Advertisement

ಕಷ್ಟ ಕೊರೊನಾಗೆ, ಮನುಷ್ಯರಿಗಲ್ಲ !

10:30 AM Mar 13, 2020 | mahesh |

ಜನರು ಕೊರೊನಾ ವೈರಸ್‌ ಬಗ್ಗೆ ಭಯಪಡುವ ಅಗತ್ಯವೇ ಇಲ್ಲ. ನಿಜಕ್ಕೂ ಭಯಪಡಬೇಕಾದದ್ದು, ಖುದ್ದು ಕೊರೊನಾ ವೈರಸ್‌! ಏಕೆಂದರೆ, ಕೊರೊನಾ ವೈರಸ್‌ಗೆ ಬದುಕುಳಿಯಲು ಹಾಗೂ ಅದರ ವಂಶಾಭಿವೃದ್ಧಿಯಾಗಲು ಆಶ್ರಯ ಬೇಕೇ ಬೇಕು. ಒಂದು ಜೀವಕೋಶದಲ್ಲಿ ಅದು ಆಶ್ರಯ ಪಡೆಯದೇ ಅದರ ವಂಶೋದ್ಧಾರ ಆಗುವುದಿಲ್ಲ.

Advertisement

ಇಡೀ ಭಾರತದ ಇಷ್ಟು ಜನಸಂಖ್ಯೆಯಲ್ಲಿ ಬೆರಳೆಣಿಕೆಯ ಜನರಿಗಷ್ಟೇ ಈ ವೈರಸ್‌ ಸೋಂಕು ಬಂದಿದೆ ಎಂದರೆ, ಅದರ ಬಗ್ಗೆ ನಾವು ಹೆದರುವ ಅಗತ್ಯವಿಲ್ಲ ಎಂದೇ ಅರ್ಥ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, 80 ಪ್ರತಿಶತ ಜನರಲ್ಲಿ ಯಾವುದೇ ಚಿಕಿತ್ಸೆ ಇಲ್ಲದೆಯೇ ಈ ರೋಗ ಗುಣವಾಗುತ್ತದೆ. ಆದರೂ ಇದರ ಬಗ್ಗೆ ಹೆದರಿಕೆ ಏಕೆ ಇರುವುದು ಎಂದರೆ, ರೋಗಪೀಡಿತರಲ್ಲಿ ಒಬ್ಬಿಬ್ಬರಿಗೆ ಅದು ಗಂಭೀರವಾಗಿ ಪರಿಣಮಿಸುತ್ತದೆ ಎಂಬ ಕಾರಣಕ್ಕೆ. ಕೊರೊನಾದಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣವೂ ಕೇವಲ 3 ಪ್ರತಿಶತ ಮಾತ್ರ. ಡೆಂಗೆ, ಎಚ್‌1ಎನ್‌1 ಸೋಂಕಿನಿಂದಾಗಿ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸಿತ್ತು.

ಕೊರೊನಾ ಬಗ್ಗೆ ಅನಗತ್ಯವಾಗಿ ಭೀತರಾಗುವುದು ಬೇಡ. ಕೊರೊನಾ ಅಷ್ಟು ಸುಲಭವಾಗಿ ಬರುವುದಿಲ್ಲ. ಎಲ್ಲಾ ವೈರಾಣು ಜ್ವರಗಳು ಬರುವ ಹಾಗೆ ಇದು ಗಾಳಿ ಮೂಲಕ ಹರಡುತ್ತಾ ಹೋಗುವುದಿಲ್ಲ. ರೋಗ ಪೀಡಿತರು ಕೆಮ್ಮುವಾಗ ಅಥವಾ ಸೀನಿದಾಗ ಸಿಡಿಯುವ ಡ್ರಾಪ್‌ಲೆಟ್‌ನಲ್ಲಿ (ಹನಿಯಲ್ಲಿ ) ಈ ವೈರಸ್‌ ಇರುತ್ತದೆ. ಹೀಗಾಗಿ, ಯಾರಾದರೂ ಸೀನಿದಾಗ 3 ಅಡಿ ಅಂತರ ಕಾಯು ಕೊಂಡರೂ ಅದು ನಮ್ಮ ದೇಹಕ್ಕೆ ಬರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಆ ಹನಿ ಬಿದ್ದಲ್ಲಿ ಅದನ್ನು ಮುಟ್ಟಿ, ಆಮೇಲೆ ನಮ್ಮ ಕಣ್ಣು, ಮೂಗು ಅಥವಾ ಮುಖವನ್ನು ಉಜ್ಜಿಕೊಂಡೆವೆಂದರೆ, ಅದು ನಮ್ಮ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ.

