Advertisement
ಸಾವೋ ಪೌಲೊ (ಬ್ರಝಿಲ್): ಜಾಗತಿಕ ಫುಟ್‌ಬಾಲ್‌ನ ಪ್ರಪ್ರಥಮ ಸೂಪರ್‌ಸ್ಟಾರ್, ಬ್ರಝಿಲ್‌ನ ಲೆಜೆಂಡ್ರಿ ಆಟಗಾರ, 3 ಬಾರಿಯ ವಿಶ್ವಕಪ್ ವಿಜೇತ ತಂಡದ ಹೀರೋ, ಕ್ರೀಡಾಜಗತ್ತಿನ ತುಂಬ ಫುಟ್‌ಬಾಲ್ ಪ್ರೀತಿಯನ್ನು ಪಸರಿಸಿದ, ಕಾಲ್ಚೆಂಡಿನ ಈ ಪ್ರೀತಿಯನ್ನು ಇಂದಿನ ಪೀಳಿಗೆಯೂ ಆರಾಧಿಸುವಂತೆ ಮಾಡಿದ “ಪೀಲೆ’ ಇನ್ನು ನೆನಪು ಮಾತ್ರ. 82 ವರ್ಷದ ಅವರು ಗುರುವಾರ ಸಾವೋ ಪೌಲೋದ “ಆಲ್ಬರ್ಟ್ ಐನ್‌ಸ್ಟಿàನ್ ಆಸ್ಪತ್ರೆ’ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಇದರೊಂದಿಗೆ ಫುಟ್‌ಬಾಲ್ ಇತಿಹಾಸದ ಮಹಾನ್ ಹಾಗೂ ವರ್ಣರಂಜಿತ ಅಧ್ಯಾಯವೊಂದಕ್ಕೆ ತೆರೆ ಬಿತ್ತು.
1940ರ ಅಕ್ಟೋಬರ್ 23ರಂದು ಜನಿಸಿದ ಪೀಲೆ ಅವರ ನಿಜವಾದ ಹೆಸರು ಎಡ್ಸನ್ ಅರಾಂಟೆಸ್ ಡು ನಾಸಿಮೆಂಟೊ. ಆದರೆ ಜಗತ್ತಿನ ಪಾಲಿಗೆ ಇವರು ಪೀಲೆ ಎಂದೇ ಜನಪ್ರಿಯರಾದರು. “ಓ ರೀ’ ಎಂಬುದು ನೆಚ್ಚಿನ ಹೆಸರು. ಅಂದರೆ, ರಾಜ ಎಂದರ್ಥ. ಅಕ್ಷರಶಃ ಅವರು ಫುಟ್‌ಬಾಲ್ ರಾಜನಾಗಿಯೇ ಮೆರೆದರು.
Related Articles
Advertisement
1958ರ ಫೈನಲ್‌ನಲ್ಲಿ ಪೀಲೆ 2 ಗೋಲು ಹೊಡೆದು ಮೆರೆದಿದ್ದರು. 1962ರಲ್ಲಿ ಮೊದಲ ಪಂದ್ಯದಲ್ಲೇ ಗಾಯಾಳದ ಕಾರಣ ಪೀಲೆ ವಿಶ್ರಾಂತಿ ತೆಗೆದುಕೊಳ್ಳಬೇಕಾಯಿತು. 1970ರ ಫೈನಲ್‌ನಲ್ಲಿ ಗೋಲಿನ ಖಾತೆ ತೆರೆದದ್ದೇ ಪೀಲೆ.
ಪೀಲೆ ಕಾಲಾವಧಿ ಎನ್ನುವುದು ಕೇವಲ ಬ್ರಝಿಲ್ ಮಾತ್ರವಲ್ಲ, ಜಗತ್ತಿನ ಫುಟ್‌ಬಾಲ್‌ನ ಸುವರ್ಣ ಯುಗವೂ ಹೌದು. ನಿಲ್ಟನ್ ಸ್ಯಾಂಟೋಸ್, ದಿಡಿ, ಗ್ಯಾರಿಂಖ, ಜೈರ್‌ಝಿನೊ ಮೊದಲಾದವರು ಪೀಲೆ ಅವರ ಸಮಕಾಲೀನ ಶ್ರೇಷ್ಠರು.
