ಚನ್ನರಾಯಪಟ್ಟಣ: ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಭಾವಚಿತ್ರವನ್ನು ಹಾಕಿ ಉದುದ್ದ ಬ್ಯಾನರ್ ಹಾಕಿ ಪ್ರವೇಶಾತಿಗಾಗಿ ಪೈಪೋಟಿ ಮಾಡುತ್ತಿರುವ ವೇಳೆಯಲ್ಲಿ ತಾಲೂಕಿನ ಸರ್ಕಾರಿ ಶಾಲಾ ಕಾಲೇಜಿನ ಸಿಬ್ಬಂದಿ ಖಾಸಗಿಯವರಿಗೆ ಸರಿ ಸಮನಾಗಿ ಪೈಪೋಟಿ ನೀಡಲು ಮುಂದಾಗಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ಸ್ವತಂತ್ರ ಪದವಿಪೂರ್ವ ಕಾಲೇಜು, ಬಿಇಒ ಕಚೇರಿ ಹಿಂಭಾಗ ದಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸ್ವತಂತ್ರ ಪದವಿ ಪೂರ್ವ ಮಹಿಳಾ ಕಾಲೇಜು, ಪೇಟೆ ಸರ್ಕಾರಿ ಪ್ರೌಢಶಾಲೆ ಹೀಗೆ ಪಟ್ಟದಲ್ಲಿರುವ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳ ಭಾವಚಿತ್ರ ವನ್ನು ಹಾಕಿ ಶಾಲೆ ಪಡೆದಿರುವ ಫಲಿತಾಂಶವನ್ನು ಬ್ಯಾನರ್‌ನಲ್ಲಿ ಪ್ರಕಟಣೆ ಮಾಡುವ ಮೂಲಕ ದಾಖಲಾತಿ ಹೆಚ್ಚಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಸರ್ಕಾರಿ ಶಾಲಾ ಕಾಲೇಜಿನತ್ತ ಸೆಳೆಯಲು ಕ್ರಮ: ಕಸಬಾ ಹೋಬಳಿ ಗುಳಸಿಂದ ಸರ್ಕಾರಿ ಪ್ರೌಢಶಾಲೆ, ಹಿರೀಸಾವೆ ಹೋಬಳಿ ಕೇಂದ್ರದಲ್ಲಿರುವ ಸರ್ಕಾರಿ ಶಾಲಾ-ಕಾಲೇಜು, ನುಗ್ಗೇಹಳ್ಳಿ, ಬಾಗೂರು, ಶ್ರವಣಬೆಳಗೊಳ ಹಾಗೂ ದಂಡಿಗನಹಳ್ಳಿ ಹೋಬಳಿ ಉದಯಪುರ ಸೇರಿದಂತೆ ತಾಲೂಕಿನ ನೂರಾರು ಸರ್ಕಾರಿ ಪ್ರೌಢಶಾಲೆಗಳು ಹಾಗೂ ಹತ್ತಾರು ಸರ್ಕಾರಿ ಪಿಯು ಕಾಲೇಜಿನವರು ತಮ್ಮ ವಿದ್ಯಾರ್ಥಿ ಭಾವಚಿತ್ರದೊಂದಿಗೆ ಶಾಲೆಯ ಫಲಿತಾಂಶ ಹಾಗೂ ತಮ್ಮಲ್ಲಿ ದೊರೆಯುವ ಸೌಲಭ್ಯವನ್ನು ಬ್ಯಾನರಿನಲ್ಲಿ ಮುದ್ರಣ ಮಾಡಿಸಿ ಮುಖ್ಯ ರಸ್ತೆ ಹಾಗೂ ಜನ ಸಂದಣಿ ಪ್ರದೇಶದಲ್ಲಿ ಹಾಕುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗೆ ಸಡ್ಡು ಹೊಡೆಯಲು ಮುಂದಾಗುತ್ತಿರು ವುದು ಹೆಮ್ಮೆಯ ವಿಷಯವಾಗಿದೆ.