ತಡೆಯಲು ತುಂಬಾ ಸುಲಭ ಉಪಾಯಗಳಿವೆ…
1) ಮೊದಲನೆಯದಾಗಿ, ಯಾರಾದರೂ ಕೆಮ್ಮುತ್ತಿದ್ದರೆ ಅವರಿಂದ ದೂರ ಇರಬೇಕು. ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಂಡು ತಿರುಗುವ ಅಗತ್ಯ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಇದನ್ನೂ ಕೂಡ ಸ್ಪಷ್ಟವಾಗಿ ಹೇಳಿದೆ. “”ಎಲ್ಲರೂ ಮಾಸ್ಕ್ ಹಾಕಿಕೊಂಡು ಹೋಗಬೇಡಿ. ಬರೀ ಶ್ವಾಸಕೋಶ ತೊಂದರೆ, ಕೆಮ್ಮು, ಶೀತ ಮತ್ತು ಜ್ವರವಿದ್ದವರು ಮಾತ್ರ ಮಾಸ್ಕ್ ಧರಿಸಿ” ಎಂದು ಹೇಳಿದೆ. ಇಲ್ಲದಿದ್ದರೆ ಮಾಸ್ಕ್ಗಳ ಅಭಾವ ಸೃಷ್ಟಿಯಾಗಿ, ಅಗತ್ಯವಿರುವವರಿಗೆ ತೊಂದರೆ ಉಂಟಾಗುತ್ತದೆ. ಮುಖ್ಯವಾಗಿ, ಕೆಮ್ಮು, ಶೀತವಿದ್ದವರು ಹೊರಗೆ ಹೋಗಿ ಜನರಲ್ಲಿ ಗಲಿಬಿಲಿ, ಗಾಬರಿ ಸೃಷ್ಟಿಸುವ ಬದಲು ಮನೆಯಲ್ಲಿ ಇರುವುದೇ ಬೆಸ್ಟ್‌.

2) ಎರಡನೆಯದಾಗಿ, ನಮ್ಮ ರೋಗನಿರೋಧಕ ಶಕ್ತಿ ಉತ್ತಮವಾಗಿದ್ದರೆ ಇದರಿಂದ ತೊಂದರೆಯಾಗುವುದಿಲ್ಲ. ಆಗಲೇ ಹೇಳಿದಂತೆ, ಕೊರೊನಾ ವೈರಸ್‌ ಬದುಕುಳಿಯಲು ಆಶ್ರಯ ಹುಡುಕುತ್ತಲೇ ಇರುತ್ತದೆ. ನಾವದಕ್ಕೆ ಆಶ್ರಯ ಕೊಡಬಾರದು. ಆಶ್ರಯ ಕೊಡಬಾರದು ಎಂದರೆ ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಇದಕ್ಕೆ ಕೆಲವು ಸುಲಭ ವಿಧಾನಗಳಿವೆ. ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಉದಾಹರಣೆಗೆ, ಮಕ್ಕಳು ಚಾಕ್ಲೆಟ್‌ನಂಥ ಶೀತಲ ಪದಾರ್ಥಗಳನ್ನು ತಿಂದು ಶೀತಕ್ಕೆ ಈಡಾಗದಂತೆ ನೋಡಿಕೊಳ್ಳಬೇಕು. ಇದರ ಬದಲು ನೆಲ್ಲಿಕಾಯಿ ತಿನ್ನಲಿ. ನೆಲ್ಲಿಕಾಯಿ ಅತ್ಯಂತ ಉಪಯೋಗಿ “ಇಮ್ಯುನೋ ಮಾಡುಲೇಟರ್‌’. ನೆಲ್ಲಿಕಾಯಿ ತಿಂದರೆ ರೆಸಿಸ್ಟೆನ್ಸ್‌ ಹೆಚ್ಚುತ್ತದೆ. ಜಂಕ್‌ಫ‌ುಡ್‌ಗಳಿಂದ ದೂರವಿರಬೇಕು. ಜಂಕ್‌ಫ‌ುಡ್‌ ಸೇವಿಸಿದರೆ ನಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ.

