ಮೈಸೂರು: ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪಶು ಸಖೀಯರಿಗೆ ತರಬೇತಿ, ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಸೆ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರಕಾರದ ಯೋಜನೆಯಾದ ಎ-ಹೆಲ್ಪ್ ಅಥವಾ ಪಶು ಸಖೀಯರನ್ನು ರಾಜ್ಯದ ಪ್ರತಿ ಗ್ರಾಮ ಪಂಚಾಯತ್‌ಗೆ ಒಬ್ಬರಂತೆ 5,962 ಮಂದಿಯನ್ನು ನೇಮಕ ಮಾಡಲಾಗಿದೆ. ಇವರಿಗೆ ಕೇಂದ್ರ ಸರಕಾರವೇ ಪ್ರತಿ ತಿಂಗಳು 3,800 ರೂ. ಗೌರವಧನ ನೀಡುತ್ತಿದೆ. ಇವರು ಪಶು ಸಂಗೋಪನೆ ಚಟುವಟಿಕೆಗಳಿಗೆ ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದರು.
ಚರ್ಮಗಂಟು ರೋಗ ಮತ್ತೆ ಹೆಚ್ಚಳ
ರಾಜ್ಯದಲ್ಲಿ ಕಾಲುಬಾಯಿ ಜ್ವರ ನಿಯಂತ್ರಣದಲ್ಲಿದೆ. ಆದರೆ ಚರ್ಮಗಂಟು ರೋಗ ಮತ್ತೆ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಸದ್ಯಕ್ಕೆ ಚರ್ಮಗಂಟು ರೋಗಕ್ಕೆ 4 ಲಕ್ಷ ಲಸಿಕೆ ದಾಸ್ತಾನಿದೆ. ಹಾಗೆಯೇ ಪಶು ವೈದ್ಯರ ಕೊರತೆ ನೀಗಿಸಲು 400 ಪಶು ವೈದ್ಯರ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದ್ದು, ಶೀಘ್ರವೇ ಕೆಪಿಎಸ್ಸಿಯಿಂದ ನೇಮಕಾತಿ ನಡೆಯಲಿದೆ. ಈಗಾಗಲೇ 250 ಪಶು ನಿರೀಕ್ಷರರನ್ನು ಸಿಬಂದಿ ಇಲ್ಲದಿರುವ ಆಸ್ಪತ್ರೆಗಳಿಗೆ ನೇಮಕ ಮಾಡಲಾಗುವುದು ಎಂದು ಸಚಿವ ವೆಂಕಟೇಶ್ ಹೇಳಿದರು.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಮೇವು ಸಾಗಾಟ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಹೊರ ರಾಜ್ಯಗಳಿಗೆ ಮೇವು ಸಾಗಾಣಿಕೆ ಮಾಡದಂತೆ ನಿಷೇಧ ಹೇರುತ್ತೇವೆ. ಸದ್ಯಕ್ಕೆ ರಾಜ್ಯದಲ್ಲಿ 1.16 ಕೋಟಿ ರಾಸುಗಳಿದ್ದು, 7 ತಿಂಗಳಿಗೆ ಆಗುವಷ್ಟು ಮೇವು ದಾಸ್ತಾನಿದೆ. ಮೇವು ಬೆಳೆಸಲು ಕೇಂದ್ರ ಸರಕಾರ 48 ಲಕ್ಷ ರೂ. ಬಿಡುಗಡೆ ಮಾಡಿದ್ದು, ಶೀಘ್ರವೇ ರೈತರಿಗೆ ವಿತರಿಸಲಾಗುವುದು.
-ಕೆ.ವೆಂಕಟೇಶ್, ಪಶುಸಂಗೋಪನೆ ಖಾತೆ ಸಚಿವ