Advertisement

ಸಮರ್ಥ ನಾಯಕನ ಆಯ್ಕೆಗೆ ಮುಂದಾಗಿ

03:34 PM Apr 11, 2019 | Team Udayavani |
ಯಮಕನಮರಡಿ: ಮತದಾರರು ಲೋಕಸಭೆ ಚುನಾವಣೆಯಲ್ಲಿ ದೇಶಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಮುಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ| ಕಲ್ಲಡ್ಕ ಪ್ರಭಾಕರ್‌ ಭಟ್ಟ ಹೇಳಿದರು.
ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣೆಯ ಪ್ರಯುಕ್ತ ಆಯೋಜಿಸಲಾದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ 60 ವರ್ಷಗಳಿಂದ ಗಾಂಧೀಜಿ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡಿ ದೇಶವನ್ನು ಅಧೋಗತಿಗೆ ಒಯ್ಯುತ್ತಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಏಕತೆಗಾಗಿ ಉಳಿವಿಗಾಗಿ ಸುಭದ್ರ ಸರ್ಕಾರ ಆಯ್ಕೆಗೆ ಮತದಾರರು ಮತವನ್ನು ನೀಡಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಜಯ ಅಡಕೆ ಮಾತನಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಮತಚಲಾಯಿಸಬೆಕೆಂಬ ನಿಟ್ಟಿನಲ್ಲಿ ಪ್ರತಿ ಮನೆ ಮನೆಗೂ ಮತದಾನ ಜಾಗೃತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ದೇಶದ ಬಗ್ಗೆ ಸಮಾಜದ ಬಗ್ಗೆ ಚಿಂತನೆವುಳ್ಳರನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದರು.
ಈ ವೇಳೆ ಜಿಪಂ ಸದಸ್ಯರಾದ ಪವನ ಕತ್ತಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಬಿ.ಬಿ. ಹಂಜಿ, ಈರಣ್ಣ ಹಾಲದೇವರಮಠ, ಮಾರುತಿ ಅಷ್ಟಗಿ, ರವಿ ಹಿರೇಮಠ, ಮಹಾವೀರ ನಾಶಿಪುಡಿ, ಶಶಿಕಾಂತ ಮಠಪತಿ, ಈರಣ್ಣಾ ಗುರವ, ಶ್ರೀಶೈಲ ಯಮಕನಮರಡಿ, ಗುರುಸಿದ್ದ ಪಾಯನ್ನವರ, ಬಸವರಾಜ ಉದೋಶಿ ಸೇರಿದಂತೆ ಇತರರು ಇದ್ದರು.
ರಾಮನನ್ನುಅಲ್ಲಗಳೆಯುವವರು ರಾಮಮಂದಿರಕ್ಕೆ ಹೋಗಿದ್ದೇಕೆ?
ರಾಮದುರ್ಗ: ರಾಮ ಇಲ್ಲಿ ಹುಟ್ಟಿಲ್ಲ, ರಾಮ ಮಂದಿರ ಇಲ್ಲಿ ಇಲ್ಲವೇ ಇಲ್ಲ. ಎಂದು ಹೇಳುವ ಕಾಂಗ್ರೆಸ್‌ ನಾಯಕರು, ನಾನು ಬ್ರಾಹ್ಮಣ ಎಂದು ಜನಿವಾರ ಹಾಕಿಕೊಂಡು ಇತ್ತೀಚೆಗೆ ಅಯೋಧ್ಯೆಗೆ ಹೋಗಿ ರಾಮನ ಪೂಜೆ ಮಾಡಿಕೊಂಡು ಬಂದಿರುವುದು ಏಕೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ| ಕಲ್ಲಡ್ಕ ಪ್ರಭಾಕರ್‌ ಭಟ್ಟ ಕಾಂಗ್ರೆಸ್‌ ನಾಯಕರನ್ನು ಟೀಕಿಸಿದರು.
ಪಟ್ಟಣದ ಮರಾಠಾ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಮಂಗಳವಾರ ಸಂಜೆ ಏರ್ಪಡಿಸಲಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಚಿಕಾಗೊ ದೇಶ ಪ್ರವಾಸಕ್ಕೆಂದು ಹೊದಾಗ ಅಲ್ಲಿನ ಜನತೆಯನ್ನುದ್ದೇಶಿಸಿ ಮಾತನಾಡುವ ಪ್ರಾರಂಭದಲ್ಲಿ ಸಿಸ್ಟರ್‌ ಆಂಡ್‌ ಬ್ರದರ್ ಎಂದು ಉದ್ದೇಶಿಸಿ ಮಾತನಾಡಿದ್ದು ದೊಡ್ಡ ರೀತಿಯಲ್ಲಿ ಜನರನ್ನು ಪ್ರಭಾವಿಸಿತು ಎಂದರು.
 ಲೋಕಸಭಾ ಚುನಾವಣೆಯಲ್ಲಿ ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿಯವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಮಹಿಳೆ ಎಂದರೆ ತಾಯಿ. ಆ ತಾಯಿಗೆ ಪುರುಷರಿಂದ ಅನ್ಯಾಯವಾಗಬಾರದೆಂದು ತ್ರೀವಳಿ ತಲಾಖ್‌ ಕಾಯಿದೆಯನ್ನು ರದ್ದು ಮಾಡುವಲ್ಲಿ ನರೇಂದ್ರ ಮೋದಿಯವರು ಯಶಸ್ಸವಿಯಾಗಿದ್ದಾರೆ. ಅಲ್ಲದೇ ಗೋವುಗಳ ರಕ್ಷಣೆಗೆ ದೇಶ ರಕ್ಷಣೆ ಮಾಡುವ ಸಲುವಾಗಿ, ಭಯೋತ್ಪಾದನೆ ನಿಗ್ರಹ ಮಾಡಲು ಮತಾಂತರ ತಡೆಯುವ ಸಲುವಾಗಿ ಕಮಲದ
ಗುರುತಿಗೆ ಮತ ನೀಡಿ ನರೇಂದ್ರ ಮೋದಿಯವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯ ಮೇಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ವಿಭಾಗದ ಕಾರ್ಯವಾಹಕರಾದ ಕೃಷ್ಣಾನಂದ ಕಾಮತ ಇದ್ದರು. ದತ್ತಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಣ್ಣ ಯಾದವಾಡ ವಂದಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next