ಮಧುರ ಜೀವನಕ್ಕೆ ಆಮಂತ್ರಣ”
ಪ್ರಸ್ತುತ ಮಧುಮೇಹವನ್ನು ಗುಣಪಡಿಸಲು ಯಾವುದೇ ಚಿಕಿತ್ಸೆ ಲಭ್ಯವಿಲ್ಲ. ಆದರೆ ಜೀವನಶೈಲಿ (ಪಥ್ಯಾಹಾರ, ದೈಹಿಕಚಟುವಟಿಕೆ/ವ್ಯಾಯಾಮ, ಒತ್ತಡ ನಿರ್ವಹಣೆ), ಔಷಧಗಳ ಬದ್ಧತೆ ಮತ್ತು ನಿಯಮಿತ ತಪಾಸಣೆಯಿಂದ ನಿಯಂತ್ರಣದಲ್ಲಿಡಬಹುದು ಮತ್ತು ಮಧುಮೇಹದಿಂದ ಬರಬಹುದಾದ ಸಂಭಾವ್ಯ ತೊಂದರೆಗಳನ್ನು ತಡೆಗಟ್ಟಬಹುದು ಅಥವಾ ಮುಂದೂಡಬಹುದು.
Advertisement
ಮಧುಮೇಹ ಚಿಕಿತ್ಸೆಯ ಪ್ರಮುಖ ಉದ್ದೇಶಗಳೇನು?
1 ರಕ್ತದಲ್ಲಿ ಗುÉಕೋಸ್ ಅಂಶವನ್ನು ನಿಯಂತ್ರಣದಲ್ಲಿಡುವುದು.
2ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು.
3ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣದಲ್ಲಿಡುವುದು.
4 ಉತ್ಕೃಷ್ಟ ಗುಣಮಟ್ಟದ ಜೀವನ ಮತ್ತು ಆರೋಗ್ಯಕರ ಮನಸ್ಸು-ಸಾಮಾಜಿಕ ಜೀವನವನ್ನು ಕಾಪಾಡುವುದು.
ಯಾಕೆ ಅವಶ್ಯ?
ಜೀವನಶೈಲಿಯ ಭಾಗವಾದ ಆಹಾರ, ವಿಹಾರ, ವಿಚಾರ ಮತ್ತು ವಿಶ್ರಾಂತಿ ಮಧುಮೇಹದ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉತ್ತಮ ಜೀವನ ಶೈಲಿಯ ನಿರ್ವಹಣೆ ಮಧುಮೇಹದ ಸ್ವಯಂ-ಆರೈಕೆಯ ಪ್ರಮುಖ ಭಾಗ ಕೂಡ. ಜೀವನ ಶೈಲಿಯ ಭಾಗವಾದ ಉತ್ತಮ ಆಹಾರ ಕ್ರಮ, ನಿಯಮಿತ ವ್ಯಾಯಾಮ/ದೈಹಿಕ ಚಟುವಟಿಕೆ ಹಾಗೂ ಒತ್ತಡ ನಿರ್ವಹಣೆಯನ್ನು ನಿಯಮಿತ ದಿನಚರಿಯೊಂದಿಗೆ ಅದರ ನಿರಂತರ ಪಾಲನೆಯಿಂದ ಸಾಧಿಸಿದಾಗ ಮಾತ್ರ ಮಧುಮೇಹ ನಿಯಂತ್ರಣ ಸಾಧ್ಯ. ಉತ್ತಮ ಜೀವನಶೈಲಿಯ ನಿರ್ವಹಣೆಗೆ ಸ್ವಯಂಬದ್ಧತೆ, ಉತ್ತಮ ಪರಿಸರ, ಇತರರ ಉತ್ತೇಜನ ಪ್ರಮುಖವಾಗಿರುತ್ತದೆ. ಉತ್ತಮ ಜೀವನಶೈಲಿ ಉತ್ಕೃಷ್ಟ ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ಜೀವನದಲ್ಲಿ ಲವಲವಿಕೆ, ಧನಾತ್ಮಕವಾದ ಚಿಂತನೆ ಮತ್ತು ಆತ್ಮಸ್ಥೆçರ್ಯವನ್ನು ಹೆಚ್ಚಿಸುತ್ತದೆ. ಇದು ಮಧುಮೇಹದಿಂದ ಜೀವಿಸುವರಿಗೆ ಮಾತ್ರವಲ್ಲದೆ ಸರ್ವೇಸಾಮಾನ್ಯ ಎಲ್ಲರಿಗೂ ಅವಶ್ಯ ಮತ್ತು ಅನ್ವಯ.
