Advertisement

ಮುಪ್ಪಿನಲ್ಲಿ ಸ್ಥಿರ ಆರೋಗ್ಯಕ್ಕಾಗಿ

11:25 PM Mar 02, 2020 | Sriram |

ಮುಪ್ಪು ಯಾರನ್ನೂ ಬಿಡುವುದಿಲ್ಲ. ವಯಸ್ಸಾಗುತ್ತಿದ್ದಂತೆ ಅನೇಕ ಕಾಯಿಲೆಗಳು ನಮ್ಮನ್ನು ಬೆನ್ನಟ್ಟಿ ಬರುತ್ತವೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಮೂಳೆ ಸವೆತ, ದೇಹದ ವಿವಿಧ ಭಾಗಗಳು ಸವೆ ಯುತ್ತಾ ಕಾರ್ಯವೈಖರಿ ಕ್ಷೀಣಿಸತೊಡಗಿದಂತೆ ಕಾಣಿಸಿಕೊಳ್ಳುವ ಕಾಯಿಲೆ ಗಳ ಜತೆಗೆ ಬೊಜ್ಜಿನ ಸಮಸ್ಯೆಯೂ ಬರುತ್ತದೆ. ಹಾಗಿದ್ದರೆ ವಯಸ್ಸಾದವರು ಎಂತಹ ಆಹಾರ ಸೇವಿಸಬೇಕು, ಮುಪ್ಪಿನಲ್ಲಿ ಆರೋಗ್ಯವನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು ಏನು ಮಾಡಬೇಕು ಇಲ್ಲಿದೆ ಮಾಹಿತಿ.

Advertisement

ಜೀವಸತ್ವ ಮತ್ತು ಖನಿಜಾಂಶ ಆಹಾರ
ವಯಸ್ಸಾದಂತೆ, ದೇಹಕ್ಕೆ ಶಕ್ತಿಯ ಆವಶ್ಯಕತೆ ಕಡಿಮೆಯಾಗುವುದಂತೂ ನಿಜ. ಅದಕ್ಕಾಗಿ ಅವರ ಆಹಾರ ಸೇವನೆಯೂ ಕಡಿಮೆ ಇರಬೇಕಾಗುತ್ತದೆ. ಆಹಾರದ ಆವಶ್ಯಕತೆ ಕಡಿಮೆ ಯಾದರೂ ಅವರ ಆರೋಗ್ಯಕ್ಕೆ ಅತ್ಯಧಿಕವಾದ ಜೀವಸತ್ವಗಳು ಹಾಗೂ ಖನಿಜಾಂಶ ಅವಶ್ಯ. ಆದ್ದರಿಂದ ಯಥೇತ್ಛವಾದ ತರಕಾರಿ, ಸೊಪ್ಪು, ಹಣ್ಣುಗಳ ಸೇವನೆ ಒಳಿತು.

ಕರಿದ ಪದಾರ್ಥಗಳಿಗೆ ವಿದಾಯ ಹೇಳಿ
ಕರಿದ ಪದಾರ್ಥಗಳು, ಅತೀ ಖಾರದ ಪದಾರ್ಥ, ಜಿಡ್ಡು ಭರಿತ ಆಹಾರ ಸೇವನೆ ಮಿತಿ ಯಾಗಿರಬೇಕು. ಹೊಟ್ಟೆಭಾರ, ಆ್ಯಸಿಡಿಟಿ, ತುಂಬಾ ಊಟ ಮಾಡುವುದು ಕಷ್ಟ ಎಂಬಂಥ ತೊಂದರೆಗಳನ್ನು ವಯಸ್ಸಾದವರು ಹೇಳುತ್ತಿರುತ್ತಾರೆ. ಟೀ, ಕಾಫಿ ಸೇವನೆ ಮಿತಿಯಾಗಿರ ಬೇಕು. ಇತರ ದ್ರವರೂಪದ ನೀರು, ಮಜ್ಜಿಗೆ, ಹಾಲು, ಸಕ್ಕರೆಯಿಲ್ಲದ ಹಣ್ಣಿನ ರಸ ಆಹಾರವನ್ನು ಹೆಚ್ಚು ಸೇವಿಸಬಹುದು.

ದುಶ್ಚಟಗಳಿಂದ ಅಂತರ
ಈ ವಯಸ್ಸಿನಲ್ಲಿ ಮದ್ಯಪಾನ ಹಾಗೂ ಯಾವುದೇ ರೀತಿಯ ತಂಬಾಕಿನ ಸೇವನೆಗೆ ವಿದಾಯ ಹೇಳಬೇಕು. ಒಂದೇ ಬಾರಿ ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದು ಸರಿಯಲ್ಲ. ದಿನದಲ್ಲಿ 3-4 ಬಾರಿ ಸಣ್ಣ ಪ್ರಮಾಣದ ಆಹಾರ ಸೇವನೆ ಒಳಿತು. ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಉಪಾಹಾರ, ರಾತ್ರಿ ಊಟ ಎಂಬಂತೆ 4 ಗಂಟೆಗಳಿಗೊಮ್ಮೆ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸಬೇಕು.

