Advertisement

ಕಾನೂನು ಗೊಂದಲದ ಅರ್ಜಿಮಾತ್ರ ವಿಭಾಗೀಯ ಪೀಠಕ್ಕೆ

11:23 AM Jul 22, 2017 | Team Udayavani |

ಬೆಂಗಳೂರು: ಕಾನೂನಿನಲ್ಲಿ ಗೊಂದಲವಿರುವ ತಕರಾರು ಅರ್ಜಿಗಳನ್ನು ಮಾತ್ರ ಏಕಸದಸ್ಯ ಪೀಠವು ವಿಭಾಗೀಯ ಪೀಠಕ್ಕಷ್ಟೇ ವರ್ಗಾಯಿಸಲು ಅವಕಾಶವಿದೆ ಎಂದು ಹೈಕೋರ್ಟ್‌ ಪೂರ್ಣಪೀಠ ಅಭಿಪ್ರಾಯಪಟ್ಟಿದೆ.

Advertisement

ಬೇಗೂರಿನ ಖಾಸಗಿ ವ್ಯಕ್ತಿಯೊಬ್ಬರ ಜಮೀನಿಗೆ ಆರ್‌ಟಿಸಿ ನೀಡುವಂತೆ ತಹಶೀಲ್ದಾರ್‌ಗೆ ನಿರ್ದೇಶಿಸಿದ್ದ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಯ ಕ್ರಮ ಪ್ರಶ್ನಿಸಿ ರಾಜ್ಯಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆನಂದಭೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಪೂರ್ಣಪೀಠಕ್ಕೆ ವರ್ಗಾಯಿಸಿತ್ತು. 

ಈ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಮೂರ್ತಿ ಜಯಂತ್‌ ಪಟೇಲ್‌, ನ್ಯಾ. ರವಿ ಮಳೀಮs… ಹಾಗೂ ನ್ಯಾ. ಅರವಿಂದಕುಮಾರ್‌ ಅವರಿದ್ದ ಪೂರ್ಣಪೀಠ,  ಈ ಪ್ರಕರಣದಲ್ಲಿ ಯಾವ ನಿರ್ದಿಷ್ಟ ಕಾನೂನಿನ ಅಂಶದ ಆಧಾರದಲ್ಲಿ ಪೂರ್ಣಪೀಠ ವಿಚಾರಣೆ ನಡೆಸಬೇಕು ಎಂಬ ಬಗ್ಗೆ ಏಕಸದಸ್ಯ ಪೀಠ ಸ್ಪಷ್ಟಪಡಿಸಿಲ್ಲ. ಅಲ್ಲದೆ ಏಕಸದಸ್ಯ ಪೀಠ, ಕಾನೂನು ಸಂಬಂಧಿ ತಕರಾರು ಅರ್ಜಿಗಳನ್ನು ವಿಭಾಗೀಯ ಪೀಠಕ್ಕಷ್ಟೇ ವರ್ಗಾಯಿಸಲು ಅವಕಾಶವಿದೆಯೇ ವಿನ: ಪೂರ್ಣ ಪೀಠಕ್ಕೆ ವರ್ಗಾಯಿಸುವಂತಿಲ್ಲ ಎಂದು ತಿಳಿಸಿದೆ.

ಪ್ರಕರಣ ಏನು?: ಬೇಗೂರಿನ ಎ.ಜೋಸೆಪ್‌ ಎಂಬುವವರ 4 ಎಕರೆ ಜಮೀನಿಗೆ ಸಂಬಂಧಿಸಿದಂತೆ ಕೈ ಬರಹದ ಆರ್‌ಟಿಸಿ ನೀಡುವಂತೆ ಬೆಂಗಳೂರು ಉತ್ತರ ವಿಭಾಗಾಧಿಕಾರಿ  2011ರ ಜುಲೈ 28ರಂದು ತಹಶೀಲ್ದಾರ್‌ಗೆ ಆದೇಶಿದ್ದರು. ಈ ಆದೇಶ  ಪ್ರಶ್ನಿಸಿ ರಾಜ್ಯಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿತ್ತು.

ಈ ಅರ್ಜಿ ವಿಚಾರಣೆಯನ್ನು ನಡೆಸಿದ್ದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಅವರಿದ್ದ  ಏಕಸದಸ್ಯ ಪೀಠ, ರಾಜ್ಯಸರ್ಕಾರ ತನ್ನದೇ ಆಡಳಿತ ಭಾಗವಾದ ತಹಶೀಲ್ದಾರ್‌, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳು ಹಾಗೂ ಅರೆನ್ಯಾಯಿಕ ಪ್ರಾಧಿಕಾರಗಳು ನೀಡುವ ಆದೇಶಗಳನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆಯೇ ಎಂಬ ಪ್ರಶ್ನೆ ಎತ್ತಿತ್ತು. ಜೊತೆಗೆ ಈ ಅರ್ಜಿ ವಿಚಾರಣೆಯನ್ನು ಪೂರ್ಣಪೀಠ ವಿಚಾರಣೆ ನಡೆಸಲಿ ಎಂದು ಆದೇಶ ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next