Advertisement

ವಿದ್ಯಾರ್ಥಿಗಳ ಪಾಲಿಗೆ ಪಠ್ಯ ತಾಯಿ ಇದ್ದಂತೆ

11:06 AM Apr 05, 2022 | Team Udayavani |

ಹುಬ್ಬಳ್ಳಿ: ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯಲು, ಅನುತ್ತೀರ್ಣರಾಗಲು ವೈಯಕ್ತಿಕ ಅಧ್ಯಯನ ಸಮಸ್ಯೆ ಪ್ರಮುಖ ಕಾರಣವಾಗಿದೆ. ಇದನ್ನು ಬಹುತೇಕರು ಅರಿಯುತ್ತಿಲ್ಲ ಎಂದು ಪರಿವರ್ತನೆ ಸಮೂಹ ವಿದ್ಯಾಸಂಸ್ಥೆ ಡೀನ್‌ ಚೇತನ ರಾಮ ಹೇಳಿದರು.

Advertisement

ಮುಕೇಶ ಹಿಂಗಲಾ ಫೌಂಡೇಶನ್‌, ಜಿಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರ ಅಸೋಸಿಯೇಶನ್‌ ಸೋಮವಾರ ಇಲ್ಲಿನ ನವೀನ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಹಿಂದುಳಿಯುವಿಕೆಗೆ ಕೌಟುಂಬಿಕ, ಶಾಲೆಗಳ ಸಮಸ್ಯೆ, ಶಿಕ್ಷಕರ ಕೊರತೆ ಜತೆಗೆ ವೈಯಕ್ತಿಕ ಅಧ್ಯಯನ ಸಮಸ್ಯೆ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳ ವೈಯಕ್ತಿಕ ಅಧ್ಯಯನ ಸಮಸ್ಯೆ ಗಮನಿಸಲು ಮುಂದಾದರೆ ಸುಮಾರು 20 ಅಂಶಗಳು ಕಾಣಸಿಗುತ್ತವೆ. ಪಠ್ಯ ಎಂಬುದು ವಿದ್ಯಾರ್ಥಿಗಳ ಪಾಲಿಗೆ ತಾಯಿ ಇದ್ದಂತೆ, ಪಠ್ಯವನ್ನು ಮರೆತರೆ ತಾಯಿಯನ್ನೇ ಮರೆತಂತೆ ಎಂದರು.

ಏಕಾಗ್ರತೆ, ನೆನಪು ಉಳಿಯದಿರುವುದು, ಅಧ್ಯಯನ ಒತ್ತಡ, ಪರೀಕ್ಷೆ ಭಯ, ಸಮಯ ನಿರ್ವಹಣೆ ಹಾಗೂ ಸಮಯ ಉಳಿತಾಯ, ಧ್ಯಾನ, ವೇಗವಾಗಿ ಓದುವುದು ಮತ್ತು ಬರೆಯುವುದು ಈ ಎಲ್ಲ ಅಂಶಗಳು ತಮ್ಮದೇ ಪರಿಣಾಮ ಬೀರುತ್ತವೆ. ಇವುಗಳ ನಿವಾರಣೆ ಹಾಗೂ ಅಳವಡಿಕೆ ಸಮರ್ಪಕವಾಗಿ ಕೈಗೊಂಡರೆ ವಿದ್ಯಾರ್ಥಿಗಳು ಶೇ.100 ಉತ್ತೀರ್ಣರಾಗುತ್ತಾರೆ. ನೋವಿನ ಸಂಗತಿ ಎಂದರೆ ಶೇ.70 ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಇಲ್ಲ ಎಂಬುದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

ರಾಜ್ಯದಲ್ಲಿ ಸುಮಾರು 8.53 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿದ್ದು, ಅದರಲ್ಲಿ ಸುಮಾರು 2 ಲಕ್ಷದಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾದರೆ, ಸುಮಾರು 2 ಲಕ್ಷ ವಿದ್ಯಾರ್ಥಿಗಳ ಕನಿಷ್ಟ ಅಂಕಗಳನ್ನು ಪಡೆದು ಉತ್ತೀರ್ಣರಾಗುತ್ತಾರೆ ಎಂದು ಹೇಳಿದರು.

ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿ ನಿರ್ಮಾಣ ಶಿಕ್ಷಕರ ಕಾರ್ಯವಾಗಿದೆ. ಬದಲಾದ ಸ್ಥಿತಿಗೆ ಹೊಂದಿಕೊಳ್ಳಬೇಕಾಗಿದೆ. ಮುಂದಿನ 30 ವರ್ಷಗಳಲ್ಲಿ ಕಾಲೇಜು ಕಟ್ಟಡಗಳೇ ಅಗತ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆಯಲಿದೆ ಎಂದರು.

