ಸುಳ್ಯ: ವಿಧಾನಸಭಾ ಕ್ಷೇತ್ರ ರಚನೆಯಾಗಿ 57 ವರ್ಷವಾದರೂ ಸುಳ್ಯದಿಂದ ಚುನಾಯಿತರಾದ ಶಾಸಕರಾರಿಗೂ ಇದುವರೆಗೆ ಮಂತ್ರಿಗಿರಿ ಲಭಿಸಿಲ್ಲ! ಪುತ್ತೂರು ವಿಧಾನಸಭಾ ಕ್ಷೇತ್ರದೊಂದಿಗೆ ಸೇರಿದ್ದ ಸುಳ್ಯ ತಾಲೂಕು ಪ್ರತ್ಯೇಕಗೊಂಡು ಹೊಸ ಕ್ಷೇತ್ರವಾದ ಅನಂತರ 14 ಬಾರಿ ಚುನಾವಣೆ ಎದುರಿಸಿದೆ. ಇಲ್ಲಿನ ಜನಪ್ರತಿನಿಧಿಗಳು ಆಡಳಿತ ಪಕ್ಷದ ಸದಸ್ಯರಾಗಿದ್ದರೂ ಅವರಿಗೆ ಗೂಟದ ಕಾರು ಏರುವ ಭಾಗ್ಯ ಸಿಕ್ಕಿಲ್ಲ. ಆದರೆ ಈ ಬಾರಿ ಬಿಜೆಪಿ ಸರಕಾರ ರಚನೆಗೊಂಡಲ್ಲಿ ಮೀಸಲು ಕ್ಷೇತ್ರವಾಗಿರುವ ಸುಳ್ಯವನ್ನು ಸತತ ಆರನೇ ಬಾರಿಗೆ ಪ್ರತಿನಿಧಿಸುತ್ತಿರುವ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚು ಅನ್ನುವ ಚರ್ಚೆ ಬಿರುಸು ಪಡೆದಿದೆ. ಎಸ್. ಅಂಗಾರ ಅವರು ಜಿಲ್ಲೆಯ ಹಿರಿಯ ಶಾಸಕರಾಗಿರುವುದೂ ಈ ವಾದಕ್ಕೆ ಪುಷ್ಟಿ ನೀಡಿದೆ.
ವಿಧಾನಸಭಾ ಕ್ಷೇತ್ರದ ವಿವರ
1952ರ ಪ್ರಥಮ ಮತ್ತು 1957ರದ್ವಿತೀಯ ಚುನಾವಣೆಗಳಲ್ಲಿ ಸುಳ್ಯವುಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು. 1962ರಲ್ಲಿ ಪ್ರತ್ಯೇಕಗೊಂಡು ಹೊಸ ವಿಧಾನಸಭಾ ಕ್ಷೇತ್ರವಾಯಿತು. 1962ರ ಅನಂತರ 14 ಚುನಾವಣೆಗಳು ನಡೆದು 7 ಬಾರಿ ಬಿಜೆಪಿ, 5 ಬಾರಿ ಕಾಂಗ್ರೆಸ್, ತಲಾ ಒಂದು ಬಾರಿ ಸ್ವತಂತ್ರ ಪಕ್ಷ ಮತ್ತು ಜನತಾ ಪಕ್ಷದ ಅಭ್ಯರ್ಥಿ ಇಲ್ಲಿ ಗೆಲುವು ಸಾಧಿಸಿದ್ದಾರೆ.
ಸುಳ್ಯವು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲು ಕ್ಷೇತ್ರವಾದುದು 1962ರಲ್ಲಿ. ಆ ಬಳಿಕ ಇಲ್ಲಿಂದಪ್ರಥಮವಾಗಿ ಸ್ವತಂತ್ರ ಪಕ್ಷದ ರಾಮಚಂದ್ರ ಗೆದ್ದರು. ಅನಂತರ ಪಿ.ಡಿ. ಬಂಗೇರ, ಎ. ರಾಮಚಂದ್ರ, ಬಾಕಿಲ ಹುಕ್ರಪ್ಪ, ಕೆ. ಕುಶಲ, ಅಂಗಾರ ಅವರಿಗೆಗೆಲುವು ಲಭಿಸಿತ್ತು. ಎಸ್ ಅಂಗಾರ ಗರಿಷ್ಠ ಅವಧಿಯಿಂದ ಶಾಸಕರಾಗಿದ್ದಾರೆ.