ಮೆತ್ತಗಿನ ಆಹಾರ ಸೇವನೆ ಒಳ್ಳೆಯದು
ವಯಸ್ಸಾದವರಿಗೆ ಹಲ್ಲಿನ ಸಮಸ್ಯೆಯೂ ಸಾಮಾನ್ಯ. ಅಲುಗಾಡುವ ಹಲ್ಲುಗಳು, ಹಲ್ಲುಗಳಿಲ್ಲದ ದವಡೆ, ಕಟ್ಟಿಸಿಕೊಂಡ ಕೃತಕ ದಂತ ಪಂಕ್ತಿ ಇವೆಲ್ಲವೂ ಪಚನ ಕ್ರಿಯೆಗೆ ತೊಡಕುಂಟು ಮಾಡಬಹುದು. ಸರಿಯಾಗಿ ಆಹಾರವನ್ನು ಜಗಿಯಲಾಗದೆ ಇರುವುದರಿಂದ ಮೆತ್ತಗಿನ ಆಹಾರ ಸೇವನೆ ಒಳ್ಳೆಯದು. ಗಟ್ಟಿಯಾದ ತರಕಾರಿಯನ್ನು ತುರಿದು ಸೇವಿಸಬೇಕು. ಕಿಚಡಿ, ಹಣ್ಣಿನ ರಸ, ಗಂಜಿ ಮುಂತಾದವು ಸೇವನೆಗೆ ಉತ್ತಮ.

Advertisement

ಹಾಲು, ಸಸ್ಯಜನ್ಯ ಎಣ್ಣೆ ಬಳಕೆ ಒಳಿತು
ಕಡಿಮೆ ಕೊಬ್ಬಿನಂಶ ಇರುವ ಹಾಲು, ಸಸ್ಯಜನ್ಯ ಎಣ್ಣೆ (ಸೂರ್ಯಕಾಂತಿ, ಕಾರ್ನ್ ಆಯಿಲ…, ಸೋಯಾ ಎಣ್ಣೆ) ಬಳಸುವುದು ಒಳಿತು. ಸಿಹಿ ತಿನಿಸುಗಳು, ಮಿಠಾಯಿ, ಕೇಕ್‌, ಐಸ್‌ಕ್ರೀಂ, ಚಾಕೊಲೇಟ್‌ಗಳು, ಜಾಮ…, ತಂಪು ಪಾನೀಯಗಳ ಸೇವನೆ ಮಾಡಬಾರದು. ಜತೆಗೆ ಸಕ್ಕರೆ ಕಾಯಿಲೆ ಮತ್ತು ಬೊಜ್ಜು ಇರುವವರು ಬಾಳೆಹಣ್ಣು, ಮಾವಿನಹಣ್ಣು, ಸಪೋಟ, ಆಲೂಗೆಡ್ಡೆ, ಗೆಣಸು ಮುಂತಾದ ಅತ್ಯಂತ ಸಿಹಿಯಾದ ಹಣ್ಣುಗಳನ್ನು ಸೇವಿಸುವುದನ್ನು ನಿಯಂತ್ರಿಸಿಕೊಳ್ಳಬೇಕು.

ಮುಪ್ಪಿನಲ್ಲಿ ಉಪ್ಪು ಬೇಡ
ಕಡಿಮೆ ಉಪ್ಪು ಸೇವನೆ ದೀರ್ಘಾಯುಷ್ಯದ ಗುಟ್ಟು ಎನ್ನಲಾಗುತ್ತದೆ. ಹೀಗಾಗಿ ಉಪ್ಪು ಸೇವನೆಯನ್ನು ಅಧಿಕ ರಕ್ತದೊತ್ತಡ ಇರುವವರಷ್ಟೇ ಅಲ್ಲ, ಎಲ್ಲರೂ ಮಿತಗೊಳಿಸಬೇಕು. ಉಪ್ಪಿನಕಾಯಿ, ಚಟ್ನಿ, ಸಮೋಸ, ಚಿಪ್ಸ್‌ನಂತಹ ಆಹಾರ ಪದಾರ್ಥಗಳಲ್ಲಿ ಉಪ್ಪಿನ ಅಂಶ ಹೆಚ್ಚಿರುತ್ತದೆ ಎಂಬುದನ್ನು ನೆನಪಿಡಿ. ಕಿಂಚಿತ್ತಾದರೂ ದೈಹಿಕ ಚಟುವಟಿಕೆ ಇರಲೇ ಬೇಕು. ನಡಿಗೆಯು ಅತ್ಯಂತ ಉತ್ತಮ ವ್ಯಾಯಾಮ. ದಿನನಿತ್ಯ ನಡಿಗೆ ಆರೋಗ್ಯಕರ. ನಡೆಯಿರಿ, ಆರೋಗ್ಯವಂತರಾಗಿ.

ವಯಸ್ಸಾದಂತೆ ಮಲಬದ್ಧತೆಯೂ ಒಂದು ಸಮಸ್ಯೆ. ನಾರಿನಂಶ ಇರುವ ತರಕಾರಿಗಳು, ಹಣ್ಣುಗಳ ಸೇವನೆ, (ಬಾಳೆಹಣ್ಣು, ಮೂಸಂಬಿ, ಕಿತ್ತಳೆ) ದಿನಕ್ಕೆ 8-10 ಲೋಟ ನೀರು, ಹಿಟ್ಟಿಗಿಂತ ಧಾನ್ಯಗಳನ್ನು ಬೀಸಿ ತಯಾರಿಸಿದ ಹಿಟ್ಟಿನಿಂದ ಸಿದ್ಧಪಡಿಸಿದ ಆಹಾರ, ಸೊಪ್ಪು, ಸೂಪ್‌ ಮುಂತಾದವುಗಳನ್ನು ಸೇವಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next