ನವದೆಹಲಿ: ಯಮುನಾ ನದಿಯ ನೀರಿನ ಮಟ್ಟದ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹರಿಯಾಣದಲ್ಲಿ ಭಾರೀ ಮಳೆಯಿಂದಾಗಿ ಯಮುನಾ ನದಿಯ ನೀರಿನ ಮಟ್ಟ ಮತ್ತೆ ಹೆಚ್ಚುತ್ತಿದೆ.
45 ವರ್ಷಗಳಲ್ಲಿ ಮೊದಲ ಬಾರಿಗೆ ಯಮುನಾ ನದಿಯ ನೀರು ಆಗ್ರಾದ ಐತಿಹಾಸಿಕ ಕಟ್ಟಡ ತಾಜ್ ಮಹಲ್ ಗೋಡೆಗಳಿಗೆ ಅಪ್ಪಳಿಸಿದೆ. ಯಮುನಾ ನದಿಯ ನೀರಿನಿಂದ ತಾಜ್ ಮಹಲ್ ಹಿಂಭಾಗದ ಉದ್ಯಾನವು 45 ವರ್ಷಗಳ ನಂತರ ಮೊದಲ ಬಾರಿಗೆ ಮುಳುಗಿದೆ.
ಯಮುನಾ ನದಿ ನೀರಿನ ಮಟ್ಟ 497.9 ಅಡಿ ತಲುಪಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ದಸರಾ ಘಾಟ್‌ಗೆ ಪ್ರವಾಹದ ನೀರು ನುಗ್ಗಿದೆ. ಇತಿಮದ್-ಉದ್-ದೌಲಾ ಸಮಾಧಿಯ ಹೊರ ಭಾಗಗಳಿಗೂ ನೀರು ನುಗ್ಗಿದೆ.
ನದಿಯ ನೀರು ಹೆಚ್ಚುತ್ತಿರುವುದರಿಂದ ರಾಂಬಾಗ್, ಮೆಹ್ತಾಬ್ ಬಾಗ್, ಜೋಹ್ರಾ ಬಾಗ್ ಮತ್ತು ಕಲಾ ಗುಂಬದ್‌ನಂತಹ ಇತರ ಸ್ಮಾರಕಗಳಿಗೆ ಅಪಾಯವನ್ನುಂಟು ಮಾಡುತ್ತಿದೆ. ಆದರೆ ವಿಶ್ವ ಪರಂಪರೆಯ ತಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ASI) ಹೇಳಿದೆ.
ತಾಜ್ ಮಹಲ್‌ನ ನೆಲಮಾಳಿಗೆಗೆ ನೀರು ಬಂದಿಲ್ಲ .ಆದರೆ ಯಮುನಾ ನದಿಯ ಹರಿವು ಹೆಚ್ಚಾಗಿರುವುದರಿಂದ ತಾಜ್ ಮಹಲ್ ಸೌಂದರ್ಯಕ್ಕೆ ಧಕ್ಕೆ ಉಂಟಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.