Advertisement

ಮುಕೇಶ ಹಿಂಗಲಾ ಫೌಂಡೇಶನ್‌ ಸಂಸ್ಥಾಪಕ ಮುಕೇಶ ಹಿಂಗಲಾ ಪ್ರಾಸ್ತಾವಿಕ ಮಾತನಾಡಿ, ಫೌಂಡೇಶನ್‌ ಶೈಕ್ಷಣಿಕವಾಗಿ ಅನೇಕ ನೆರವು ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಪ್ರೇರಣಾತ್ಮಕ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಪ್ರೊ| ಹನುಮಂತಪ್ಪ ಮಾತನಾಡಿದರು. ಪ್ರೊ| ಸಂದೀಪ ಬೂದಿಹಾಳ ಇನ್ನಿತರರು ಇದ್ದರು. ಎಂ. ರಾಧಾ ನಿರೂಪಿಸಿದರು.

ಒಂದು ಕಾಲೇಜಿನ ಉಪನ್ಯಾಸಕರಿಂದ ಇನ್ನೊಂದು ಕಾಲೇಜಿನಲ್ಲಿ ಪಾಠ! ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣ ನಾಯಕ ಮಾತನಾಡಿ, 1968ರಲ್ಲಿ ಇಂದಿರಾಗಾಂಧಿಯವರು ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿ ಮಾಡಿದ್ದರು. 1986ರಲ್ಲಿ ರಾಜೀವಗಾಂಧಿ ಅವರು ಪ್ರಧಾನಿಯಾಗಿದ್ದಾಗ ಎರಡನೇ ಬಾರಿಗೆ ನೀತಿ ಜಾರಿಗೊಂಡಿತ್ತು. 1992ರಲ್ಲಿ ಕೆಲ ನ್ಯೂನತೆ ಸರಿಪಡಿಸಿ ಜಾರಿಗೊಳಿಸಿದ್ದು, 2020ರಲ್ಲಿ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ಆಮೂಲಾಗ್ರ ಬದಲಾವಣೆಯೊಂದಿಗೆ ಜಾರಿಗೊಳಿಸಲಾಗಿದೆ. ಶಿಕ್ಷಣದಲ್ಲಿ ಸುಧಾರಣೆ ನಿಟ್ಟಿನಲ್ಲಿ ಅಗತ್ಯವಿರುವ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಅದೇ ರೀತಿ ಒಂದು ಕಾಲೇಜು ಉಪನ್ಯಾಸಕರನ್ನು ಇನ್ನೊಂದು ಕಾಲೇಜಿಗೆ ತಾತ್ಕಾಲಿಕ ಕಳುಹಿಸಿ ಪಾಠ ಮಾಡಿಸುವ ಕಾರ್ಯ ಆರಂಭಿಸಲಾಗುವುದು ಎಂದರು.

ವಿದ್ಯಾರ್ಥಿಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಾಚಾರ್ಯರ ಜವಾಬ್ದಾರಿ ದೊಡ್ಡದಾಗಿದೆ. ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮಾಹಿತಿಗಳನ್ನು ಸಕಾಲಿಕ ಹಾಗೂ ಸಮರ್ಪಕವಾಗಿ ನೀಡಬೇಕಾಗಿದೆ. ನೀಟ್‌, ಸಿಇಟಿ, ಕಾಮೇಡ್‌-ಕೆ ಇತ್ಯಾದಿ ಪರೀಕ್ಷೆಗಳ ಎದುರಿಸಲು ವಿದ್ಯಾರ್ಥಿಗಳನ್ನು ಸಮರ್ಪಕ ರೀತಿಯಲ್ಲಿ ತಯಾರಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೂ ತರಬೇತಿ ಅಗತ್ಯವಿದೆ.   –ಶಂಕರಣ್ಣ ಮುನವಳ್ಳಿ, ಕೆಎಲ್‌ಇ ಸಂಸ್ಥೆ ನಿರ್ದೇಶಕ

ದೇಶದಲ್ಲಿ ಒಂದೇ ಶಿಕ್ಷಣ ನೀತಿ ಸ್ವಾಗತಾರ್ಹ. ನೂತನ ಶಿಕ್ಷಣ ನೀತಿ ಅನುಷ್ಠಾನ ನಿಟ್ಟಿನಲ್ಲಿ ಇನ್ನಷ್ಟು ಸ್ಪಷ್ಟತೆ ಬೇಕು. ಮುಂದಿನ ದಿನಗಳಲ್ಲಿ ಪಿಯುಸಿ ಕಾಲೇಜುಗಳ ಸ್ಥಾನ ಏನಾಗಲಿದೆ ಎಂಬುದು ಸ್ಪಷ್ಟವಾಗಬೇಕು. ಅದೇ ರೀತಿ ಆಯಾ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುವ ಮೂಲಕ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿಗೊಳಿಸಬೇಕು. ಈ ಹಿಂದೆ ರಾಜ್ಯ ಪಠ್ಯಕ್ರಮಕ್ಕೆ ಹೆಚ್ಚಿನವರು ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದರು. ಇದೀಗ ಸ್ಥಿತಿ ಬದಲಾಗಿದ್ದು, ಸಿಬಿಎಸ್‌ಇ ಪ್ರವೇಶಕ್ಕೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. –ರಾಜಾ ದೇಸಾಯಿ, ಎನ್‌ಎಲ್‌ಇ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next