ಸ್ಯಾಂಟೋಸ್ ದಾಖಲೆ ಫುಟ್‌ಬಾಲ್ ಜಗತ್ತು ಕಂಡ ಅತ್ಯಂತ ಚುರುಕಿನ ಫಾರ್ವರ್ಡ್ ಆಟಗಾರೆನೆಂಬುದು ಪೀಲೆ ಪಾಲಿನ ಹೆಗ್ಗಳಿಕೆ. ಅತ್ಯಂತ ನಿಖರ ಹಾಗೂ ಅಷ್ಟೇ ವೇಗದ ಪಾಸ್, ಅತ್ಯಾಕರ್ಷಕ ಡ್ರಿಬ್ಲಿಂಗ್ ಮೂಲಕ ಪೀಲೆ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಪೀಲೆ ತಮ್ಮ ಬದುಕಿನ ಬಹುತೇಕ ಅವಧಿಯನ್ನು ಸ್ಯಾಂಟೋಸ್ ಕ್ಲಬ್ ಪರ ಆಡುತ್ತ ಕಳೆದಿದ್ದರು. 659 ಪಂದ್ಯಗಳನ್ನಾಡಿ 643 ಗೋಲು ಸಿಡಿಸಿದ್ದು ಸ್ಯಾಂಟೋಸ್ ಕ್ಲಬ್‌ನ ದಾಖಲೆಯಾಗಿ ಉಳಿದಿದೆ. 1956ರಿಂದ 1974ರ ತನಕ ಪೀಲೆ ಸ್ಯಾಂಟೋಸ್ ಪರ ಆಡಿದ್ದರು. ಒಂದೇ ಕ್ಲಬ್ ಪರ ಅತ್ಯಧಿಕ 643 ಗೋಲು ಬಾರಿಸಿದ ಅವರ ದಾಖಲೆ 2020ರ ತನಕ ಅಜೇಯವಾಗಿತ್ತು. ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್ ಪರ 644 ಗೋಲು ಸಿಡಿಸಿ ಪೀಲೆ ದಾಖಲೆ ಮುರಿದರು. ಬ್ರಝಿಲ್ ಪರ 92 ಪಂದ್ಯಗಳಿಂದ 77 ಗೋಲು ಹೊಡೆದ ಪೀಲೆ ದಾಖಲೆಯನ್ನು ಮೊನ್ನೆ ಮೊನ್ನೆಯಷ್ಟೇ ನೇಮರ್ ಸರಿದೂಗಿಸಿದ್ದರು. 21 ವರ್ಷಗಳ ಫುಟ್‌ಬಾಲ್ ಬದುಕಿನಲ್ಲಿ ಒಟ್ಟು 1,363 ಪಂದ್ಯಗಳನ್ನು ಆಡಿರುವ ಪೀಲೆ 1,281 ಗೋಲು ಹೊಡೆದಿದ್ದಾರೆ. ಇದೊಂದು ಗಿನ್ನೆಸ್ ದಾಖಲೆ. ಅಧ್ಯಕ್ಷರ ಶೋಕ
“ತಾನು ಹೋದಲ್ಲೆಲ್ಲ ಬ್ರಝಿಲ್ ಹೆಸರನ್ನು ಬೆಳಗಿಸಿದ ಪೀಲೆ ಓರ್ವ ಮಹಾನ್ ವ್ಯಕ್ತಿ, ದೇಶಭಕ್ತ, ಹೆಮ್ಮೆಯ ರಾಯಭಾರಿ’ ಎಂದು ಬ್ರಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ತಮ್ಮ ಶೋಕಸಂದೇಶದಲ್ಲಿ ಪೀಲೆಯ ಗುಣಗಾನ ಮಾಡಿದ್ದಾರೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತದ ಫುಟ್‌ಬಾಲ್ ಅಭಿಮಾನಿಗಳು, ಹಾಲಿ-ಮಾಜಿ ಆಟಗಾರರು ಪೀಲೆ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಬೂಟ್ ಹೊಲಿದು ಸಂಪಾದನೆ
