Advertisement

ಜಿಲ್ಲಾದ್ಯಂತ ಕಾಲುಸಂಕ ಅಭಿಯಾನ : ಕಾಲ್ತೊಡಿಗೆ 8 ತಿಂಗಳ ಹಿಂದೆಯೇ ಸಂಕ ಮಂಜೂರಾಗಿತ್ತು

08:57 AM Aug 11, 2022 | Team Udayavani |

ಕುಂದಾಪುರ : ಕಾಲ್ತೊಡಿನ ಬೀಜಮಕ್ಕಿಯಲ್ಲಿ ಬಾಲಕಿ ನೀರುಪಾಲಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕಾಲುಸಂಕ ಅಭಿಯಾನ ನಡೆಯಲಿದೆ. ನೂರಾರು ಕಾಲುಸಂಕಗಳ ನಿರ್ಮಾಣ ನರೇಗಾ ಮೂಲಕ ಆಗಲಿದೆ ಎಂದು ಉಸ್ತುವಾರಿ, ಮೀನುಗಾರಿಕೆ ಸಚಿವ ಎಸ್‌. ಅಂಗಾರ ಹೇಳಿದರು.

Advertisement

ಅವರು ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ವಿವಿಧ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ನಡೆಸಿ ಸುದ್ದಿಗಾರರ ಜತೆ ಮಾತನಾಡಿದರು.
15-20 ದಿನಗಳಲ್ಲಿ ಎಲ್ಲ ಗ್ರಾ.ಪಂ.ಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಾಲುಸಂಕದ ಪ್ರದೇಶಗಳನ್ನು ಗುರುತಿಸಿ ಕೊಡಲು ಸೂಚನೆ ಕೊಡಲಾಗಿದೆ. ಎಲ್ಲೆಡೆಯೂ ನರೇಗಾ ಮೂಲಕ ತಲಾ 4.5 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ತೋಡುಗಳಿಗೆ ಕಾಲುಸಂಕಗಳ ನಿರ್ಮಾಣ ನಡೆಯಲಿದೆ. ಅದಾಗಿಯೂ ಕಾಲು ಸಂಕದ ಕೊರತೆಯಿಂದ ದುರ್ಘ‌ಟನೆ ಗಳು ಸಂಭವಿಸಿದರೆ ಸಂಬಂಧಪಟ್ಟ ಪಿಡಿಒ ಹಾಗೂ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು.

ಪರಿಹಾರ ಹೆಚ್ಚಳ
ಶಿರೂರು, ಬೈಂದೂರು ಮೊದಲಾ ದೆಡೆ ಮೊನ್ನೆಯ ಮಳೆಯಿಂದ 66 ದೋಣಿಗಳು ಹಾನಿಗೀಡಾಗಿವೆ. ಮೀನು ಗಾರರ ದೋಣಿ, ಬಲೆಗೆ ಸುಮಾರು 22 ಲಕ್ಷ ರೂ. ವೆಚ್ಚವಾಗುತ್ತದೆ. ಇಲಾಖೆ ಯಿಂದ ಕೇವಲ 4,500 ರೂ. ಪರಿಹಾರ ದೊರೆಯುವುದು. ಎನ್‌ಡಿಆರ್‌ಎಫ್ ನಿಯಮದಲ್ಲಿ ಹೆಚ್ಚುವರಿ ಕೊಡಲು ಅವಕಾಶ ಇಲ್ಲ. ಆದ್ದರಿಂದ ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ದೋಣಿ ಹಾನಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

381 ಕೋ.ರೂ. ಮಂಜೂರು
ಕೇಂದ್ರ ಬಂದರು ಮತ್ತು ಮೀನು ಗಾರಿಕೆ ಸಚಿವರ ಜತೆ ಮಾತನಾಡಿದ್ದು ಕರಾವಳಿ ಅಭಿವೃದ್ಧಿ, ಹೂಳೆತ್ತುವಿಕೆ, ಜೆಟ್ಟಿ ನಿರ್ಮಾಣ, ಬಂದರು ಅಭಿವೃದ್ಧಿಗೆ ಮನವಿ ನೀಡಲಾಗಿತ್ತು. ಈ ಪೈಕಿ 381 ಕೋ.ರೂ.ಗಳ 9 ಕಾಮಗಾರಿಗಳಿಗೆ ಕೇಂದ್ರ ಅನುಮೋದನೆ ನೀಡಿದೆ. ಮೀನುಗಾರರ ಆವಶ್ಯಕತೆಗಳಿಗೆ ಸರಕಾರ ಗಮನ ಹರಿಸುತ್ತದೆ. ಮೀನುಗಾರರು ಪೂರ್ಣ ಸಹಕಾರ ನೀಡಬೇಕು. ಯಾವುದೇ ಮೀನುಗಾರರಿಗೆ ಅನ್ಯಾಯ ಮಾಡಿ ಯಾವುದೇ ಅಭಿವೃದ್ಧಿಯನ್ನೂ ಮಾಡುವುದಿಲ್ಲ ಎಂದರು.

