Advertisement

ಆಹಾರ ಜನರ ಹಕ್ಕು: ಹಸ್ತಕ್ಷೇಪ ಸರಿಯಲ್ಲ 

12:38 PM Jun 09, 2017 | |

ಬೆಂಗಳೂರು: ಆಹಾರ ಪದ್ಧತಿ ಪ್ರತಿಯೊಬ್ಬರ ಹಕ್ಕು. ಇದರಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ಅರಮನೆಯಲ್ಲಿ ಹಮ್ಮಿಕೊಂಡಿದ್ದ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದ ಅವರು, “ಆಹಾರ ಸೇವನೆ ವಿಚಾರದಲ್ಲಿ ಪ್ರತಿಯೊಬ್ಬರು ಸ್ವತಂತ್ರರು.

Advertisement

ಇಂತಹದ್ದೇ ಆಹಾರ ಸೇವನೆ ಮಾಡಬೇಕು ಅಥವಾ ಮಾಡಬಾರದು ಎಂಬ ಕಟ್ಟಪಾಡು ವಿಧಿಸಲು ಸಾಧ್ಯವಿಲ್ಲ. ಗೋಹತ್ಯೆ ನಿಷೇಧದ ಹೆಸರಿಲ್ಲಿ ಆಹಾರ ಪದ್ಧತಿಯ ಹಕ್ಕಿನ ಮೇಲೆ ಕೇಂದ್ರ ಸರ್ಕಾರ ಅಧಿಕಾರ ಸಾಧಿಸಲು ಹೊರಟಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಗೋ ರಕ್ಷಣೆ ಮಾಡುವುದು ಗೊತ್ತಿದೆ:  “ಗೋವುಗಳ ರಕ್ಷಣೆ ರಾಜ್ಯ ಸರ್ಕಾರದ ಹೊಣೆ. ಅದನ್ನು ಹೇಗೆ ಮಾಡಬೇಕು ಎಂಬುದು ನಮಗೆ ತಿಳಿದಿದೆ ಮತ್ತು ಗೋ ರಕ್ಷಣೆ ಮಾಡುತ್ತೇವೆ,’ ಎನ್ನುವ ಮೂಲಕ ಕೇಂದ್ರದ ಗೋಹತ್ಯಾ ನಿಷೇಧದ ನಿಲುವಿಗೆ ವಿರೋಧ ವ್ಯಕ್ತಪಡಿಸಿದರು.

“ರಂಜಾನ್‌ ಅತ್ಯಂತ ಪವಿತ್ರವಾದ ಮಾಸ. ರಾಜ್ಯದ 6 ಕೋಟಿ ಜನರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುವುದರ ಜತೆಗೆ ರಾಜ್ಯ ಸರ್ಕಾರಕ್ಕೂ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುವಂತೆ ಮುಸ್ಲಿಂ ಬಾಂಧವರಲ್ಲಿ,’ ಮನವಿ ಮಾಡಿದರು. ರಾಜ್ಯಪಾಲ ವಿ.ಆರ್‌.ವಾಲಾ ಅವರು ಮಾತನಾಡಿ, ರಂಜನ್‌ ಮಾಸದ ಶ್ರೇಷ್ಠತೆಯನ್ನು ವಿವರಿಸಿದರಲ್ಲದೆ, ಎಲ್ಲರಿಗೂ ಶುಭ ಹಾರೈಸಿದರು.

 ಸಚಿವರಾದ ಕೆ.ಜೆ.ಜಾಜ್‌, ಯು.ಟಿ.ಖಾದರ್‌, ತನ್ವೀರ್‌, ಎಂ.ಕೃಷ್ಣಪ್ಪ, ರಮೇಶ್‌ ಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಮುಸ್ಲಿಂ ಸಮುದಾಯದ ಮುಖಂಡರು, ಸಮುದಾಯ ಬಾಂಧವರು ಉಪಸ್ಥಿತರಿದ್ದರು. ಇಫ್ತಾರ್‌ ಕೂಟದಲ್ಲಿ ಸಂದೇಶ ವಿನಿಯಮಯಾಯಿತು. ನಾಯಕರು ಭೋಜನ ಸವಿದರು.

Advertisement

ಪುಷ್ಕಳ ಭೋಜನದ ಸವಿಯುಂಡರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಗೆ ಪ್ರತ್ಯೇಕವಾಗಿ ಭೋಜನದ ವ್ಯವಸ್ಥೆ ಮಾಡಲಾತ್ತು. ಚಿಕನ್‌ ಕಬಾಬ್‌, ಮಟನ್‌ ಬಿರಿಯಾನಿ ಹಾಗೂ ವಿವಿಧ ಬಗೆಯ ಖಾದ್ಯಗಳನ್ನು ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ, ಸಚಿವ, ಶಾಸಕ ಮಿತ್ರರೊಂದಿಗೆ ಸವಿದು ಸಹೋದರತೆಯ, ಸಾಮರಸ್ಯದ ಬಾಂಧವ್ಯ ಮೆರೆದರು.

ರಾಹುಲ್‌ ಗಾಂಧಿ ಬಂಧನ ಸಿಎಂ ಆಕ್ಷೇಪ 
ಬೆಂಗಳೂರು:
ಮಧ್ಯಪ್ರದೇಶದ ಮದಸೌರ್‌ನಲ್ಲಿ ಸರ್ಕಾರ ನಡೆಸಿದ ಗೋಲಿಬಾರ್‌ನಿಂದ ಮೃತರಾದ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋಗಿದ್ದ ರಾಹುಲ್‌ ಗಾಂಧಿ ಅವರನ್ನು ಪೊಲಿಸರು ವಶಕ್ಕೆ ಪಡೆದಿರುವುದು ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರು. ಕಷ್ಟದಲ್ಲಿರುವ ರೈತರ ನೆರವಿಗೆ ಹೋಗುವುದು ಅವರ ಕರ್ತವ್ಯ. ಅವರನ್ನು ವಶಕ್ಕೆ ಪಡೆಯುವ ಮೂಲಕ ಅವರ ಮೂಲಭೂತ ಹಕ್ಕಿನ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದರು.

ನಾವು ಅಧಿಕಾರಕ್ಕೆ ಬಂದರೆ ರೈತರ ಆದಾಯವನ್ನು ಶೇಕಡಾ 50 ರಷ್ಟು ಹೆಚ್ಚಿಸುತ್ತೇವೆ ಎಂದು ಹೇಳಿದ್ದ ಮೋದಿ, ಮಧ್ಯಪ್ರದೇಶ ಸರ್ಕಾರ ರೈಗತರಿಗೆ ನೆರವಾಗುವ ಬದಲು ಗುಂಡಿನೇಟು ನೀಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ರೈತರ ಮೇಲೆ ಗೋಲಿಬಾರ್‌ ಮಾಡಿದ್ದರು ಎಂದು ಆಕ್ರೋಶಗೊಂಡರು. 

ಉತ್ತರ ಪ್ರದೇಶ ಸರ್ಕಾರ ಸಾಲ ಮನ್ನಾ ಮಾಡಲು ಆ ರಾಜ್ಯಕ್ಕೆ ವಿಶೇಷ ನೆರವು ನೀಡಿರುವ ಕೇಂದ್ರ ಸರ್ಕಾರ ಉಳಿದ ರಾಜ್ಯಗಳ ರೈತರಿಗೆ ಏಕೆ ಅನ್ಯಾಯ ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಕರ್ನಾಟಕ ಮಾತ್ರವಲ್ಲ, ಕೇಂದ್ರ ಸರ್ಕಾರ ಇಡೀ ದೇಶದ ರೈತರ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next