Advertisement

Moodabidri ಆಳ್ವರಿಗೆ ಸತ್ಯವೇ ದೇವರು, ಜನರ ಒಡನಾಟವೇ ಉಸಿರು: ಎನ್‌. ವಿನಯ ಹೆಗ್ಡೆ

11:46 PM Nov 13, 2023 | Team Udayavani |

ಮೂಡುಬಿದಿರೆ: ನೂರ ಆರು ವರ್ಷ ಆರೋಗ್ಯಪೂರ್ಣ, ಸಾರ್ಥಕ ಬದುಕು ನಡೆಸಿ ಇನ್ನಿಲ್ಲವಾದ ಮಿಜಾರುಗುತ್ತು ಆನಂದ ಆಳ್ವ ಅವರಿಗೆ ಸತ್ಯವೇ ದೇವರು-ಕೃಷಿಯೇ ಪ್ರಯೋಗ ಶಾಲೆ. ಕಂಬಳದ ಶಿಸ್ತು, ಸಂಯಮದ ಸಂಸ್ಕೃತಿ, ಸಂಸ್ಕೃತಿ ಪ್ರೀತಿ, ಜನರ ಒಡನಾಟವೇ ಉಸಿರಾಗಿತ್ತು ಎಂದು ನಿಟ್ಟೆ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.

Advertisement

ಆಳ್ವಾಸ್‌ ಕಾಲೇಜಿನ ಕೃಷಿಸಿರಿ ವೇದಿಕೆ-ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ನಡೆದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರಿಗೆ “ನುಡಿನಮನ’ ಸಮರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಕೂಡುಕುಟುಂಬದ ಆನಂದದ ಬದುಕಿನಲ್ಲಿ ಬೆಳೆದ ಅವರಿಗೆ ಊರೆಲ್ಲಾ ತನ್ನವರು ಎಂಬ ಕೌಟುಂಬಿಕ ಭಾವವಿತ್ತು. ಕುಟುಂಬದ ಜವಾಬ್ದಾರಿಯಿಂದಾಗಿ ಹೆಚ್ಚು ಓದಲಾಗದಿದ್ದರೂ ಸ್ವಯಂ ವಿದ್ಯಾಕ್ಷೇತ್ರಕ್ಕೆ ಕೊಡುಗೆ ನೀಡಿದ ಅವರು ವಿಶ್ವವಿದ್ಯಾನಿಲಯಕ್ಕೆ ಸಮನಾಗಿ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಪುತ್ರ ಡಾ| ಮೋಹನ ಆಳ್ವರಿಗೆ ನೆರಳಾಗಿ ನಿಂತವರು; ಅವರ ವ್ಯಕ್ತಿತ್ವವು ಸಾರ್ವಜನಿಕ ರಂಗಗಳಲ್ಲಿ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯ’ ಎಂದರು.

ನಿಸ್ವಾರ್ಥ ಬದುಕು. ಬಹಿರಂಗದಲ್ಲಿ ಕಠಿನ ಆದರೆ ನಂಬಿದ ಮಾರ್ಗದಲ್ಲಿ ನಿಷ್ಠೆಯಿಂದ ಬದುಕುವ ಮೃದುತ್ವ ಅವರದಾಗಿತ್ತು. ಅವರ ಛಾಯೆಯನ್ನು ನಾಲ್ವರು ಮಕ್ಕಳಲ್ಲೂ ಕಾಣಬಹುದು. ಮಕ್ಕಳ ಸಾಧನೆಗೆ ಅದುವೇ ಪ್ರೇರಣೆ’ ಎಂದು ಅವರು ಮೆಲುಕು ಹಾಕಿದರು.

ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಮಾತನಾಡಿ, ಗರುಡ ಪುರಾಣದಲ್ಲಿ ಧರ್ಮ ನಿಷ್ಠ, ಧ್ಯಾನಿ, ಯೋಗಾದಿ ವಿಚಾರಗಳಿಂದ ಮೋಕ್ಷ ಪಡೆಯುತ್ತಾರೆ ಎಂಬುದಕ್ಕೆ ಸಂವಾದಿಯಾಗುವ ಬದುಕನ್ನು ಆನಂದಿಸಿದವರು ಆನಂದ ಆಳ್ವರು; ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜತೆಗಿನ ಅನುಭಾವ, ನಾಗಪ್ಪ ಆಳ್ವ, ಜೀವರಾಜ ಆಳ್ವ, ಅಮರನಾಥ ಶೆಟ್ಟಿ ಅವರಂಥ ವ್ಯಕ್ತಿತ್ವಗಳೊಂದಿಗಿನ ಅನುಭವ ಅವರದ್ದಾಗಿತ್ತು ಎಂದರು.

Advertisement

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಸ್ಕೌಟ್ಸ್‌ ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಮೂಡುಬಿದಿರೆ ಚೌಟರ ಅರಮನೆ ಕುಲದೀಪ ಎಂ. ಸೇರಿದಂತೆ ಗಣ್ಯರು, ಅಭಿಮಾನಿಗಳು ಆನಂದ ಆಳ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ಮುಂಬಯಿಯಲ್ಲಿರುವ ಡಾ| ಸೀತಾರಾಮ ಆಳ್ವ, ಅಮೆರಿಕದಲ್ಲಿರುವ ಮೀನಾಕ್ಷಿ ಜಯಕರ ಆಳ್ವ, ಕೊಯಮತ್ತೂರಿನಲ್ಲಿರುವ ಉದ್ಯಮಿ ಬಾಲಕೃಷ್ಣ ಆಳ್ವ, ಆಳ್ವಾಸ್‌ ಪ್ರವರ್ತಕ ಡಾ| ಎಂ. ಮೋಹನ ಆಳ್ವ ಸಹಿತ ಆನಂದ ಆಳ್ವರ ಕುಟುಂಬ ಪರಿವಾರ, ಆತ್ಮೀಯರು ಶ್ರದ್ಧಾಂಜಲಿ ಸಲ್ಲಿಸಿದರು.
ವೇಣುಗೋಪಾಲ ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next