Advertisement

ಚಿತ್ರರಂಗದ ಉಳಿವಿಗೆ “STARS’ಎರಡು ಸಿನ್ಮಾ ಮಾಡಲೇಬೇಕು

09:25 AM Jun 28, 2019 | Lakshmi GovindaRaj |

“ಕನ್ನಡ ಚಿತ್ರರಂಗ ಉಳಿಯಬೇಕಾದರೆ “STARS’‌ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡಲೇಬೇಕು. ದೊಡ್ಡ ಚಿತ್ರಮಂದಿರಗಳ ಸ್ಥಳದಲ್ಲಿ ಎರಡು ಚಿತ್ರಮಂದಿರ ಕಟ್ಟಲು ಲೈಸೆನ್ಸ್‌ ಸರಳೀಕರಣದ ಬಗ್ಗೆ ಗಮನಹರಿಸಬೇಕು… ‘ ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡರ ಮನವಿ. ಅವರು ಹೀಗೆ ಮಾತನಾಡಲು ಕಾರಣವೂ ಇತ್ತು.

Advertisement

ಅವರು ಮಂಡಳಿ ಅಧ್ಯಕ್ಷರಾಗಿ ಒಂದು ವರ್ಷ ಕಳೆದಿದೆ. ಈಗ ತಮ್ಮ ಅವಧಿ ಜೂ.18 ಕ್ಕೆ ಪೂರ್ಣಗೊಳ್ಳಲಿದೆ. ಹಾಗಾಗಿ ಅವರು, ತಮ್ಮ ಒಂದು ವರ್ಷದ ಅಧಿಕಾರ ಅವಧಿಯಲ್ಲಿ ನಡೆದ ಕೆಲಸಗಳು, ಆಗಬೇಕಿರುವ ಕೆಲಸಗಳ ಕುರಿತು ಹೇಳುತ್ತಾ ಹೋದರು. “ಮಂಡಳಿಯ ಬೈಲಾ ನಿಯಮದಂತೆ ನಿರ್ಮಾಪಕರು, ವಿತರಕರು, ಪ್ರದರ್ಶಕರಿಗೆ ಅವಕಾಶ ಮಾಡಕೊಡಬೇಕು.

ಕಳೆದ ಬಾರಿ ನನಗೆ ವಿತರಕರ ವಲಯದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ಈ ಬಾರಿ ಪ್ರದರ್ಶಕರ ವಲಯದಿಂದ ಜೈರಾಜ್‌ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಂದು ವರ್ಷದ ಸೇವೆ ನನಗೆ ತೃಪ್ತಿ ತಂದಿದೆ. ಎಲ್ಲರ ಸಹಕಾರ, ಪ್ರೋತ್ಸಾಹದಿಂದ ನಾನು ನನ್ನ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ ಎಂಬ ನಂಬಿಕೆ ಇದೆ.

ಈಗಾಗಲೇ ನಮ್ಮ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅನುಷ್ಠಾನಕ್ಕೆ ತಂದ ಕೆಲವು ಯೋಜನೆಗಳನ್ನು ಈಗಿನ ನೂತನ ಅಧ್ಯಕ್ಷರು ಮುಂದುವರೆಸಿಕೊಂಡು ಹೋಗಬೇಕು ಎಂಬ ಮನವಿ ನನ್ನದು’ ಎಂದರು ಅವರು. ಮಂಡಳಿಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಈ ಹಿಂದಿನ ಮಾಜಿ ಅಧ್ಯಕ್ಷರ ಸಲಹೆ ಪಡೆದು, ಮಂಡಳಿ ಪದಾಧಿಕಾರಿಗಳ ಒಮ್ಮತದ ನಿರ್ಧಾರದಂತೆ ಆ ಸಮಸ್ಯೆ ನಿವಾರಿಸಲಾಗಿದೆ.

