ಮಂಡ್ಯ: ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದ ವಿದ್ಯಾವಂತ ದಂಪತಿ ಸಮಗ್ರ ಕೃಷಿಗೆ ಆದ್ಯತೆ ನೀಡುವ ಮೂಲಕ ಉತ್ತಮ ಜೀವನಕಂಡುಕೊಂಡಿದ್ದಾರೆ. ಹೊನಗಹಳ್ಳಿ ಗ್ರಾಮದ ಎಚ್.ಬಿ.ಮಹೇಶ್ ಹಾಗೂ ಗೀತಾ ದಂಪತಿ ತಮಗಿರುವ 15 ಎಕರೆ ಜಮೀನಿನಲ್ಲಿ ಬಹುಬೆಳೆಗಳನ್ನು ಬೆಳೆದಿದ್ದಾರೆ. ಜೊತೆಗೆ ಅರಣ್ಯ ಕೃಷಿಗೆ ಆದ್ಯತೆ ನೀಡುವ ಮೂಲಕ ಮಾದರಿ ರೈತ ದಂಪತಿಯಾಗಿದ್ದಾರೆ.
ಅರಣ್ಯ ಕೃಷಿಗೆ ಸಾಥ್: ಇರುವ ಜಮೀನನ್ನು ಪಾಳು ಬಿಡದೆ ಸಮಗ್ರ ಕೃಷಿ ಮಾಡಲು ಪತ್ನಿ ಗೀತಾ ಅವರ ಯೋಜನೆಗೆ ಪತಿ ಮಹೇಶ್ ಪೋ›ತ್ಸಾಹ ನೀಡಿದ್ದಾರೆ. ಇದರಿಂದ ಅರಣ್ಯ ಕೃಷಿ ಮಾಡಿದ್ದಾರೆ. ಹರ್ಕ್ಯಲೆಸ್ 40, ಶ್ರೀಗಂಧ 5, ರಕ್ತ ಚಂದನ 10, ಹೊನ್ನೆ10 ಸೇರಿದಂತೆ ಇತರೆ ಮರಗಳನ್ನು ಬೆಳೆದಿದ್ದಾರೆ.
ತೋಟಗಾರಿಕೆ ಬೆಳೆ: ಅರಣ್ಯ ಕೃಷಿ ಜೊತೆಯಲ್ಲಿಯೇ ತೋಟಗಾರಿಕೆ ಬೆಳೆಗಳಿಗೂ ಒತ್ತು ನೀಡಿದ್ದಾರೆ. ತೆಂಗು 600, ನಿಂಬೆಗಿಡ 60, ಸಪೋಟ 140, ಚಕೋತಾ ಹಣ್ಣಿನ ಗಿಡಗಳನ್ನು ಹಾಕಿದ್ದಾರೆ. ಬದನೆಕಾಯಿ, ಮೆಣಸಿನ ಕಾಯಿ ಹಾಗೂ ಹೂವು ಬೆಳೆಗಳನ್ನು ತಲಾ ಅರ್ಧ ಎಕರೆಯಿಂದ 1 ಎಕರೆವರೆಗೂ ಬೆಳೆದಿದ್ದಾರೆ. ಇದರ ಜತೆಗೆ ನೆಲ್ಲಿಗಿಡ, ಬಿಲ್ವಪತ್ರೆ, ಮಧು ಮೇಹ ರೋಗಿಗಳಿಗೆ ಅಗತ್ಯವಾಗಿ ಬೇಕಾಗಿರುವ ಚಕ್ರಮುನಿಗಿಡ ಸೇರಿದಂತೆ ಆಯುರ್ವೇದ ಗಿಡಗಳನ್ನು ಬೆಳೆಸಿದ್ದಾರೆ. ನೀರಿನ ಸಮರ್ಪಕ ಬಳಕೆ: ಬೆಳೆಗಳಿಗೆ ಬೇಕಾದ ನೀರಿಗೆ ಕೃಷಿ ಹೊಂಡ, ಕೊಳವೆ ಬಾವಿಗಳಿವೆ. ಬೆಳೆಗಳಿಗೆ ನೀರಿನ ಕೊರತೆ ಇಲ್ಲದಿದ್ದರೂ, ನೀರನ್ನು ಪೋಲು ಮಾಡಬಾರದು ಎಂಬ ಉದ್ದೇಶದಿಂದ ಹನಿ ನೀರಾವರಿ ಮೂಲಕ ನೀರಿನ ಸಮರ್ಪಕ ಬಳಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ಚಿಮ್ಮುವ ನೀರಿನ ಚಿಲುಮೆಗಳನ್ನು ಅಳವಡಿಸಿದ್ದಾರೆ.
