ಇನ್ಸುಲಿನ್ ಅನ್ನು ಮೂಗು ಮತ್ತು ಇನ್ಹಲೇಶನ್ ಮಾರ್ಗದ ಮೂಲಕ ಬಳಸುವ ಸೌಲಭ್ಯಗಳು ಲಭ್ಯವಿವೆಯಾದರೂ ಇದರ ಉತ್ತಮ ಪರಿಣಾಮದ ಬಗೆಗಿನ ಪುರಾವೆಗಳು ಇಲ್ಲದಿರುವುದರಿಂದ ವೈದ್ಯಕೀಯ ವೃತ್ತಿಪರರು ಶಿಫಾರಸು ಮಾಡುವುದಿಲ್ಲ. ಇದರ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮಧುಮೇಹದಿಂದ ಜೀವನ ಮಾಡುವವರೂ ಇದರ ಬಳಕೆ ಮಾಡುತ್ತಿಲ್ಲ.
ಮಧುಮೇಹ ನಿಯಂತ್ರಣದಲ್ಲಿ ವೈದ್ಯರ ಮಾರ್ಗದರ್ಶನವಿಲ್ಲದೆ ಮನೆಯಲ್ಲೇ ತೆಗೆದು ಕೊಳ್ಳುವ ಗಿಡಮೂಲಿಕೆಗಳು ಎಷ್ಟು ಸುರಕ್ಷಿತ?
ಗಿಡಮೂಲಿಕೆಗಳಾದ ಮೆಂತೆ, ಕಿರಾತಕಡ್ಡಿ, ಕಹಿಬೇವು, ಅಮೃತಬಳ್ಳಿ, ಹಾಗಲಕಾಯಿ, ಕರಿಬೇವು, ಅಲೋವೆರ, ನೆಲ್ಲಿಕಾಯಿ, ಬಿಲ್ವಪತ್ರೆ, ಶತಾವರಿ, ಇನ್ಸುಲಿನ್ ಎಲೆ, ಎಕ್ಕೆ ಎಲೆ, ಅಶ್ವಗಂಧ ಇತ್ಯಾದಿಗಳನ್ನು ಮಧುಮೇಹದಿಂದ ಜೀವಿಸುವವರು ವೈದ್ಯರ ಸಲಹೆ ಇಲ್ಲದೆ ಬಳಸುತ್ತಿರುವುದು ಸಂಶೋಧನೆಯಿಂದ ಕಂಡುಬಂದಿದೆ. ವೈದ್ಯರ ಸಲಹೆ ಇಲ್ಲದೆ ಇವುಗಳನ್ನು ತೆಗೆದುಕೊಳ್ಳುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ತಳ್ಳಿಹಾಕುವಂತಿಲ್ಲ. ವೈದ್ಯರ ಸಲಹೆ ಇಲ್ಲದೆ ಇಂತಹ ಗಿಡಮೂಲಿಕೆಗಳ ಕಷಾಯ, ಪುಡಿ ಮತ್ತು ಹಸಿ ತೆಗೆದುಕೊಳ್ಳುವುದು ಸೂಕ್ತವಲ್ಲ. ಹಾಗಾಗಿ ಮಧುಮೇಹದಿಂದ ಜೀವಿಸುವವರು ಇವುಗಳನ್ನು ವೈದ್ಯರೊಂದಿಗೆ ಚರ್ಚಿಸಿಯೇ ತೆಗೆದುಕೊಳ್ಳಬೇಕು. ಅಂತೆಯೇ ಇವುಗಳನ್ನು ಔಷಧ ರೂಪದಲ್ಲಿ ಬಳಕೆ ಮಾಡುವುದಕ್ಕಿಂತ ಮಾರ್ಪಡಿಸಿದ ಆಹಾರ (ಮೆಂತೆ ತಂಬುಳಿ, ಹಾಗಲಕಾಯಿ ಪಲ್ಯ, ಕರಿಬೇವು ಒಗ್ಗರಣೆ ಇತ್ಯಾದಿ)ದ ರೂಪದಲ್ಲಿ ಬಳಸುವುದು ಉತ್ತಮ.
Advertisement