Advertisement
ನಗರದ ಹಳೆ ಬಸ್ ನಿಲ್ದಾಣದಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ ಹೂ, ಹಣ್ಣು ಮತ್ತು ಟೀ ಅಂಗಡಿಗಳನ್ನು ಅಕ್ರಮವಾಗಿ ಅತಿಕ್ರಮಿಸಿದ್ದ ಅಂಗಡಿಗಳನ್ನು ಪೊಲೀಸರ ಸರ್ಪಗಾವಲಿನಲ್ಲಿ ನಗರಸಭೆ ಸಿಬ್ಬಂದಿ ತೆರವು ಕಾರ್ಯ ನಡೆಸಿದರು.
Related Articles
Advertisement
ಮಂಗಳವಾರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿದ್ದು ತೆರವು ಗೊಂಡ ಜಾಗದಲ್ಲಿ ನಗರಸಭೆ ವತಿಯಿಂದ 1.35 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು 15 ದಿನಗಳೊಳಗೆ ಟೆಂಡರ್ ಕರೆದು ಅತಿ ಶೀಘ್ರದಲ್ಲೇ ಪೂರ್ಣಗೊಳಿಸಿ ಹೂವಿನ ಮಾರುಕಟ್ಟೆಯನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ.
2 ದಿನ ಕಾರ್ಯಾಚರಣೆ:ಮೊದಲನೇ ಹಂತವಾಗಿ ಕೋಲಾರ ನಗರದ ಹಳೆ ಬಸ್ ನಿಲ್ದಾಣದಲ್ಲಿ ತೆರವುಗೊಳಿಸಿದ್ದು, ಬುಧವಾರವೂ ನಗರದ ವಿವಿಧ ಕಡೆ ತೆರವು ಕಾರ್ಯ ಮುಂದುವರಿಯಲಿದೆ, ನಗರದಲ್ಲಿ ಎಲ್ಲೇ ಫುಟ್ಪಾತ್ ಮತ್ತು ನಗರಸಭೆಗೆ ಸೇರಿದ ಜಾಗ ಒತ್ತುವರಿಗೊಂಡವರ ವಿರುದ್ಧ ಎರಡು ದಿನಗಳ ಕಾಲ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ನಗರಸಭೆ ಆಯುಕ್ತ ಸತ್ಯನಾರಾಯಣ ತಿಳಿಸಿದರು.
ನಿರ್ಲಕ್ಷ್ಯಿಸಿದ್ದರು: ಫುಟ್ಪಾತ್ ಅಂಗಡಿಗಳ ತೆರವುಗೊಳಿಸುವ ಮುನ್ನಾ ದಿನವೇ ಆಟೋ ಪ್ರಚಾರದ ಮೂಲಕ ತೆರವುಗೊಳಿಸುವ ಎಚ್ಚರಿಕೆ ನೀಡಲಾಗಿತ್ತು. ಆದರೂ, ಕೆಲವು ಅಂಗಡಿ ಮಾಲಿಕರು ನಗರಸಭೆಯದು ಮಾಮೂಲಿ ಎಚ್ಚರಿಕೆ ಎನ್ನುವಂತೆ ನಿರ್ಲಕ್ಷಿಸಿದ್ದರು.
ಮಂಗಳವಾರ ಬೆಳಗ್ಗೆ ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಪೆಟ್ಟಿಗೆ ಅಂಗಡಿಗಳನ್ನು ನಗರಸಭೆ ಲಾರಿಗೆ ತುಂಬುವ ಸಂದರ್ಭದಲ್ಲಿ ಮಾಲಿಕರು ಪೆಟ್ಟಿಗೆ ಉಳಿಸುವಂತೆ ನಗರಸಭೆ ಅಧಿಕಾರಿಗಳೊಂದಿಗೆ ಗೋಗೆರೆದರೂ ಅಧಿಕಾರಿಗಳು ಬಿಡಲಿಲ್ಲ.
ಕೆಲವು ದಿನಗಳ ಹಿಂದಷ್ಟೇ ಗ್ರಂಥಾಲಯ ಹಾಗೂ ಟಿ.ಚನ್ನಯ್ಯ ರಂಗಮಂದಿರದ ಮುಂಭಾಗ ಹಣ್ಣಿನ ಹಾಗೂ ತರಕಾರಿ ಅಂಗಡಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ನಗರಸಭೆ ನಡೆಸಿತ್ತು. ಆದರೆ, ಮತ್ತೇ ಮೂರೇ ದಿನಕ್ಕೆ ಮತ್ತೇ ಅಂಗಡಿಗಳನ್ನು ಇಡಲಾಗಿತ್ತು. ಈಗಲೂ ನಗರಸಭೆ ಇಂತದ್ದೇ ಕಾರ್ಯಾಚರಣೆ ನಡೆಸಿ ನಂತರ ಪೆಟ್ಟಿಗೆ ಅಂಗಡಿಗಳನ್ನು ಹಾಗೂ ಫುಟ್ಪಾತ್ ಅತಿಕ್ರಮಿಸಲು ಅವಕಾಶ ಕಲ್ಪಿಸುತ್ತದೆ ಎಂದು ಸಾರ್ವಜನಿಕರು ದೂರುತ್ತಿದ್ದುದು ಕೇಳಿ ಬಂತು.