Advertisement

ಶೀತಲ ಆಹಾರ ಪದಾರ್ಥಗಳನ್ನು, ಅದರಲ್ಲೂ ಬೇಯಿಸದ ತರಕಾರಿ ಸೇವನೆಯನ್ನು ನಿಲ್ಲಿಸಿ, ಬೇಯಿಸಿದ ತರಕಾರಿಯನ್ನು ತಿನ್ನುವುದು ಒಳ್ಳೆಯದು. ಹಣ್ಣುಗಳ ಸೇವನೆಯನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಆದರೆ ಅವುಗಳಲ್ಲೂ ಕೆಲವು ಉಷ್ಣ ಸಾಮರ್ಥ್ಯದ ಹಣ್ಣುಗಳಿದ್ದು, ಅವನ್ನು ತಿನ್ನಬಹುದು. ಉದಾಹರಣೆಗೆ, ಪಪ್ಪಾಯ. ಪಪ್ಪಾಯ ತಿಂದರೆ ಶೀತವಾಗುವುದಿಲ್ಲ. ದಾಳಿಂಬೆಯನ್ನೂ ತಿನ್ನಬಹುದು. ಅದಕ್ಕೆ ವೈರಸ್‌ ವಿರೋಧಿ ಸಾಮರ್ಥ್ಯವಿದೆ. ಇನ್ನು ಸಾಧ್ಯವಾದಷ್ಟೂ ಮನೆಯ ಆಹಾರವನ್ನೇ ತೆಗೆದುಕೊಳ್ಳುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಅಧಿಕವಿರುತ್ತದೆ.

3) ಮೂರನೆಯದಾಗಿ, ಸ್ವಚ್ಛತೆಗೆ ಆದ್ಯತೆ ಕೊಡಿ. ಹಾಗೆಂದು ಗಂಟೆಗೊಮ್ಮೆ ಎದ್ದು ಕೈತೊಳೆಯುತ್ತಲೇ ಇರಬೇಕು ಎಂದಲ್ಲ. ಆದರೆ ಸ್ವಚ್ಛವಾಗಿ ಇರುವುದಕ್ಕೆ ಗಮನ ಕೊಡಬೇಕು. ಒಟ್ಟಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯಕ.

ಎ.ಸಿ. (ಏರ್‌ ಕಂಡೀಷನಿಂಗ್‌) ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ. 25 ಡಿಗ್ರಿಗಿಂತ ಹೆಚ್ಚು ತಾಪಮಾನ ಕೊರೊನಾ ವೈರಸ್‌ಗೆ ಅನುಕೂಲಕರವಲ್ಲ. ಈ ವೈರಸ್‌ ಹೊರಗೆ ಕೆಲವು ಗಂಟೆಗಳಿಂದ ಕೆಲವು ದಿನಗಳವರೆಗೆ ಬದುಕುತ್ತದೆ ಎಂದು ಹೇಳಲಾಗುತ್ತದೆ. ಆದರೆ ಎಷ್ಟು ಎಂದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ನಮಗೆ ದೊಡ್ಡ ವರದಾನವೆಂದರೆ, ಇದು ಬಂದಿರುವಂಥ ಸಮಯ. ಈಗಾಗಲೇ ಬೇಸಿಗೆಯ ಬಿಸಿ 25 ಡಿಗ್ರಿಯ ಮೇಲೆಯೇ ಇದೆ. ಹೀಗಾಗಿ, 25 ಡಿಗ್ರಿಯ ಮೇಲೆ ಇದು ಬದುಕುಳಿಯಲಾರದು. ನಾವು ಹೆದರದೇ ಇರುವುದಕ್ಕೆ ಇದೂ ಕೂಡ ಒಂದು ಕಾರಣ.