ಇದನ್ನೂ ಓದಿ:ಅಪಾಯದಲಿದೆ ಮಹದೇವಪುರ ಸಂಪರ್ಕ ಸೇತುವೆ
ಹೈನುಗಾರಿಕೆಗೂ ಆದ್ಯತೆ: ಸಮಗ್ರ ಕೃಷಿಯೊಂದಿಗೆ ಹೈನುಗಾರಿಕೆಯಲ್ಲೂ ತೊಡಗಿಕೊಂಡಿದ್ದಾರೆ. 3 ಸೀಮೆ ಹಸುಗಳನ್ನು ಸಾಕಿದ್ದು, ಪ್ರತಿನಿತ್ಯ 10 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ಜೊತೆಗೆ12 ಆಡು, 12 ಕುರಿ, 12 ಕೋಳಿಗಳ ಸಾಕಾಣಿಕೆ ಮಾಡಿದ್ದಾರೆ. ಹಸು, ಆಡು,ಕುರಿಗಳಿಗೆ ಬೇಕಾದ ಮೇವು ಬೆಳೆದುಕೊಂಡಿದ್ದಾರೆ. ನೇರವಾಗಿ ಗ್ರಾಹಕರಿಗೆ ಮಾರಾಟ: ಸ್ವಂತ ಮಿನಿ ಟ್ರ್ಯಾಕ್ಟರ್ ಹೊಂದಿರುವ ಇವರು, ತಾವು ಬೆಳೆದ ತರಕಾರಿ, ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಕಿರುಗಾವಲಿನಲ್ಲಿ ಪ್ರತಿ ವಾರ ನಡೆಯುವ ಸಂತೇಮಾಳದಲ್ಲಿ ಮಾರಾಟ ಮಾಡುತ್ತಾರೆ. ಜೊತೆಗೆ ಮಂಡ್ಯ, ಮೈಸೂರು ಸೇರಿದಂತೆ ವಿವಿಧೆಡೆಗೂ ಸರಬರಾಜು ಮಾಡುತ್ತಾರೆ.
ಪ್ರತಿ ತಿಂಗಳು ಆದಾಯ
ಸಮಗ್ರ ಕೃಷಿ ಮಾಡುತ್ತಿರುವ ದಂಪತಿ, ಪ್ರತಿ ತಿಂಗಳು ಆದಾಯ ಪಡೆಯುತ್ತಿದ್ದಾರೆ. ತರಕಾರಿ ಮಾರಾಟದಿಂದ ನಿತ್ಯ ಹಣಗಳಿಸುತ್ತಿ ದ್ದಾರೆ. ಹಾಲು ಉತ್ಪಾದನೆಯಿಂದ ವಾರ,15 ದಿನಗಳಿಗೊಮ್ಮೆ ಡೇರಿಯಿಂದ ಹಣ ಪಾವತಿಸಲಾಗುತ್ತದೆ. ಇದರ ಜೊತೆಗೆ ಎಳ ನೀರು ಮಾರಾಟ, ಪ್ರತಿ ವರ್ಷ ಎರಡು ಬಾರಿ ಸಪೋಟ ಫಲ, ನಿಂಬೆ ಹಣ್ಣು, ತೆಂಗಿನ ಕಾಯಿ ಮಾರಾಟದಿಂದಲೂ ಆದಾಯ ಗಳಿಸುತ್ತಾ ಮೂರು ಮಕ್ಕಳೊಂದಿಗೆ ನೆಮ್ಮದಿ ಜೀವನ ಕಂಡುಕೊಂಡಿದ್ದಾರೆ.
ಯುವ ರೈತ ಮಹಿಳೆ ಪ್ರಶಸ್ತಿ
ರೈತ ಮಹಿಳೆ ಗೀತಾ ಅವರು ಸಮಗ್ರ ಹಾಗೂ ಅರಣ್ಯಕೃಷಿಗೆ ಆದ್ಯತೆ ನೀಡಿ ಪ್ರಗತಿಪರ ರೈತ ಮಹಿಳೆಯಾಗಿ ಹೊರ ಹೊಮ್ಮಿದ್ದಾರೆ. ಇದನ್ನು ಗುರುತಿಸಿದ ಬೆಂಗಳೂರುಕೃಷ ವಿಶ್ವವಿದ್ಯಾಲಯ ಕೃಷಿ ಮೇಳದಲ್ಲಿ ತಾಲೂಕು ಪ್ರಗತಿಪರ ಯುವ ರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.
-ಎಚ್.ಶಿವರಾಜು
ನಾನು ಐಟಿಐ, ನನ್ನ ಪತ್ನಿ ಎಸ್ಸೆಸ್ಸೆಲ್ಸಿ ಓದಿದ್ದಾರೆ. ಇಬ್ಬರೂ ಕೃಷಿಗೆ ಆದ್ಯತೆ ನೀಡಿದ್ದೇವೆ.ಕಬ್ಬು, ಭತ್ತದ ವಾಣಿಜ್ಯ ಬೆಳೆಗಳಿಗೆ ನಾವು ಮುಂದಾಗದೆ ಸಮಗ್ರ ಕೃಷಿಗೆ ಆದ್ಯತೆ ನೀಡಿದ್ದೇವೆ. ಒಂದೊಂದು ಬಾರಿ ತರಕಾರಿ ಬೆಲೆಗಳಲ್ಲಿ ಏರಿಳಿಉಂಟಾಗುತ್ತದೆ. ಆದರೆ, ಮತ್ತೂಂದು ಬೆಳೆ ಅದರ ನಷ್ಟ ಸರಿದೂಗಿಸುತ್ತೆ. ನನ್ನ ಪತ್ನಿಯ ಅರಣ್ಯಕೃಷಿಯಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಬರುವ ನಿರೀಕ್ಷೆ ಇದೆ.
-ಎಚ್.ಬಿ.ಮಹೇಶ್, ಗೀತಾ ಅವರ ಪತಿ, ಹೊನಗನಹಳ್ಳಿ