ಶಿವಮೊಗ್ಗ: ನಗರದ ಹೃದಯ ಭಾಗ ಗಾಂಧಿ ಬಜಾರ್ ರಸ್ತೆಯ ಫುಟ್‌ಪಾತ್ ಮತ್ತು ತಳ್ಳುಗಾಡಿಯಲ್ಲಿ ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದವರನ್ನು ಸೋಮವಾರ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
ವ್ಯಾಪಾರಸ್ಥರಿಗೆ ಶನಿವಾರವೇ ನೋಟಿಸ್ ಜಾರಿ ಮಾಡಿದ್ದರಿಂದ ಗಾಂಧಿ ಬಜಾರ್, ಎಸ್ ಎನ್ ಮಾರ್ಕೆಟ್ ಸುತ್ತಮುತ್ತಲಿನ ಬಹುತೇಕ ವ್ಯಾಪಾರಿಗಳು ಸೋಮವಾರ ವ್ಯಾಪಾರಕ್ಕೆ ಬಂದಿರಲಿಲ್ಲ. ಇದರಿಂದ ಕಾರ್ಯಾಚರಣೆಗೆ ಯಾವುದೇ ತೊಂದರೆ ಎದುರಾಗಲಿಲ್ಲ.
ಮೊದಲಿನಿಂದಲೂ ರಸ್ತೆ ಬದಿ ವ್ಯಾಪಾರಸ್ಥರನ್ನು ತೆರವು ಮಾಡಿ ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅನೇಕ ಬಾರಿ ಸಾರ್ವಜನಿಕರು ಮನವಿ ಮಾಡಿದ್ದರು. ಅಲ್ಲದೇ ಚುನಾವಣೆ, ವ್ಯಾಪಾರ ವಹಿವಾಟಿನಲ್ಲಿನ ಸಣ್ಣಪುಟ್ಟ ಮನಸ್ತಾಪಗಳಿಂದಲೂ ಕೋಮು ಗಲಭೆಗಳಿಗೂ ಕಾರಣವಾಗುತಿತ್ತು. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದ ಕಾರಣ ಸಾರ್ವಜನಿಕರು ಎಸ್‌ಪಿಗೆ ದೂರು ನೀಡಿದ್ದರು.
ಇವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಇಡೀ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಉಪಮೇಯರ್ ವಿಜಯಲಕ್ಷ್ಮೀ ಸಿ.ಪಾಟೀಲ್, ಪಾಲಿಕೆ ಸದಸ್ಯರಾದ ರೇಖಾ ಚಂದ್ರಶೇಖರ್, ಡಿವೈಎಸ್ಪಿ ಸುದರ್ಶನ್ ಸೇರಿದಂತೆ ಹಲವರು ಇದ್ದರು.
ಕನ್ಸರ್‌ವೆನ್ಸಿ ಪರಿಶೀಲನೆ ಗಾಂಧಿ ಬಜಾರ್‌ನಿಂದ ಸಂತ್ರಸ್ತರಾದ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಮೇಯರ್ ನಾಗರಾಜ್ ಕಂಕಾರಿ ಶಿವಪ್ಪ ನಾಯಕ ಸರ್ಕಲ್‌ನ ಅಂಡರ್‌ಪಾಸ್, ಕರ್ನಾಟಕ ಸಂಘದ ಕನ್ಸರ್ ವೆನ್ಸ್ ರಸ್ತೆಗಳನ್ನು ಪರಿಶೀಲಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸ್ಥಳೀಯರು, ಶಾಶ್ವತ ವ್ಯವಸ್ಥೆ ಮಾಡದೆ ಸಂಜೆ ಗಾಡಿಯನ್ನು ತೆಗೆದುಕೊಂಡು ಹೋಗುವಂತಿರಲಿ ಎಂದು ಮನವಿ ಮಾಡಿದರು.
ಈಗಾಗಲೇ ಅಭಿವೃದ್ಧಿ ಪಡಿಸಿರುವ ಕನ್ಸರ್‌ವೆನ್ಸಿಯ ಜೊತೆಗೆ ಉಳಿದ ಎರಡು ಕನ್ಸರ್‌ವೆನ್ಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಂತ್ರಸ್ತ ವ್ಯಾಪಾರಿಗಳ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು.