ಪಿರಿಯಾಪಟ್ಟಣ: ಪಟ್ಟಣದ ಕೇಂದ್ರ ಭಾಗದಲ್ಲಿರುವ ಹಂದಿ ಜೋಗರ ಕಾಲೋನಿಯ ಅಂಗನವಾಡಿ ಕೇಂದ್ರ ಅಶುಚಿತ್ವ ಹಾಗೂ ಗಬ್ಬು ನಾರುತ್ತಿರುವ ವಾಸನೆಯಿಂದ ಮಕ್ಕಳ ಆರೋಗ್ಯ ಮತ್ತು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದರೂ ಇಲಾಖಾ ಅಧಿಕಾರಿಗಳಾಗಲಿ, ಪುರಸಭಾ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಕಣ್ಣಿದ್ದು ಕುರುಡರಂತೆ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ.
ಸುಮಾರು 12 ವರ್ಷಗಳಿಂದ ಅಪಾಯ ಹಾಗೂ ಅಶುಚಿತ್ವ, ಗಬ್ಬು ವಾಸನೆ ನಡುವೆಯೇ ಅಂಗನವಾಡಿಯಲ್ಲಿ ಮಕ್ಕಳು ಕಾಲ ಕಳೆಯುತ್ತಿರುವುದು ದುರದೃಷ್ಟವೇ ಸರಿ. ಸರ್ಕಾರ ಶಿಕ್ಷಣಕ್ಕೆ ಕೋಟ್ಯಂತರ ಹಣ ಖರ್ಚು ಮಾಡುತ್ತಿದ್ದರೂ ಕೆಳಸ್ತರದ ಶೋಷಿತರಿಗೆ ಮೂಲಭೂತ ಸೌಕರ್ಯಗಳು ತಲುಪದೇ ಇರುವುದು ಪ್ರಜಾಪ್ರಭುತ್ವದ ದೊಡ್ಡ ದುರಂತವೇ ಸರಿ.
ಮಕ್ಕಳಿಗೆ ಯಾವುದೇ ಸುರಕ್ಷಿತವಿಲ್ಲದ ಜಾಗದಲ್ಲಿರುವ ಈ ಅಂಗನವಾಡಿ ಕೇಂದ್ರದಲ್ಲಿ ಇಲಿ, ಹೆಗ್ಗಣಗಳು ಮಕ್ಕಳ ಮೈ ಮೇಲೆ ಬೀಳುತ್ತಿದ್ದು ಆಹಾರ ಪದಾರ್ಥಗಳನ್ನು ಮನಸೊÕà ಇಚ್ಛೆ ತಿನ್ನುತ್ತಿರುವ ದೃಶ್ಯ ಕಂಡು ಬರುತ್ತಿದೆ. ಯಾವುದೇ ಶುಚಿತ್ವವಿಲ್ಲದ ಅಡುಗೆ ಮನೆಯಂತೂ ಅನಾರೋಗ್ಯಕ್ಕೆ ಆಹ್ವಾನ ನೀಡುವಂತಿದೆ.
ಇಲ್ಲಿ ಮಕ್ಕಳು ಸೇವಿಸುವ ಆಹಾರವೂ ಸಹ ವಿಷಯುಕ್ತವಾಗುವ ಅಪಾಯವಿದ್ದು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ಮುಗ್ಧ ಮಕ್ಕಳ ಜೀವ ಹಾಗೂ ಆರೋಗ್ಯವನ್ನು ಕಾಪಾಡಬೇಕಿದೆ. ಜಿಲ್ಲಾಧಿಕಾರಿಗಳು ತಕ್ಷಣ ಗಮನಹರಿಸಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಬೇರೆಡೆ ಅಂಗನವಾಡಿ ವರ್ಗಾಯಿಸಿ ಪರ್ಯಾಯ ವ್ಯವಸ್ಥೆ ಮಾಡಿಸಿದರೆ ಪುಟಾಣಿ ಮಕ್ಕಳ ಭವಿಷ್ಯ ಇತರ ಮಕ್ಕಳಂತೆ ಬೆಳಕಾಗಬಹುದಾಗಿದೆ.
ಹಲವಾರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಮಕ್ಕಳು ವಾಸಿಸುತ್ತಿರುವ ಸ್ಥಳದ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದೆ. ಈ ವಾತಾವರಣದಿಂದ ನಾನು ಸಹ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ.
-ಪಿ.ವಿ.ಭಾಗ್ಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ, ಹಂದಿಜೋಗರ ಕಾಲೋನಿ
ಈಗ ನಡೆಯುತ್ತಿರುವ ಅಂಗನವಾಡಿ ಕೇಂದ್ರವನ್ನು ಬೇರೆಡೆ ವರ್ಗಾಯಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು, ಜಾಗ ಮತ್ತು ಕಾಮಗಾರಿ ಹಣ ಮಂಜೂರಾಗಿದ್ದು ಮುಂದಿನ ತಿಂಗಳಿನಿಂದ ನಿರ್ಮಿತಿ ಕೇಂದ್ರದವರು ಕಟ್ಟಡದ ಕಾಮಗಾರಿ ಪ್ರಾರಂಭಿಸಲಿದ್ದಾರೆ.
-ಇಂದಿರಾ, ಸಿಡಿಪಿಒ, ಪಿರಿಯಾಪಟ್ಟಣ
ಹಂದಿ ಜೋಗಿ ಕಾಲೋನಿ ನಿವಾಸಿಗಳಿಗೆ ಪಟ್ಟಣದ ಹೊರಭಾಗದಲ್ಲಿ ಜಾಗವನ್ನು ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಕುಟುಂಬಗಳನ್ನು ಆ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು.
-ಪುಟ್ಟರಾಜು, ಪುರಸಭೆ ಅಧಿಕಾರಿ, ಪಿರಿಯಾಪಟ್ಟಣ