Related Articles
ಜೀವನಶೈಲಿಯ ಯಾವ ಯಾವ
ಅಂಶಗಳು ಪ್ರಮುಖವಾಗಿರುತ್ತವೆ?
ಮಧುಮೇಹ ನಿಯಂತ್ರಣದಲ್ಲಿ ಪಥ್ಯಾಹಾರ, ವ್ಯಾಯಾಮ, ದೈಹಿಕ ಚಟುವಟಿಕೆಗಳು ಮತ್ತು ಒತ್ತಡ ನಿರ್ವಹಣೆ ನಮ್ಮ ಜೀವನಶೈಲಿಯಲ್ಲಿನ ಪ್ರಮುಖ ಅಂಶಗಳಾಗಿರುತ್ತವೆ. ಸೂಕ್ತ ಮಾರ್ಗದರ್ಶನದೊಂದಿಗೆ ನಿಗದಿತ ಪ್ರಮಾಣದಲ್ಲಿ ಇವುಗಳನ್ನು ನಿತ್ಯಕ್ರಮದಲ್ಲಿ ಅಳವಡಿಸಿಕೊಂಡರೆ ಮಧುಮೇಹದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ.
Advertisement
ಮಧುಮೇಹ ನಿಯಂತ್ರಣದಲ್ಲಿ ಪಥ್ಯಾಹಾರದ ಪ್ರಾಮುಖ್ಯವೇನು?
“”ಅಹಂ ಅನ್ನಂ ಅಹಂ ಅನ್ನಂ …” ಎಂಬ ಉಪನಿಷತ್ತಿನ ಉಕ್ತಿಯ ಭಾವಾನುವಾದದಂತೆ ನಾವು ತಿನ್ನುವ ಆಹಾರವನ್ನು ಗೌರವಿಸಿ ನಮ್ಮ ದೇಹ ಪ್ರಕೃತಿಗನುಗುಣವಾಗಿ ಆಹಾರದ ಆಯ್ಕೆ ಮಾಡಿ ಆಹಾರದ ಪ್ರಮಾಣವನ್ನು ನಿರ್ಧರಿಸಿ ಆಹಾರವನ್ನು ಸೇವಿಸಿದಾಗ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯದಲ್ಲಿ ಉತ್ತಮ ಫಲಿತಾಂಶ ಹೊರಹೊಮ್ಮುವುದು. ಹಾಗೆ ನಾವೇನು ತಿನ್ನುತ್ತೇವೊ ಅದೇ ನಾವಾಗಿರುತ್ತೇವೆ. ಮಧುಮೇಹದೊಂದಿಗೆ ಜೀವಿಸುತ್ತಿರುವವರಿಗೆ ರಕ್ತದಲ್ಲಿ ಗುÉಕೋಸ್ ಅಂಶವನ್ನು ನಿಯಂತ್ರಿಸಲು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಲು, ದೇಹದ ತೂಕದ ನಿರ್ವಹಣೆಗೆ, ದೀರ್ಘಕಾಲಿಕ ಸಂಭಾವ್ಯ ತೊಂದರೆಗಳನ್ನು ತಡೆಗಟ್ಟಲು ಅಥವ ಮುಂದೂಡಲು, ಉತ್ತಮ ಆರೋಗ್ಯಕ್ಕಾಗಿ ಹಾಗು ಸಾಮಾನ್ಯ ಯೋಗ-ಕ್ಷೇಮಕ್ಕಾಗಿ ಪಥ್ಯಾಹಾರ ಅವಶ್ಯ. ಹಾಗಾಗಿ ಮಧುಮೇಹದೊಂದಿಗೆ ಜೀವಿಸುವವರು ದಿನನಿತ್ಯದ ಆಹಾರ ಸೇವನೆಗೆ ಪಥ್ಯಾಹಾರದ ಯೋಜನೆಯೊಂದನ್ನು ಮಾಡುವ ಯೋಚನೆ ಮಾಡಿ ಅದನ್ನು ನಿಯಮಿತವಾಗಿ ಪಾಲಿಸುವುದು ಅತಿ ಅವಶ್ಯ.
