Advertisement
ಆರು ತಿಂಗಳ ಮೊದಲು ರಜೆಯಲ್ಲಿ ಊರಿಗೆ ಬಂದಿದಾಗ , ಆ ನೋವಿನಲ್ಲೂ ಪಪ್ಪ ದಂಟೆ ಹಿಡಿದು ಸ್ವಲ್ಪ ಸ್ವಲ್ಪವಾದರೂ ನಡೆಯುತ್ತಿದ್ದರು. ನಾನಾವಾಗ ಹೇಳಿ¨ªೆ, “”ಬನ್ನಿ, ತಜ್ಞ ವೈದ್ಯರಲ್ಲಿ ಪರೀಕ್ಷಿಸಿ ಮದ್ದು ತರುವ, ನೋವು ಕಡಿಮೆಯಾಗುತ್ತದೆ” ಎಂದು. ಅದಕ್ಕವರು ಒಪ್ಪಲಿಲ್ಲ. ಸ್ಥಳೀಯ ವೈದ್ಯರ ನೋವಿನ ಎಣ್ಣೆ, ಮಾತ್ರೆ, ಇಂಜೆಕ್ಷನ್ ಮೇಲೇ ನಿರ್ಭರಿತರಾಗಿದ್ದರು. ಅವರ ಹಠಕ್ಕೆ ನಾನೂ ಸುಮ್ಮನಾಗಿದ್ದೆ . ಆದರೂ, ಹಿಂತಿರುಗುವಾಗ ಮನೆಯವರಿಗೂ ತಿಳಿ ಹೇಳಿದ್ದೆ : “”ನೋಡಿ, ನನ್ನ ಮಾತು ಪಪ್ಪ ಕೇಳುವುದಿಲ್ಲ. ನೀವಾದರೂ ತಜ್ಞ ವೈದ್ಯರಿಂದ ತಪಾಸಿಸಿ ಸೂಕ್ತ ಚಿಕಿತ್ಸೆ ಮಾಡಿಸಿ. ಇಲ್ಲದಿದ್ದರೆ, ಮುಂದೊಂದು ದಿನ ಅವರಿಗೆ ನಡೆಯಲು ಕಷ್ಟವಾಗುವಂತಹ ಪರಿಸ್ಥಿತಿ ಬರಬಹುದು” ಎಂದು. ಆದರೂ, ಏನೂ ಪ್ರಯೋಜನ ಆಗಲಿಲ್ಲ. ಕೊನೆಗೂ ನನ್ನೆಣಿಕೆಯಂತೆ ಪಪ್ಪ ನಡೆಯದಂತಾಗಿದ್ದರು. ತಂದೆಯನ್ನು ಸಮಾಧಾನಪಡಿಸುತ್ತಾ, “”ಮದುವೆ ಮುಗಿಸಿ ಬಂದವನೇ ನಿಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿಯವರೆಗೆ ತಿಂಡಿ, ಊಟ ಮುಗಿಸಿ ತಯಾರಾಗಿರಿ” ಎಂದು ಮನೆಯಿಂದ ಮದುವೆ ಹಾಲ್‌ನತ್ತ ನಡೆದೆ.
Related Articles
Advertisement
ಮನಸ್ಸಿನ ಈ ತಾಕಲಾಟದಲ್ಲಿ ಮದುವೆಯಲ್ಲಿ ಯಾರೆಲ್ಲ ಬಂದು ನನ್ನೊಡನೆ ಮಾತಾಡಿದರೋ, ನಾನೇನು ಪ್ರತಿಕ್ರಿಯಿಸಿದ್ದೆನೋ ಒಂದೂ ತಿಳಿಯುತ್ತಿಲ್ಲ. ಈ ನಡುವೆ ನನ್ನ ಪತ್ನಿ, “”ಊಟ ಮಾಡಿ ಮಾಮಾಜೀಯವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ನಾನು, ಮಕ್ಕಳು ಮತ್ತೆ ಬರುತ್ತೇವೆ” ಎಂದಾಗಲೇ ಯೋಚನಾಲಹರಿಯಿಂದ ಹೊರಬಂದಿದ್ದೆ. ಮನಸ್ಸಿಲ್ಲದ ಮನಸ್ಸಿನಿಂದ ಊಟ ಮಾಡಿ ಎದ್ದವನೇ ಸೀದಾ ಮನೆಯ ಕಡೆಗೆ ಧಾವಿಸಿದೆ. ಪಪ್ಪ ತಯಾರಾಗಿ ಕುಳಿತಿದ್ದರು. ಅವರನ್ನು ಎತ್ತಿ ರಿಕ್ಷಾದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಹೋದೆವು.
ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಬಹಳಷ್ಟಿತ್ತು. ಅವರ ಹೆಸರನ್ನು ನೋಂದಾಯಿಸಿ ಮೂಳೆವೈದ್ಯರಿಗೆ ತೋರಿಸುವಾಗ ಕೆಲವು ಸಮಯ ಹಿಡಿಯಿತು. ವೈದ್ಯರು ಎಕ್ಸ್‌ರೇ, ರಕ್ತ ಪರೀಕ್ಷೆಗೆ ಬರೆದುಕೊಟ್ಟು ಮರುದಿನ ಬರಲು ಹೇಳಿದರು. ಮರುದಿನ ರಕ್ತದ ರಿಪೋರ್ಟ್‌ನಲ್ಲಿ ಹಿಮೋಗ್ಲೋಬಿನ್ ಅಂಶ 7%, ಅಲ್ಲದೆ, ಎಕ್ಸ್‌ರೇಯಿಂದ ಕಾಲಿನಗಂಟು ಮೂಳೆ ಸವೆದಿದೆ ಎಂದು ತಿಳಿಯಿತು. ವೈದ್ಯರು ರೋಗಿಯನ್ನು ಅಡ್ಮಿಟ್ ಮಾಡಿ ರಕ್ತಹೀನತೆಗೆ ಕಾರಣ ಶೋಧಿಸಬೇಕೆಂದರು. ಪಪ್ಪನನ್ನು ಅಡ್ಮಿಟ್ ಮಾಡಬೇಕೆಂದಾಗ, ತತ್‌ಕ್ಷಣ ಒಬ್ಬ, “”ಇದು ವಯಸ್ಸಿಗೆ ಸಂಬಂಧಪಟ್ಟ ಕಾಯಿಲೆ. ಈ ವಯಸ್ಸಿನಲ್ಲಿ ಶರೀರದಲ್ಲಿ ರಕ್ತ ಕಡಿಮೆಯಾಗುವುದು ಸ್ವಾಭಾವಿಕ. ಅದಕ್ಕೆ ಅಡ್ಮಿಟ್ ಮಾಡಿ ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಅಲ್ಲದೆ, ಆಸ್ಪತ್ರೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಉಪದ್ರವ ಬೇರೆ. ಹೀಗೆಯೇ ನನ್ನ ಗೆಳೆಯನ ಸಂಬಂಧಿಕನೊಬ್ಬನ ಬಾಯಿಯಲ್ಲಿ ಟ್ಯೂಬ್ ಹಾಕುವಾಗ ಅನ್ನನಾಳದ ಬದಲು ಶ್ವಾಸನಾಳಕ್ಕೆ ಹೋಗಿ ಭಾರಿ ತೊಂದರೆ ಆಗಿದೆಯಂತೆ” ಎಂದ.
ಇನ್ನೊಬ್ಬ, “”ರಕ್ತಹೀನತೆಗೆ ಅಡ್ಮಿಟ್, ಗಿಡ್ಮಿಟ್ ಏನೂ ಬೇಕಾಗಿಲ್ಲ. ಸರಿಯಾಗಿ ಊಟ ಮಾಡಿದರೆ, ರಕ್ತ ಹೆಚ್ಚಾಗುತ್ತದೆ. ಈ ವೈದ್ಯರಿಗೆಲ್ಲಾ ಕೆಲಸ ಇಲ್ಲ. ಎಲ್ಲದಕ್ಕೂ ಅಡ್ಮಿಟ್ ಮಾಡುವುದು ಈಗ ಮಾಮೂಲಿ ಆಗಿ ಹೋಗಿದೆ. ಇಲ್ಲದಿದ್ದರೆ ಇವರ ಆಸ್ಪತ್ರೆ ನಡೆಯುವುದು ಹೇಗೆ?” ಎಂದ. ಮತ್ತೂಬ್ಬ , “”ಇದಕ್ಕೆಲ್ಲಾ ಇಂಗ್ಲಿಶ್ ಮದ್ದು ಮಾಡುವ ಅಗತ್ಯ ಇಲ್ಲ, ನೋವಿನಎಣ್ಣೆ ತಿಕ್ಕಿ ಬಿಸಿನೀರಿನ ಶಾಖ ಕೊಟ್ಟರೆ ನೋವು ಕಡಿಮೆಯಾಗುತ್ತದೆ. ಆರ್ಯುವೇದ ಅಥವಾ ಹೋಮಿಯೋಪತಿಯ ಚಿಕಿತ್ಸೆ ಇದಕ್ಕೆ ಭಾರೀ ಒಳ್ಳೆಯದು” ಎಂದ.
