ಸ್ಟೇಟ್‌ಬ್ಯಾಂಕ್ : ಜಿಲ್ಲೆಯ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಬಂದರು, ಮೀನುಗಾರಿಕೆ, ಬ್ಯಾಂಕಿಂಗ್, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರವು ಉತ್ತಮ ಪ್ರಗತಿ ಸಾಧಿಸಿದ್ದು, ಇದನ್ನು ಭವಿಷ್ಯ ದೃಷ್ಟಿಯಿಂದ ಅಭಿವೃದ್ಧಿಗೊಳಿಸುವ ಪ್ರಯತ್ನ ಅನಿವಾರ್ಯವಾಗಿದೆ. ರಸ್ತೆ
ಸಹಿತ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಶಾಸಕ ಜೆ.ಆರ್.ಲೋಬೋ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿನೂತನ ನವಕರ್ನಾಟಕ ವಿಷನ್ 2025 ಸಮಗ್ರ ಅಭಿವೃದ್ಧಿಯ ನಕಾಶೆ ಕಾರ್ಯಕ್ರಮದಡಿ ಜಿಲ್ಲೆಯ ಅಭಿವೃದ್ಧಿಯ ಮುನ್ನೋಟಗಳನ್ನು ರೂಪಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲೆಯ ಆರ್ಥಿಕತೆಗೆ ಬಂದರು ಹಾಗೂ ಮೀನುಗಾರಿಕೆ ಕ್ಷೇತ್ರವು ಉತ್ತಮ ಕೊಡುಗೆಗಳನ್ನು ನೀಡಿದ್ದರೂ ಆ ಕ್ಷೇತ್ರ ಇಂದಿಗೂ ನಿರ್ಲಕ್ಶ್ಯಕ್ಕೊಳಗಾಗಿದೆ. ಐಟಿ ಕ್ಷೇತ್ರ ಬೆಳವಣಿಗೆಗಳಿಗೂ ರಸ್ತೆಯ ದುಃಸ್ಥಿತಿಅಡ್ಡಯಾಗುತ್ತಿದೆ. ಸಂಚಾರ ನಿಯಂತ್ರಣದ ಜತೆಗೆ ಇ-ಆಡಳಿತಕ್ಕೂ ನಾವು ಮಹತ್ವ ನೀಡಿದಾಗ ಅಭಿವೃದ್ಧಿ ಸುಲಭ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಮೇಯರ್ ಕವಿತಾ ಸನಿಲ್, ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಕೆಪಿಎಂಜಿ ನಿರ್ದೇಶಕ ಪ್ರಸಾದ್ ಉಣ್ಣಿಕೃಷ್ಣನ್, ಜಿಲ್ಲಾಧಿಕಾರಿ ಡಾ| ಕೆ.ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್ ವೇದಿಕೆಯಲ್ಲಿದ್ದರು.
ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಕೈಗಾರಿಕೆ, ಮೂಲ ಸೌಕರ್ಯ ಹಾಗೂ ಸಮಗ್ರ ಅಭಿವೃದ್ಧಿ ವಿಭಾಗಗಳಲ್ಲಿ ಜಿಲ್ಲೆಗೆ ಲಭಿಸಿದ ಮೂರು ಪ್ರಶಸ್ತಿಗಳನ್ನು ಸಚಿವರು ಜಿಲ್ಲಾಧಿಕಾರಿ ಅವರಿಗೆ ಹಸ್ತಾಂತರಿಸಿದರು. ರಥಬೀದಿ ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಟಾರ್ ನಿರ್ವಹಿಸಿದರು. ಉದ್ಘಾಟನ ಸಮಾರಂಭದ ಬಳಿಕ ವಿವಿಧ ಸಭಾಂಗಣದಲ್ಲಿ ಸಮಗ್ರ ಜಿಲ್ಲೆಯ ಅಭಿವೃದ್ಧಿ ಕುರಿತು ವಿಷಯ ತಜ್ಞರ ಜತೆ ಚರ್ಚಿಸಿ ಅಂತಿಮ ವರದಿಯನ್ನು ಮಂಡಿಸಲಾಯಿತು.
ವರ್ಷಾಂತ್ಯಕ್ಕೆ ಕೈಪಿಡಿ ಪೂರ್ಣ: ತುಷಾರ್ ಗಿರಿನಾಥ್
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕರ ಸಲಹೆ- ಸೂಚನೆಗಳಿದ್ದಾಗ ರಾಜ್ಯ ಅಭಿವೃದ್ಧಿ ಸಾಧ್ಯ ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮಿಷನ್ 2025 ಯೋಜನೆ ರೂಪಿಸಿದ್ದಾರೆ. ಕಾರ್ಯಾಗಾರದ ಸಲಹೆಗಳನ್ನು ಪಡೆದು ಈ ವರ್ಷದ ಅಂತ್ಯಕ್ಕೆ ಕೈಪಿಡಿ ಯೋಜನೆ ಪೂರ್ಣಗೊಳ್ಳಲಿದೆ. ಡಿಜಿಟಲ್ ಮಾಧ್ಯಮಗಳಾದ ಫೇಸ್ ಬುಕ್, ಟ್ವಿಟ್ಟರ್ ಮತ್ತು ವಾಟ್ಸಪ್‌ಗಳನ್ನೂ ಇದಕ್ಕೆ ಬಳಸಲಾಗುತ್ತಿದೆ. ವೆಬ್ ಸೈಟ್ ರೂಪಿಸುವ ಯೋಜನೆಯೂ ಪ್ರಗತಿಯಲ್ಲಿದೆ ಎಂದು ತಿಳಿಸಿದರು.