ಇನ್ನು, ಚಿತ್ರರಂಗ ಉಳಿಯಬೇಕಾದರೆ, “STARS’‌ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡಲೇಬೇಕು ಎಂಬ ಮನವಿಗೆ ಅವರೆಲ್ಲರೂ ಸ್ಪಂದಿಸಿದ್ದಾರೆ. ನಿರ್ಮಾಪಕರ ಹಿತದೃಷ್ಟಿಯಿಂದ ಪ್ರಾಣಿದಯಾ ಶಾಖೆ ಕಚೇರಿಯನ್ನು ಬೆಂಗಳೂರಲ್ಲಿ ತೆರೆಯಬೇಕು ಎಂಬ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಈಗ ಪ್ರಾಣಿದಯಾ ಪ್ರಧಾನ ಕಚೇರಿಯು ಹರಿಯಾಣದಲ್ಲಿದೆ.

Advertisement

ನಿರ್ಮಾಪಕರು ಪ್ರತಿ ಸಲವು ಎನ್‌ಓಸಿ ತರಲು ಅಲ್ಲಿಗೆ ತೆರಳಬೇಕಿದೆ. ಇದರಿಂದ ನಿರ್ಮಾಪಕರಿಗೆ ಹೆಚ್ಚು ಹೊರೆಯಾಗುತ್ತಿದೆ. ಸಮಯವೂ ಹೆಚ್ಚಾಗುತ್ತಿದೆ. ಹಾಗಾಗಿ ಇಲ್ಲಿ ಶಾಖೆ ಕಚೇರಿ ಆರಂಭಿಸಬೇಕು ಎಂಬ ಮನವಿ ಮಾಡಲಾಗಿದೆ. ಇದರೊಂದಿಗೆ ದೊಡ್ಡ ಚಿತ್ರಮಂದಿರಗಳ ಬಳಿ ಇನ್ನೊಂದು ಚಿತ್ರಮಂದಿರ ಕಟ್ಟಲು ಲೈಸೆನ್ಸ್‌ನಲ್ಲಿ ಸರಳೀಕರಣ ಮಾಡಬೇಕೆಂದು ಸಿಎಂ ಅವರಿಗೆ ಮನವಿ ಪತ್ರ ನೀಡಲಾಗಿದೆ.

ಅವರಿಗೆ ಚಿತ್ರರಂಗದ ಸಮಸ್ಯೆ ಗೊತ್ತಿದೆ. ಆ ನಿಟ್ಟಿನಲ್ಲಿ ಸಕರಾತ್ಮಕವಾಗಿ ತಿದ್ದುಪಡಿ ಆದೇಶ ಹೊರಡಿಸುತ್ತಾರೆ ಎಂಬ ನಂಬಿಕೆ ಇದೆ ಎನ್ನುವ ಚಿನ್ನೇಗೌಡರು, ಮುಂದಿನ ವರ್ಷ ಫಿಲ್ಮ್ ಚೇಂಬರ್‌ಗೆ 75 ವರ್ಷ ತುಂಬಲಿದೆ. ಆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸಲಾಗಿದೆ. ಈ ಒಂದು ವರ್ಷ ಅತ್ಯಂತ ಖುಷಿಯಿಂದ ಸೇವೆ ಮಾಡಿದ ತೃಪ್ತಿ ನನಗಿದೆ ಎಂಬುದು ಅವರ ಮಾತು.

ಈ ಮಾತುಕತೆ ಸಂದರ್ಭದಲ್ಲಿ ಮಂಡಳಿಯ ಖಜಾಂಚಿ ಕೆ.ಎಂ.ವೀರೇಶ್‌, ಗೌರವ ಕಾರ್ಯದರ್ಶಿ ಭಾ.ಮ.ಹರೀಶ್‌, ಕಾರ್ಯದರ್ಶಿ ಸುಂದರ್‌ರಾಜು, ಕರಿಸುಬ್ಬು, ಶಿಲ್ಪ ಶ್ರೀನಿವಾಸ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next