ಬಾಗಲಕೋಟೆ: ನಗರಸಭೆಯಿಂದ ನಗರದ ವಿವಿಧೆಡೆ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಶನಿವಾರ ಮುಂದುವರಿದಿದ್ದು, ಈ ವೇಳೆ ನಗರದ ಬಿಲಾಲ್ ಮಸ್ಜಿದ್ ಬಳಿ ನಗರಸಭೆ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ಮಧ್ಯೆ ವಾಗ್ವಾದ ನಡೆಯಿತು.
ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಹಾಗೂ ಪರಿಸರ ಅಭಿಯಂತರ ಹನಮಂತ ಕಲಾದಗಿ ನೇತೃತ್ವದಲ್ಲಿ ರೈಲ್ವೆ ನಿಲ್ದಾಣದಿಂದ ಬಿಲಾಲ್ ಮಜ್ಜಿದ, ಮೆಳ್ಳಿಗೇರಿ ವಾಣಿಜ್ಯ ಸಂಕೀರ್ಣದಿಂದ ಕೆರೂಡಿ ಆಸ್ಪತ್ರೆ ರಸ್ತೆವರೆಗೆ ಅಮೃತ ಯೋಜನೆಯಡಿ ನಿರ್ಮಿಸಿದ ಫುಟ್‌ಪಾತ್ ಅನ್ನು ವ್ಯಾಪಾರಸ್ಥರು ಅತಿಕ್ರಮಣ ಮಾಡಿಕೊಂಡಿದ್ದರು.
ಇದರಿಂದ ನಿತ್ಯ ಆಸ್ಪತ್ರೆಗೆ ಬರುವ ಸಾವಿರಾರು ಜನರು ರಸ್ತೆಯ ಮೇಲೆಯೇ ಸಂಚಾರ ಮಾಡುತ್ತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಫುಟ್‌ಪಾತ್ ತೆರವು ಮಾಡುವಂತೆ ಒತ್ತಾಯ ಕೇಳಿಬಂದಿತ್ತು.
ಶನಿವಾರ ಬೆಳಗ್ಗೆ ಬಿಲಾಲ್ ಮಸ್ಜಿದ್ ಬಳಿ ಫುಟ್‌ಪಾತ್ ಅತಿಕ್ರಮಣ ತೆರವಿಗೆ ನಗರಸಭೆ ಸಿಬ್ಬಂದಿ ಮುಂದಾಗುತ್ತಿದ್ದಂತೆ, ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದರು. ಮೊದಲು ರೈಲ್ವೆ ನಿಲ್ದಾಣ ಕಡೆಯಿಂದ ತೆರವು ಮಾಡಿ. ಆ ಮೇಲೆ ನಾವು ಅಂಗಡಿ ಮುಂದೆ ಹಾಕಿರುವ ತಗಡು ತೆಗೆದುಕೊಳ್ಳುತ್ತೇವೆ ಎಂದು ಪಟ್ಟು ಹಿಡಿದರು. ಈ ವೇಳೆ ನಗರಸಭೆಯ ಹೆಚ್ಚಿನ ಸಿಬ್ಬಂದಿ ಕರೆಸಿ, ಫುಟ್‌ಪಾತ್ ಮೇಲೆ ಹಾಕಿದ್ದ ಎಲ್ಲ ಗೂಡಂಗಡಿ, ಅಂಗಡಿ ಮುಂದೆ ಹಾಕಿದ್ದ ತಗಡು ತೆಗೆಯಲಾಯಿತು.
ಮೆಳ್ಳಿಗೇರಿ ವಾಣಿಜ್ಯ ಸಂಕಿರ್ಣದಿಂದ ಕೆರೂಡಿ ಆಸ್ಪತ್ರೆ ಹಾಗೂ ರೈಲ್ವೆ ನಿಲ್ದಾಣದಿಂದ ಬಿಲಾಲ್ ಮಸ್ಜಿದ್ ವರೆಗೆ ಸುಮಾರು 30ಕ್ಕೂ ಹೆಚ್ಚು ಗೂಡಂಗಡಿ, ಅಂಗಡಿ ಮುಂದಿನ ತಗಡು ತೆರವುಗೊಳಿಸಲಾಯಿತು. ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ, ಪರಿಸರ ಅಭಿಯಂತರ ಎಚ್.ವಿ. ಕಲಾದಗಿ, ಕಂದಾಯ ಅಧಿಕಾರಿ ಬಸವರಾಜ ನಿರುಗ್ಗಿ, ಜೆಸಿ ಸಾರವಾನ, ಆರೋಗ್ಯ ನಿರೀಕ್ಷರಾದ ಮನೋಜ, ಕಿರಣಕುಮಾರ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.