ಧಾರವಾಡ: ಮುಂದಿನ ದಿನಗಳಲ್ಲಿ ಜಿಲ್ಲಾ ಕೋರ್ಟ್ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೈದಿಗಳು ತಯಾರಿಸಿರುವ ವಸ್ತುಗಳ ಪ್ರದರ್ಶನ ಮೇಳ ಆಯೋಜಿಸಿ, ಅವರ ಕಲೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಈಶಪ್ಪ ಭೂತೆ ಹೇಳಿದರು.
ನಗರದ ಜೈಲು ಆವರಣದ ಕರೆಮ್ಮ ದೇವಸ್ಥಾನ ಆವರಣದಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ಕೈದಿಗಳು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಕೈದಿಗಳು ರೂಪಿಸಿರುವ ವಿವಿಧ ಗೃಹೋಪಯೋಗಿ ವಸ್ತುಗಳು ಅತ್ಯಂತ ಆಕರ್ಷಕ ಮತ್ತು ಗುಣಮಟ್ಟದ್ದಾಗಿವೆ. ಅವರ ಕಲಾತ್ಮಕತೆ ನೋಡುಗರ ಮನಸ್ಸಿಗೆ ಸಂತೋಷ ಉಂಟು ಮಾಡುತ್ತದೆ ಎಂದರು.
ಸೃಜನಶೀಲ ಕಾರ್ಯ ಚಟುವಟಿಕೆಗಳು ಮಾನಸಿಕ ಪರಿವರ್ತನೆ ಹಾಗೂ ನೆಮ್ಮದಿಗೆ ಸಹಕಾರಿ. ಬಂಧಿಖಾನೆ ಕೈದಿಗಳು ಕರಕುಶಲ ವಸ್ತುಗಳ ತಯಾರಿಕೆ ಹಾಗೂ ಕಥೆ, ಕವನ, ಚುಟುಕು ಕವನಗಳನ್ನು ಬರೆಯುವುದರಿಂದ ಅವರ ಮಾನಸಿಕ ಪರಿವರ್ತನೆ ಆಗಿ ಜೀವನದಲ್ಲಿ ಆಶಾಭಾವ ಮೂಡುತ್ತದೆ. ಇದಲ್ಲದೇ ಕೈದಿಗಳಿಗೆ ಮಠ, ಮಂದಿರ, ಚರ್ಚ್, ದೇವರಮೂರ್ತಿ, ಶಿವಲಿಂಗ ಮುಂತಾದವುಗಳನ್ನು ಮಾಡಲು ಅವಕಾಶ ನೀಡುವುದರಿಂದ ಅವರಲ್ಲಿ ಆಧ್ಯಾತ್ಮ, ಧ್ಯಾನ ಮತ್ತು ಸಮಾಜದ ಬಗ್ಗೆ ಒಲವು ಮೂಡುತ್ತದೆ ಎಂದು ಹೇಳಿದರು.
ಕೈದಿಗಳಲ್ಲಿ ಕೀಳರಿಮೆ ಉಂಟಾಗಿ ಅವರಲ್ಲಿ ಜಿಗುಪ್ಸೆ, ನಿರಾಶಾಭಾವ ಮೂಡುವ ಸಾಧ್ಯತೆ ಇರುತ್ತದೆ. ಅವರ ಸುಧಾರಣೆಗಾಗಿ ಜೈಲುವಾಸದ ಶಿಕ್ಷೆ ನೀಡಿದರೂ ಸಹ, ಅವರಲ್ಲಿ ಜೀವನದ ಹೊಸ ಆಶಾಭಾವ ಮೂಡಲು ಸೃಜನಾತ್ಮಕವಾದ ಕ್ರಿಯಾಶೀಲ ಕಾರ್ಯಚಟುವಟಿಕೆಗಳಲ್ಲಿ ಅವರಿಗೆ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು.
ಅವರ ಆಸಕ್ತಿ ಕ್ಷೇತ್ರಗಳಲ್ಲಿ ಮುಕ್ತವಾಗಿ ತೊಡಗಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ ಬಾಬುಮಾತನಾಡಿ, ಕೈದಿಗಳು ರೂಪಿಸಿರುವ ಪ್ರತಿಯೊಂದು ಕರಕುಶಲ ವಸ್ತುಗಳು ಸುಂದರವಾಗಿವೆ. ಅವುಗಳಿಗೆ ಮಾರುಕಟ್ಟೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ| ಅನಿತಾ ಆರ್. ಮಾತನಾಡಿ, ಕಳೆದ ಒಂದು ತಿಂಗಳಿಂದ 5 ಜನ ಮಹಿಳಾ ಹಾಗೂ 15 ಜನ ಪುರುಷ ಕೈದಿಗಳು ಜೈಲು ಆವರಣದಲ್ಲಿ ಲಭ್ಯವಿರುವ ಅನುಪಯುಕ್ತ ಹಾಗೂ ಉಪಯೋಗಿಸಿ ಬಿಟ್ಟ ವಸ್ತುಗಳನ್ನು ಬಳಸಿ ವಿವಿಧ ರೀತಿಯ ಗೃಹೋಪಯೋಗಿ ಕರಕುಶಲ ವಸ್ತುಗಳನ್ನು ತಯಾರಿಸಿದ್ದಾರೆ. ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಅವರ ಆಸಕ್ತಿ, ಕಲೆಗಳನ್ನು ಪ್ರದರ್ಶಿಸಲು ಮುಕ್ತ ಅವಕಾಶ ನೀಡಿ, ವಸ್ತುಗಳನ್ನು ತಯಾರಿಸಲು ಅವರಿಗೆ ಅಗತ್ಯವಿರುವ ಪರಿಕರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧಿಧೀಶ ಚಿಣ್ಣನ್ನವರ ಆರ್.ಎಸ್. ಸೇರಿದಂತೆ ಕೇಂದ್ರ ಕಾರಾಗೃಹದ ಅಧಿಕಾರಿಗಳು, ಸಿಬ್ಬಂ ದಿ ಪಾಲ್ಗೊಂಡಿದ್ದರು.