುತ್ತಿತ್ತು. ನನ್ನ ಸಿಟ್ಟನ್ನೆಲ್ಲ ಆ ಮಗು ತೀರಿಸಿಕೊಳ್ಳುತ್ತಿತ್ತೋ, ಏನೋ.
– ಪ್ರಭಾ ಹೆಗಡೆ ಭರಣಿ, ಧಾರವಾಡ