ಪೀಲೆಗೆ 11ರ ಹರೆಯದಲ್ಲೇ ಫುಟ್‌ಬಾಲ್ ಆಸಕ್ತಿ. ಆದರೆ ಫುಟ್‌ಬಾಲ್ ಪರಿಕರಗಳನ್ನು ಖರೀದಿಸಲು ಆರ್ಥಿಕ ಸಮಸ್ಯೆ. ಹೀಗಾಗಿ ಬೂಟ್ ಹೊಲಿಯುವ ಕೆಲಸ ಮಾಡತೊಡಗಿದರು. ಇವರ ಕಾಲ್ಚಳಕ ಅನುಭವಿಗಳನ್ನೂ ನಾಚಿಸುವಂತಿತ್ತು. ಇದನ್ನು ಮನಗಂಡ ಸ್ಥಳೀಯ ಕೆಲವು ವೃತ್ತಿಪರ ಆಟಗಾರರು ಅವರನ್ನು ಸ್ಯಾಂಟೋಸ್ ಯುವ ತಂಡಕ್ಕೆ ಸೇರಿಸಿದರು. ಮುಂದಿನದು ಇತಿಹಾಸ. ರೊನಾಲ್ಡೊ, ಮೆಸ್ಸಿಯಿಂದ ನಮನ
ಆರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ, ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಬ್ರಝಿಲ್‌ನ ನೇಮಾರ್ ಸಮಕಾಲೀನ ಫುಟ್‌ಬಾಲ್‌ನ ಸರ್ವಶ್ರೇಷ್ಠ ಆಟಗಾರರು ಎಂದು ಗೌರವಿಸಲ್ಪಟ್ಟಿದ್ದಾರೆ. ಇವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೀಲೆಯೊಂದಿಗಿನ ಚಿತ್ರ ಹಂಚಿಕೊಂಡು ಗೌರವ ಸಲ್ಲಿಸಿದ್ದಾರೆ. ಜರ್ಮನಿ ಫುಟ್‌ಬಾಲ್ ತಂಡದ ಖ್ಯಾತ ಆಟಗಾರ ಮೆಸುಟ್ ಒಝಿಲ್ ಕೂಡ ಅಂತಿಮ ನಮನ ಸಲ್ಲಿಸಿದ್ದಾರೆ. ಮೋಹನ್ ಬಗಾನ್ ವಿರುದ್ಧ ಆಟ
1977, ಸೆಪ್ಟೆಂಬರ್. ಪೀಲೆಗೆ ಆಗ 37 ವರ್ಷ. ಅವರು ಅಮೆರಿಕದ ನ್ಯೂಯಾರ್ಕ್ ಕಾಸ್ಮೋಸ್ ಕ್ಲಬ್ ತಂಡದ ಸದಸ್ಯರಾಗಿ ಕೋಲ್ಕತಾಕ್ಕೆ ಭೇಟಿ ನೀಡಿದ್ದರು. ಸೆ. 24ರಂದು ಏಷ್ಯಾದ ಅತ್ಯಂತ ಹಳೆಯ ಫುಟ್‌ಬಾಲ್ ಕ್ಲಬ್‌ಗಳಲ್ಲೊಂದಾದ ಮೋಹನ್ ಬಗಾನ್ ವಿರುದ್ಧ ಪಂದ್ಯವಾಡಿದ್ದರು. ಆಗ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ 60,000ಕ್ಕೂ ಅಧಿಕ ಮಂದಿ ಸೇರಿದ್ದರು. ಆಗಲೇ ಪೀಲೆಯನ್ನು ಕರೆಸಲು ಸಂಘಟಕರು 17 ಲಕ್ಷ ರೂ. ವ್ಯಯಿಸಿದ್ದರಂತೆ. 35,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು! ಪಂದ್ಯದ ಟಿಕೆಟ್‌ಗಳ ಬೆಲೆ 5 ರೂ.ನಿಂದ 60 ರೂ.ವರೆಗಿತ್ತು. ಪೀಲೆೆ ದಾಖಲೆ
– 1,283 ಪಂದ್ಯಗಳಲ್ಲಿ ಒಟ್ಟು 1,363 ಗೋಲು ಬಾರಿಸಿದ ಗಿನ್ನೆಸ್ ವಿಶ್ವದಾಖಲೆ.
