Advertisement

80ಕ್ಕೆ ಕಾಲಿಟ್ಟ ಕಾಲ್ಚೆಂಡಿನ ಸರದಾರ

10:04 PM Oct 23, 2020 | mahesh |

ಸಾವೋ ಪೌಲೊ (ಬ್ರಝಿಲ್‌): ಫ‌ುಟ್‌ಬಾಲ್‌ ಲೆಜೆಂಡ್‌, ಬ್ರಝಿಲ್‌ನ ಪೀಲೆ ಶುಕ್ರವಾರ 80ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಅನಾರೋಗ್ಯದಿಂದಾಗಿ ಇದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಅವರಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ಮೂರು ವಿಶ್ವಕಪ್‌ ಫ‌ುಟ್‌ಬಾಲ್‌ ಚಾಂಪಿಯನ್‌ ತಂಡದ ಸರದಾರನೆನಿಸಿದ ಪೀಲೆ ಸಾರ್ವಜನಿಕ ಕ್ಷೇತ್ರದಿಂದ ದೂರವಾಗಿದ್ದು, ಪರಿವಾರದ ಸದಸ್ಯರೊಂದಿಗೆ ಸಾವೋ ಪೌಲೋದ ಹೊರವಲಯದ ನಿವಾಸವೊಂದರಲ್ಲಿ ಉಳಿದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಸಹೋದರ ಜೈರ್‌ ನಿಧನದಿಂದ ಆಘಾತಕ್ಕೊಳಗಾದ ಪೀಲೆ, ಇದರಿಂದ ಇನ್ನೂ ಹೊರಬಂದಿಲ್ಲ ಎನ್ನಲಾಗಿದೆ.

ಫ‌ುಟ್‌ಬಾಲ್‌ನ “ಕಪ್ಪು ಹವಳ’ ಎಂದೇ ಗುರುತಿಸಲ್ಪಡುವ ಪೀಲೆ ಬ್ರಝಿಲ್‌ ಪರ ಸರ್ವಾಧಿಕ 77 ಗೋಲು ಬಾರಿಸಿದ ದಾಖಲೆ ಹೊಂದಿದ್ದಾರೆ. ಈ ದಾಖಲೆಯನ್ನೀಗ ನೇಯ್ಮರ್‌ ಸಮೀಪಿಸುತ್ತಿದ್ದಾರೆ (64 ಗೋಲು).

ಫಿಫಾ ಶತಮಾನದ ಫ‌ುಟ್ಬಾಲಿಗ
1995-98ರ ಅವಧಿಯಲ್ಲಿ ಬ್ರಝಿಲ್‌ನ ಕ್ರೀಡಾ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದು ಪೀಲೆ ಪಾಲಿನ ಹೆಗ್ಗಳಿಕೆಯಾಗಿದೆ. ಎರಡು ವರ್ಷಗಳ ಬಳಿಕ ಅವರು “ಫಿಫಾ ಶತಮಾನದ ಫ‌ುಟ್ಬಾಲಿಗ’ ಗೌರವಕ್ಕೆ ಪಾತ್ರರಾದರು. ಪೀಲೆ ತಂಡ 1958, 1962 ಮತ್ತು 1970ರಲ್ಲಿ ಫಿಫಾ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಚಾಂಪಿಯನ್‌ ಆಟಗಾರನ ತಂಡ ಕೊನೆಯ ಸಲ ವಿಶ್ವಕಪ್‌ ಜಯಿಸಿ ಭರ್ತಿ 50 ವರ್ಷಗಳು ಉರುಳಿವೆ. ಇದರ ಸುವರ್ಣ ಮಹೋತ್ಸವ ಹಾಗೂ ಅವರ 80ನೇ ವರ್ಷದ ಸವಿನೆನಪಿಗಾಗಿ ರಿಯೋ ಡಿ ಜನೈರೋದ “ಮರಕಾನ ಸ್ಟೇಡಿಯಂ’ನಲ್ಲಿ ಈ ಫ‌ುಟ್ಬಾಲಿಗನ ಆಳೆತ್ತರದ ಪ್ರತಿಮೆಯೊಂದನ್ನು ಸ್ಥಾಪಿಸಲಾಗಿದೆ. ಆದರೆ ಇದರ ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಲು ಪೀಲೆ ಅವರಿಗೆ ಸಾಧ್ಯವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next