ಒಂದೇ ಮಾದರಿ ಕ್ಷೇತ್ರ
ಗ್ರಾಮೀಣಕ್ಕೆ ಹೋಲಿಸಿದರೆ ಬೈಂದೂರು ಹಾಗೂ ಸುಳ್ಯ ಕ್ಷೇತ್ರ ಒಂದೇ ಮಾದರಿಯಲ್ಲಿವೆ. ಸುಳ್ಯ ಕ್ಷೇತ್ರದಲ್ಲಿ 148 ಸೇತುವೆಗಳಾಗಿದ್ದು ಇನ್ನೂ 200 ಸೇತುವೆಗಳ ಅಗತ್ಯವಿದೆ. ಉಡುಪಿ
ಜಿಲ್ಲೆಯಲ್ಲಿ ಕಾಲುಸಂಕ ಅಭಿಯಾನ ನಡೆದ ಬಳಿಕ ದ.ಕ.ದಲ್ಲೂ ಹಮ್ಮಿಕೊಳ್ಳ ಲಾಗುವುದು ಎಂದರು .

Advertisement

ನಿಯಮ ತಿದ್ದುಪಡಿ
ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ನಿಯಮಗಳ ತಿದ್ದುಪಡಿಯಾಗಬೇಕಿದೆ. ಕೆಲವೆಡೆ ಸರಕಾರಕ್ಕೂ ಆದಾಯ ಖೋತಾ ಆಗುತ್ತಿದೆ. ಇದರಲ್ಲಿ ಅಧಿಕಾರಿಗಳ ತಪ್ಪೂ ಇದೆ. ಆದ್ದರಿಂದ ಪಂಜರಕೃಷಿ, ಸಿಗಡಿ ಸೇರಿದಂತೆ ಎಲ್ಲಬಗೆಯ ಮೀನುಗಾರಿಕೆ ಕುರಿತು ಇರುವ ನಿಯಮಗಳ ತಿದ್ದು ಪಡಿಗೆ ಸರಕಾರ ಮುಂದಾಗಿದೆ. ಈಗಾಗಲೇ ಮೀನುಗಾರರ ಸಭೆ ಕರೆದು ಅಭಿ ಪ್ರಾಯ ಪಡೆಯಲಾಗಿದೆ ಎಂದರು.

ಮೀನು ಮಾರಾಟ ವಾಹನ
ಹಳ್ಳಿ ಹಳ್ಳಿಗಳಿಗೆ ಕರಾವಳಿ ತೀರದಿಂದ ಮೀನು ಸಾಗಾಟ ಮಾಡಲು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 30 ವಾಹನಗಳಂತೆ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ರಾಜ್ಯ ಸರಕಾರದ ಪಾಲು ಹಾಕಿ ಯೋಜನೆಯಾಗುತ್ತಿದ್ದು ಸಾರ್ವಜನಿಕ ಪಾಲಿನ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರಸನ್ನ ಉಪಸ್ಥಿತರಿದ್ದರು.

ಕಾಲ್ತೊಡಿಗೆ 8 ತಿಂಗಳ ಹಿಂದೆಯೇ ಸಂಕ ಮಂಜೂರಾಗಿತ್ತು
ದುರ್ಘ‌ಟನೆ ಸಂಭವಿಸಿರುವ ಕಾಲ್ತೊಡಿಗೆ 8 ತಿಂಗಳ ಹಿಂದೆಯೇ 11 ಲಕ್ಷ ರೂ.ಗಳ ಕಾಲುಸಂಕ ಮಂಜೂರಾಗಿದೆ. ಆದರೆ ಲೋಕೋಪಯೋಗಿ ಇಲಾಖೆಯ ವಿಳಂಬ ಧೋರಣೆಯಿಂದಾಗಿ ಇನ್ನೂ ನಿರ್ಮಾಣ ಆಗಿಲ್ಲ. ಇದಕ್ಕೆ ಇಲಾಖೆಯನ್ನೇ ಹೊಣೆ ಮಾಡಲಾಗುವುದು ಮತ್ತು ಸಂಬಂಧಪಟ್ಟ ಎಂಜಿನಿಯರರನ್ನು ವಿಚಾರಿಸಲಾಗುವುದು ಎಂದು ಅಂಗಾರ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next