ಕೊರೋನಾಗೆ ಚಿಕಿತ್ಸೆ ಏನು?
ಆಯುರ್ವೇದವು ಆ್ಯಂಟಿ ವೈರಲ್‌ ಡ್ರಗ್‌ಗಳ ವಿಷಯದಲ್ಲಿ ತುಂಬಾ ಮುಂದಿದೆ. ಮಾಡರ್ನ್ ಮೆಡಿಸಿನ್‌ನಲ್ಲಿ ಕೇವಲ ಬೆರಳೆಣಿಕೆಯ ಡ್ರಗ್ಸ್‌ಗಳು ಮಾತ್ರ ಆ್ಯಂಟಿ ವೈರಲ್‌ ಆಗಿವೆ. ಆ್ಯಂಟಿ ವೈರಲ್‌ ಎಂದರೆ, “ವೈರಾಣು ವಿರೋಧಿ’ ಎಂದರ್ಥವೇ ಹೊರತು, “ವೈರಾಣು ನಾಶಕ’ ಎಂದರ್ಥವಲ್ಲ. ಸರಳವಾಗಿ ಹೇಳಬೇಕೆಂದರೆ, ಈ ಆ್ಯಂಟಿ ವೈರಲ್‌ ಔಷಧಗಳು ದೇಹದಲ್ಲಿ ಸ್ವಲ್ಪ ಗಲಾಟೆ ಮಾಡಿ ವೈರಸ್‌ಗಳು ಹೊರಹೋಗುವಂತೆ ಮಾಡುತ್ತವಷ್ಟೆ. ಅಲ್ಲದೇ, ಆಯುರ್ವೇದದಲ್ಲಿ ವೈರಿಸೈಡಲ್‌ ಎನ್ನುವ ಔಷಧಗಳೂ ಇವೆ. ಅಂದರೆ ವೈರಸ್‌ ಅನ್ನು ನಾಶಮಾಡುವಂಥ ಡ್ರಗ್ಸ್‌ಗಳಿವು. ನೂರಾರು ಔಷಧೀಯ ಸಸ್ಯಗಳಿಗೆ ಆ್ಯಂಟಿ ವೈರಲ್‌ ಮತ್ತು ವೈರಿಸೈಡಲ್‌ ಗುಣವಿದೆ. ಅಡುಗೆ ಮನೆಯಲ್ಲಿರುವ ಸಾಂಬಾರು ಪದಾರ್ಥಗಳಲ್ಲಿ ಹೆಚ್ಚಿನ ಪದಾರ್ಥಗಳಿಗೆ ಆ್ಯಂಟಿ ವೈರಲ್‌ ಗುಣವಿದೆ. ಅರಿಶಿಣ, ಕೊತ್ತಂಬರಿ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಎಳ್ಳು, ಮೆಂತೆ, ಜೀರಿಗೆ, ಶುಂಠಿ…ಇವೆಲ್ಲವೂ ವೈರಾಣು ವಿರೋಧಿ ಸಾಮರ್ಥ್ಯ ಹೊಂದಿರುವ ಪದಾರ್ಥಗಳು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತುಳಸಿಯನ್ನೂ ಉಪಯೋಗಿಸಬಹುದು. ಒಂದು ಲೀಟರ್‌ ನೀರಿಗೆ ಹತ್ತು ತುಳಸಿ ಎಲೆಗಳನ್ನು ಹಾಕಿ ಕುದಿಸಿ ಕುಡಿಯಬಹುದು. ಇದಷ್ಟೇ ಅಲ್ಲದೇ, ಅಮೃತಬಳ್ಳಿಯಂಥ ಔಷಧೀಯ ಸಸ್ಯಗಳನ್ನೂ ಬಳಸಬಹುದು. ಅಮೃತಬಳ್ಳಿಯ ಎಲೆ ಅತ್ಯುತ್ತಮ ವೈರಾಣು ವಿರೋಧಿ ಔಷಧವಾಗಿದೆ. ನೆಲನೆಲ್ಲಿ, ಸೊಗದೆ ಬೇರಿಗೂ ಕೂಡ ವೈರಾಣು ವಿರೋಧಿ ಶಕ್ತಿಯಿದೆ.