ಸೌಲಭ್ಯದ ಮಾಹಿತಿ: ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಶುಲ್ಕದಲ್ಲಿ ಡಿಸ್ಕೌಂಟ್ ನೀಡುವ ಮಾಹಿತಿ ಹಾಕಿದರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ದೊರೆಯಲಿದೆ. ಇದಲ್ಲದೇ ಉದ್ಯೋಗ ತರಬೇತಿ ಕೋಶ, ಸುಸಜ್ಜಿತವಾದ ಕಟ್ಟಡ, ವಿಶಾಲವಾದ ಕ್ರಿಡಾಂಗಣ, ಆಂತರಿಕ ಪರೀಕ್ಷೆಗಳ ಮಾಹಿತಿ, ಗ್ರಂಥಾ ಲಯ ಮತ್ತು ವಾಚನಾಲಯ, ಸ್ಮಾರ್ಟ್ ಕ್ಲಾಸಸ್, ವಿವಿಧ ವಿದ್ಯಾರ್ಥಿವೇತನ, ಪಿಎಚ್‌ಡಿ, ಎಂಪಿಲ್ ನೆಟ್, ಕೆ-ಸೆಟ್ ಹಾಗೂ ನುರಿತ ಉಪನ್ಯಾಸಕರಿಂದ ಬೋಧನೆ, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ ಆ್ಯಂಗೈಡ್ಸ್, ರೆಡ್‌ಕ್ರಾಸ್ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ರಿಯಾಯಿತಿಯಲ್ಲಿ ಬಸ್‌ಪಾಸ್ ಸೌಲಭ್ಯ ಒದಗಿಸಲಾಗುವುದು ಎಂಬ ಭರವಸೆಯ ಸೌಲಭ್ಯ ಹಾಕಲಾಗಿದೆ.
ಕಾಲೇಜಿನ ಕೋರ್ಸ್‌ಗಳ ಮಾಹಿತಿ: ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಉಚಿತವಾಗಿ ನೀಡಲಾಗುವುದು. ಹಾಗೂ ವಾರದಲ್ಲಿ ಒಮ್ಮೆ ಕೆಎಎಸ್ ಮತ್ತು ಎಎಎಸ್ ಅಧಿಕಾರಿಗಳಿಂದ ಶಿಕ್ಷಣ ಮಾಗದರ್ಶನ ನೀಡುವುದರೊಂದಿಗೆ ವಿಶೇಷ ಉಪನ್ಯಾಸ ಕೊಡುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಲಾಗುವುದು ಎಂದು ಪ್ರಚಾರದ ಬ್ಯಾನರ್‌ನಲ್ಲಿ ಹಾಕುವ ಮೂಲಕ ನಾವು ಹಣಕ್ಕಾಗಿ ಶಿಕ್ಷಣ ಮಾರುವುದಿಲ್ಲ, ದೇಶದ ಮುಂದಿನ ಭವಿಷ್ಯದ ಉತ್ತಮ ಪ್ರಜೆಗಳನ್ನು ಮಾಡುವಲ್ಲಿ ನಾವು ಶ್ರಮಿಸುತ್ತಿವೆ ಎಂಬ ಭರವಸೆ ನೀಡುತ್ತಿದ್ದಾರೆ.
ಪೋಷಕರು, ಶಿಕ್ಷಕರ ಮುತುವರ್ಜಿ: ಎಸ್‌ಎಸ್‌ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ ಭಾವಚಿತ್ರದ ಬ್ಯಾನರ್ ಹಾಕಲು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆಲ ವಿದ್ಯಾರ್ಥಿಗಳ ಪೋಷಕರು ಸಹಾಯ ಮಾಡಿದರೆ ತಮ್ಮ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಿಕೊಳ್ಳೋಣ ಎಂದು ಶಿಕ್ಷಕರೇ ಮುತುವರ್ಜಿ ವಹಿಸಿ ಪ್ರಚಾರಕ್ಕೆ ಮುಂದಾಗಿದ್ದಾರೆ.
ಒಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಡ್ಡು ಹೊಡೆಯಲು ಸರ್ಕಾರಿ ಶಾಲಾ ಕಾಲೇಜುಗಳು ತಮ್ಮ ಕಟ್ಟಡದ ಮುಂಭಾಗದಲ್ಲಿ ಬ್ಯಾನರ್ ಹಾಕುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಎಷ್ಟು ಮಂದಿ ಸರ್ಕಾರಿ ಶಾಲೆ ಕಾಲೇಜಿಗೆ ಪ್ರವೇಶ ಪಡೆಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಶಾಮಸುಂದರ್ ಕೆ. ಅಣ್ಣೇನಹಳ್ಳಿ