– 16ನೇ ವರ್ಷದಲ್ಲೇ ಬ್ರಝಿಲ್ ರಾಷ್ಟ್ರೀಯ ತಂಡಕ್ಕೆ ಲಗ್ಗೆ. ಆರ್ಜೆಂಟೀನಾ ವಿರುದ್ಧ ಮೊದಲ ಗೋಲು.
– ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಧಿಕ 127 ಗೋಲು (1959ರಲ್ಲಿ). ಆಗ ಪೀಲೆ ವಯಸ್ಸು ಕೇವಲ 18 ವರ್ಷ.
– ಫುಟ್‌ಬಾಲ್ ಬಾಳ್ವೆಯಲ್ಲಿ ಅತ್ಯಧಿಕ 92 ಹ್ಯಾಟ್ರಿಕ್ ಸಾಧನೆ.
– ಫುಟ್‌ಬಾಲ್ ವಿಶ್ವಕಪ್ ಆಡಿದ, ಗೋಲು ಸಿಡಿಸಿದ ಹಾಗೂ ಕಪ್ ಗೆದ್ದ ಅತೀ ಕಿರಿಯ ಆಟಗಾರ.
– ವಿಶ್ವಕಪ್‌ನಲ್ಲಿ ಗೋಲು ಬಾರಿಸಿದ ಅತ್ಯಂತ ಕಿರಿಯ ಫುಟ್ಬಾಲಿಗ (17 ವರ್ಷ, 239 ದಿನ). 1958ರ ವೇಲ್ಸ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯ.
– ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಅತ್ಯಂತ ಸಣ್ಣ ಆಟಗಾರ (17 ವರ್ಷ, 244 ದಿನ). ಇದು ಫ್ರಾನ್ಸ್ ಎದುರಿನ 1958ರ ಸೆಮಿಫೈನಲ್‌ನಲ್ಲಿ ದಾಖಲಾಗಿತ್ತು.
– ವಿಶ್ವಕಪ್ ಫೈನಲ್‌ನಲ್ಲಿ ಗೋಲು ಹೊಡೆದ ಕಿರಿಯ ಆಟಗಾರ (17 ವರ್ಷ, 249 ದಿನ. ಸ್ವೀಡನ್ ಎದುರಿನ 1958ರ ಫೈನಲ್).
– ಬ್ರಝಿಲ್ ಪರ ಅತ್ಯಧಿಕ 77 ಗೋಲು ಬಾರಿಸಿದ ಜಂಟಿ ದಾಖಲೆ (92 ಪಂದ್ಯ).
– 14 ವಿಶ್ವಕಪ್ ಪಂದ್ಯಗಳಿಂದ 12 ಗೋಲು, ದ್ವಿತೀಯ ಸ್ಥಾನ. ಮೊನ್ನೆಯಷ್ಟೇ ಮೆಸ್ಸಿ 13ನೇ ಗೋಲು ಹೊಡೆದರು.
– 2 ಸಲ ಕ್ಯಾಲೆಂಡರ್ ವರ್ಷದಲ್ಲಿ 100 ಗೋಲು. 1959ರಲ್ಲಿ 107 ಗೋಲು, 1961ರಲ್ಲಿ 110 ಗೋಲು.
– ಪೀಲೆ ಆಡಿದ್ದು ಮೂರೇ ತಂಡಗಳ ಪರ. ಬ್ರಝಿಲ್ ರಾಷ್ಟ್ರೀಯ ತಂಡ, ಸ್ಯಾಂಟೋಸ್ ಕ್ಲಬ್ ಮತ್ತು ನ್ಯೂಯಾರ್ಕ್ ಕಾಸ್ಮೋಸ್.
– ವಿಶ್ವಕಪ್‌ನಲ್ಲಿ ಅತ್ಯಧಿಕ 10 ಸಲ ಬೇರೆಯವರಿಗೆ ಗೋಲು ಬಾರಿಸಲು ನೆರವು ನೀಡಿದ್ದಾರೆ (ಅಸಿಸ್ಟ್).