ಹೀಗೆ ಒಂದೇ, ಎರಡೇ, ಇವರ ನಾನಾ ತರದ ನಕಾರಾತ್ಮಕ ಸಲಹೆಗಳಿಂದ ಮನಸ್ಸಿಗೆ ಮತ್ತಷ್ಟು ನೋವಾಯಿತು. ಹಣ, ಸಮಯ ಇಲ್ಲ ಎಂದೇ ಅಥವಾ ರಗಳೆ ಏಕೆಂದೇ? ಇಲ್ಲಾ ವಯೋಸಹಜ ಎಂದು ತಂದೆಯ ನೋವು ಅರ್ಥವಾಗಲಿಲ್ಲವೇ? ಯಾಕಾಗಿ ಇವರು ಈ ರೀತಿ ವರ್ತಿಸುತ್ತಿದ್ದಾರೆಂದು ತಿಳಿಯಲಿಲ್ಲ.
ಆದರೂ, ದೃಢತೆಯಿಂದ ಪಪ್ಪನನ್ನು ಕೂಡಲೇ ಅಡ್ಮಿಟ್ ಮಾಡಿದೆ. ರಕ್ತ, ಹೊಟ್ಟೆ ಸ್ಕ್ಯಾನ್, ಇಸಿಜಿ, ಹೃದಯದ ಸ್ಕ್ಯಾನ್, ಎಂಡೋಸ್ಕೋಪಿ, ಕೊಲೊನೋಸ್ಕೋಪಿ… ಎಂದು ಸಂಬಂಧಪಟ್ಟ ಪರೀಕ್ಷೆಗಳನ್ನು ಮಾಡಿದರು. ಅಂತೂ ಕೊನೆಗೆ ಪಪ್ಪನ ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆ ಇರುವುದು ತಿಳಿಯಿತು. ಅದಕ್ಕೆ ಮದ್ದು ಕೊಟ್ಟು ನಾಲ್ಕು ದಿನದಲ್ಲೇ ಡಿಸ್‌ಚಾರ್ಜ್ ಮಾಡಿದರು. ಬಳಿಕ ನಾನೂ ಮುಂಬಯಿಗೆ ಹೊರಟೆ.
ಹದಿನೈದು ದಿನದ ಬಳಿಕ ಪಪ್ಪ ಬಹಳಷ್ಟು ಚೇತರಿಸಿಕೊಂಡು ವಾಕರ್ ಹಿಡಿದು ಮೆಲ್ಲ ಮೆಲ್ಲನೆ ನಡೆಯುತ್ತಿ¨ªಾರೆ ಎಂದು ತಿಳಿದು ನನ್ನ ಮನಸ್ಸಿಗೆ ಅತೀವ ನೆಮ್ಮದಿಯಾಯಿತು. ಫೋನ್‌ನಲ್ಲಿ ಮಾತಾಡುತ್ತಿದ್ದಾಗ ಪಪ್ಪ, “”ರವಿ, ಈ ಮೊದಲೇ ನಿನ್ನ ಮಾತು ಕೇಳಿದ್ದರೆ ಬಹುಶಃ ನನ್ನ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಕೆಟ್ಟ ಮೇಲೆ ಬುದ್ಧಿ ಬರುವುದು ತಾನೆ?” ಎನ್ನುತ್ತಿದ್ದಾಗ, ಮನೆಯವರು ಯಾರೋ ಅವರೊಡನೆ ಮೇಲುಸ್ತರದ ಧ್ವನಿಯಲ್ಲಿ ಮಾತಾಡುವುದು ಕೇಳಿಸಿತು!
mohan.k@cas.ind.in