ಸುಳ್ಯ ತಾಲೂಕಿನವರಾಗಿ, ಬೇರೆಕ್ಷೇತ್ರದಿಂದ ಗೆದ್ದವರು ಮುಖ್ಯಮಂತ್ರಿ,ಕೇಂದ್ರ-ರಾಜ್ಯದಲ್ಲಿ ಸಚಿವರಾದ ಉದಾಹರಣೆಗಳಿವೆ. ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವವರಿಗೆ ಆ ಭಾಗ್ಯ ಇನ್ನೂ ಸಿಕ್ಕಿಲ್ಲ. ಸುಳ್ಯವು ಪುತ್ತೂರು ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದಾಗ 1952, 57 ಮತ್ತು 62ರಲ್ಲಿ ಬಾಳುಗೋಡು ನಿವಾಸಿ, ನ್ಯಾಯವಾದಿ ಕೂಜುಗೂಡು ವೆಂಕಟರಮಣ ಗೌಡ 3 ಅವಧಿಗೆ ಶಾಸಕರಾಗಿದ್ದರು. ಆಗ ಅವರಿಗೆ ನಿಜಲಿಂಗಪ್ಪ ಸರಕಾರದಲ್ಲಿ ಉಪ ಸಚಿವ ಸ್ಥಾನದಆಹ್ವಾನ ಬಂದಿತ್ತು. ಆದರೆ ಕ್ಯಾಬಿನೆಟ್ ಸ್ಥಾನ ನಿರೀಕ್ಷೆಯಲ್ಲಿದ್ದ ಗೌಡರು ಅವಕಾಶವನ್ನು ತಿರಸ್ಕರಿಸಿದ್ದರು. ಬಳಿಕ 2008ರ ಬಿಜೆಪಿ ಸರಕಾರದಲ್ಲಿ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆಯಿದ್ದರೂ ಹುಸಿಯಾಗಿತ್ತು.
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ
ಅವಿಭಜಿತ ಜಿಲ್ಲೆಯಲ್ಲಿ ಸುಳ್ಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. 1987ರಲ್ಲಿ ಅಂಗಾರ ಮೊದಲ ಬಾರಿಗೆ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ ವಿರುದ್ಧ ಪರಾಜಿತರಾಗಿದ್ದರು. 1994ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ ವಿರುದ್ಧ ಗೆಲುವು ಪಡೆದಿದ್ದರು. 1999ರಲ್ಲಿ ಮತ್ತೆ ಕಾಂಗ್ರೆಸ್‌ನ ಕುಶಲರ ವಿರುದ್ಧ, 2004, 2008, 2013 ಮತ್ತು 2018ರಲ್ಲಿ ಕಾಂಗ್ರೆಸ್‌ನ ಡಾ| ರಘು ವಿರುದ್ಧ ಗೆಲುವು ದಾಖಲಿಸಿದ್ದಾರೆ.
ಸ್ಥಾನಮಾನ ನಿಶ್ಚಿತ
ಬಿಜೆಪಿ ಸರಕಾರ ರಚನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಚಿವ ಸ್ಥಾನದಂತಹ ಉನ್ನತ ಜವಾಬ್ದಾರಿಯನ್ನು ಪಕ್ಷ ನೀಡುವ ವಿಶ್ವಾಸ ಇದೆ. ಜಿಲ್ಲೆಯ ಹಿರಿಯ ಶಾಸಕರಾಗಿ, ಸತತ ಆರು ಅವಧಿಯಿಂದ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
– ವೆಂಕಟ ವಳಲಂಬೆಅಧ್ಯಕ್ಷರು, ಬಿಜೆಪಿ ಮಂಡಲ ಸಮಿತಿ, ಸುಳ್ಯ
• ಕಿರಣ್ ಪ್ರಸಾದ್ ಕುಂಡಡ್ಕ