ಹಾಗೆಂದು ಇವೆಲ್ಲ ಕೊರೊನಾ ವೈರಸ್‌ನ ವಿರುದ್ಧ ಕೆಲಸ ಮಾಡುತ್ತವಾ ಎನ್ನುವುದು ಗೊತ್ತಿಲ್ಲ. ಆದರೆ, ಇಲ್ಲಿಯವರೆಗೂ ಯಾವೆಲ್ಲ ವೈರಾಣುವಿನ ಕಾಯಿಲೆಗಳು ಬಂದಿವೆಯೋ(ಎಚ್‌1ಎನ್‌1, ಡೇಂಗ್ಯೂ, ಚಿಕನ್‌ಗೂನ್ಯ, ಹೆಪಟೈಟಿಸ್‌) ಆ ಕಾಯಿಲೆಗಳ ಮೇಲೆ ಈ ಪ್ರತಿಯೊಂದು ಔಷಧವೂ ಕೆಲಸ ಮಾಡಿವೆ. ಹಾಗಾಗಿ, ಇವೆಲ್ಲ broad spectrum antiviral drugs.

ನಾನು ಜನರಿಗೆ ಹೇಳುವುದಿಷ್ಟೆ- ಹಿಂದೆ ಬಂದ ಮಾರಾಣಾಂತಿಕ ವೈರಸ್‌ ರೋಗಗಳಿಗೆ ಹೋಲಿಸಿದರೆ ಕೊರೊನಾದಿಂದಾಗುವ ಸಾವಿನ ಪ್ರಮಾಣ ಅತ್ಯಂತ ಕಡಿಮೆ. ವದಂತಿಗಳಿಗೆ ಕಿವಿಗೊಡಬೇಡಿ. ಈ ವೈರಸ್‌ ನಮ್ಮ ದೇಹದೊಳಗೆ ಪ್ರವೇಶಿಸಿ ರೋಗವಾಗಿ ಬದಲಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. 5-24 ದಿನ ಎಂದು ವಿಶ್ವಆರೋಗ್ಯ ಸಂಸ್ಥೆ ಹೇಳುತ್ತಿದೆ. ಅಲ್ಲಿಯವರೆಗೂ ಅದು ನಮ್ಮ ದೇಹದಲ್ಲಿ ಸೈಲೆಂಟ್‌ ಆಗಿ ಇರುತ್ತದೆ(ಇನ್‌ಕ್ಯೂಬೇಷನ್‌ ಪೀರಿಯಡ್‌). ಇನ್ನು ರೋಗ ಲಕ್ಷಣ ಬಂದಮೇಲೂ ಚಿಕಿತ್ಸೆ ಪಡೆದುಕೊಳ್ಳಲು ಸಮಯವಿರುತ್ತದೆ. ಸರಿಯಾದ ಚಿಕಿತ್ಸೆ ಪಡೆದು, ರೋಗಮುಕ್ತರಾಗಲು ಸಾಕಷ್ಟು ಸಮಯವಿರುತ್ತದೆ.

ಇನ್ನೊಂದು ವಿಷಯವೇನೆಂದರೆ, ಭಾರತದಲ್ಲಿ 68 ಪ್ರತಿಶತ ಜನರು ಹಳ್ಳಿಗಳಲ್ಲಿದ್ದರೆ, 32 ಪ್ರತಿಶತ ಜನರು ಪಟ್ಟಣ, ನಗರಗಳಲ್ಲಿದ್ದಾರೆ. ಹಳ್ಳಿಗಳಲ್ಲಿರುವವರು ಈ ರೋಗದಿಂದ ಹೆದರುವ ಅಗತ್ಯವಿಲ್ಲ. ಏಕೆಂದರೆ, ಅಲ್ಲೆಲ್ಲ ಜನ ಸಾಂದ್ರತೆ ಕಡಿಮೆಯಿರುತ್ತದೆ, ಜನರು ಪರಸ್ಪರ ದೂರವಿರುತ್ತಾರೆ, ಈ ಕಾಯಿಲೆಯೂ ಅಲ್ಲಿ ಹೋಗಿಲ್ಲ. ಆದ ಕಾರಣ, ಹಳ್ಳಿಯ ಜನರು ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು! ನಗರ ಪ್ರದೇಶಗಳಲ್ಲಿರುವವರು ಸ್ವಲ್ಪ ಜಾಗ್ರತೆ ವಹಿಸುವುದು ಅಗತ್ಯ.

ಡಾ| ಗಿರಿಧರ್‌ ಕಜೆ

Advertisement

Udayavani is now on Telegram. Click here to join our channel and stay updated with the latest news.

Next