ಪಥ್ಯಾಹಾರದ ಯೋಜನೆ ಯಾಕೆ
ಬೇಕು ಮತ್ತು ಅದು ಏನೇನೆಲ್ಲ
ಒಳಗೊಂಡಿರುತ್ತದೆ?
ದಿನನಿತ್ಯದ ಆಹಾರದ ಆಯ್ಕೆ, ಪ್ರಮಾಣ ಮತ್ತು ಸಮಯನ್ನು ನಿರ್ಧರಿಸಲು ಯೋಜನೆ ಅಗತ್ಯ. ಯೋಜನೆ ವ್ಯಕ್ತಿಯ ಆರೋಗ್ಯ, ದೈಹಿಕ ಚಟುವಟಿಕೆ, ಇಷ್ಟಪಡುವ ಆಹಾರ, ಮತ್ತು ಕೆಲಸದ ವೇಳಾಪಟ್ಟಿಯನ್ನೊಳಗೊಂಡಿರಬೇಕು. ಆಹಾರದ ಆಯ್ಕೆ: ಭಾರತೀಯ ಆಹಾರ ಮಾದರಿಗನುಗುಣವಾಗಿ ಅಳವಡಿಸಿಕೊಂಡ ಚೆನ್ನಾಗಿ ತಿನ್ನುವ (ಈಟ್-ವೆಲ್) ಮಾರ್ಗದರ್ಶಿಯನ್ವಯ ನಮ್ಮ ಒಟ್ಟು ಆಹಾರದ 40 ಶೇಕಡದಷ್ಟು ಹಣ್ಣು ತರಕಾರಿ, 38 ಶೇಕಡದಷ್ಟು ಅಕ್ಕಿ, ರಾಗಿ, ಗೋಧಿ, ಸಿರಿ ಧಾನ್ಯ, ಗಡ್ಡೆ ಗೆಣಸುಗಳು ಇತ್ಯಾದಿ, 12 ಶೇಕಡದಷ್ಟು ದ್ವಿದಳ ಧಾನ್ಯ, ಬಿಳಿ ಮೊಟ್ಟೆ, ಮೀನು ಇತ್ಯಾದಿ, 8 ಶೇಕಡದಷ್ಟು ಹೈನು ಉತ್ಪನ್ನ ಹಾಗು ಕೇವಲ 2 ಶೇಕಡದಷ್ಟು ಎಣ್ಣೆ ಅಂಶ ನಮ್ಮ ಊಟದ ತಟ್ಟೆಯ ವಿವಿಧ ಭಾಗವಾಗಿರಬೇಕು. ಅತಿ ಹೆಚ್ಚು ವಿಧವಿಧದ ತರಕಾರಿ ನಮ್ಮ ತಟ್ಟೆಯ ಭಾಗವಾಗಿರಬೇಕು. ತರಕಾರಿಗಳ ಆಯ್ಕೆ: ಹಸಿರು ತರಕಾರಿ, ನಾರಿನ ತರಕಾರಿ, ನೀರಿನ ಅಂಶವಿರುವ ತರಕಾರಿಗಳಾದ ಮೆಂತೆ ಸೊಪ್ಪು, ಹರಿವೆ ಸೊಪ್ಪು, ಬಸಳೆ ಸೊಪ್ಪು, ಪಾಲಕ್ ಸೊಪ್ಪು, ಶತಾವರಿ, ಬೊÅಕೋಲಿ, ಅಣಬೆ, ಎಲೆ ಕೋಸು, ಅಲಸಂಡೆ, ಬೀನ್ಸ್/ಹುರುಳಿಕೋಡು, ತೊಂಡೆಕಾಯಿ, ಪಡುವಲಕಾಯಿ, ಹಾಗಲಕಾಯಿ, ಹೀರೆಕಾಯಿ, ಬೆಂಡೆಕಾಯಿ, ಮುಳ್ಳುಸೌತೆಕಾಯಿ, ಕುಂಬಳಕಾಯಿ, ಸೌತೆಕಾಯಿ, ಗುಳ್ಳ/ಬದನೆಕಾಯಿ, ಟೊಮ್ಯಾಟೊ, ದೊಣ್ಣೆಮೆಣಸು, ಈರುಳ್ಳಿ, ಮೂಲಂಗಿ, ಕ್ಯಾರೆಟ್‌ಗಳನ್ನು ಸಾಕಷ್ಟು ಸೇವಿಸಿ. ಭೂಮಿಯ ಅಡಿಭಾಗದಲ್ಲಿ ಬೆಳೆಯುವ ಗಡ್ಡೆಗೆಣಸುಗಳಾದ ಆಲೂಗಡ್ಡೆ, ಮರಗೆಣಸು, ಬೀಟ್ರೂಟ್, ಕೆಸುವಿನ ಗಡ್ಡೆ, ಗೆಣಸು, ಸಾಂಬ್ರಾಣಿಗಳನ್ನು ಅದಷ್ಟು ಮಿತವಾಗಿ ಬಳಸುವುದು ಉತ್ತಮ. ಹಣ್ಣುಗಳ ಆಯ್ಕೆ
ಪೇರಳೆ/ಸೀಬೆ ಕಾಯಿ, ನೆಲ್ಲಿ ಕಾಯಿ, ಜಾಮೂನು/ಜಂಬು ನೇರಳೆ, ಸಕ್ಕರೆಕಂಚಿ, ದಾಳಿಂಬೆ, ಧಾರೆ ಹುಳಿ (ಸ್ಟಾರ್ ಹಣ್ಣು), ಪಿಯರ್ ಹಣ್ಣು, ಕಿವಿ ಹಣ್ಣು, ಸೇಬು, ಕಿತ್ತಳೆ, ಮೂಸುಂಬಿ, ಪೈನಾಪಲ್, ಪಪ್ಪಾಯ, ಕಲ್ಲಂಗಡಿ ಹಣ್ಣುಗಳನ್ನು ರಕ್ತದಲ್ಲಿ ಗುÉಕೋಸ್ ನಿಯಂತ್ರಣದಲ್ಲಿರುವಾಗ ದಿನವೊಂದಕ್ಕೆ 100 ಗ್ರಾಮ್ ತೆಗೆದುಕೊಳ್ಳಬಹುದು. ಒಳಹಣ್ಣುಗಳಾದ ಬಾದಾಮಿ ಮತ್ತು ಆಕ್ರೋಟ್ ಸೇವನೆ ಉತ್ತಮ ಆಯ್ಕೆ. ಹಲಸಿನಹಣ್ಣು, ಮಾವಿನಹಣ್ಣು, ಬಾಳೆಹಣ್ಣು, ದ್ರಾಕ್ಷಿ, ಚಿಕ್ಕು, ಸೀತಾಫಲ ಹಾಗು ಒಣದ್ರಾಕ್ಷಿ, ಖರ್ಜೂರವನ್ನು ಕಡಿಮೆ ಅಥವಾ ತಿನ್ನದೇ ಇರುವುದು ಉತ್ತಮ. – ಮುಂದಿನ ವಾರಕ್ಕೆ – ಪ್ರಭಾತ್ ಕಲ್ಕೂರ ಎಂ.,
ಯೋಜನಾ ನಿರ್ವಾಹಕರು, ವಿಶ್ವ ಮಧುಮೇಹ ಪ್ರತಿಷ್ಠಾನ,
ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಮಣಿಪಾಲ