Advertisement

ಎರಡು ವರ್ಷ ವಯಸ್ಸಿನವರೆಗೆ ಸಣ್ಣ ಮಕ್ಕಳ ಆಹಾರ

06:00 AM Sep 09, 2018 | |

ಹಿಂದಿನ ವಾರದಿಂದ-  ಫ್ರಿಜ್‌ನಲ್ಲಿರಿಸಿದ ಆಹಾರವನ್ನು ಸಹಜ ಉಷ್ಣತೆಗೆ ತರುವುದು ಹೇಗೆ?
ಹಿಂಡಿ ತೆಗೆದು ಫ್ರಿಜ್‌ನಲ್ಲಿ ಇರಿಸಿದ ಎದೆಹಾಲಿನ ಮುಚ್ಚಿದ ಪಾತ್ರೆಯನ್ನು ನಳ್ಳಿ ನೀರಿಗೆ ಹಿಡಿದು ಅಥವಾ ಬಿಸಿ ನೀರು ಇರುವ ಪಾತ್ರೆಯಲ್ಲಿ ಇರಿಸಿ ನಿಧಾನವಾಗಿ ಸಹಜ ಉಷ್ಣತೆಗೆ ತರಬಹುದು. ಆದರೆ ತುಂಬಾ ಬಿಸಿಯಾಗಬಾರದು.

Advertisement

ಶಿಶುಗಳಿಗೆ ಅವರು ಬಯಸಿದಷ್ಟು ಬಾರಿ ಮತ್ತು ಬಯಸಿದಷ್ಟು ಕಾಲ ಎದೆ ಹಾಲು ಕೊಡಬೇಕು. ಆಗಾಗ ಎದೆಹಾಲು ಊಡಿಸುವುದರಿಂದ ಶಿಶುವಿನ ಚೀಪುವಿಕೆಯಿಂದ ಉತ್ತೇಜನಗೊಂಡು ಎದೆಹಾಲು ಸರಾಗವಾಗಿ ಹರಿಯುತ್ತದೆ. ನವಜಾತ ಶಿಶು ಪೌಷ್ಟಿಕಾಂಶಕ್ಕಾಗಿ ತನ್ನ ತಾಯಿಯನ್ನೇ ಅವಲಂಬಿಸಿರುತ್ತದೆ. ಗರ್ಭಧಾರಣೆಗೆ ಮುನ್ನ, ಗರ್ಭ ಧರಿಸಿದ ಅವಧಿಯಲ್ಲಿ ಹಾಗೂ ಎದೆಹಾಲು ಊಡಿಸುವ ಅವಧಿಯಲ್ಲಿ ತಾಯಿಯ ಆರೋಗ್ಯ ಮತ್ತು ಪೌಷ್ಟಿಕಾಂಶ ಸ್ಥಿತಿಗತಿಗಳು ಇನ್ನೂ ಜನಿಸದ ಹಾಗೂ ಜನಿಸಿದ ಬಳಿಕ ಬೆಳೆಯುತ್ತಿರುವ ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಹೀಗಾಗಿ ಎಳವೆಯಿಂದಲೇ ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕಾಂಶಗಳ ಒದಗಣೆಯು ಶಿಶುವಿಗೆ ಬದುಕಿನಲ್ಲಿ ಅತ್ಯುತ್ತಮ ಆರಂಭವನ್ನು ನೀಡುತ್ತದೆಯಲ್ಲದೆ, ಹೆಚ್ಚು ಹಾಲಿನ ಉತ್ಪಾದನೆಗೆ ಕಾರಣವಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಹಾಲು ಉತ್ಪಾದನೆ ಆಗದೆ ಇದ್ದಲ್ಲಿ ಅಥವಾ ಪ್ರಸವ ಸಂದರ್ಭದಲ್ಲಿ ತಾಯಿ ಮರಣಿಸಿದ್ದರೆ ಎದೆಹಾಲಿನ ಪರ್ಯಾಯಗಳನ್ನು ನೀಡಬಹುದು. ಎದೆಹಾಲಿನ ಸಂಭಾವ್ಯ ಪರ್ಯಾಯಗಳು: ಮಾರುಕಟ್ಟೆಯಲ್ಲಿ ದೊರೆಯುವ ಶಿಶು ಫಾರ್ಮುಲಾ ಆಹಾರ, ದ್ರವರೂಪದ ಪಶು ಹಾಲು (ಹಸು ಅಥವಾ ಆಡು), ಪುಡಿ ರೂಪದ ಪಶು ಹಾಲು, ಭಾಷ್ಪೀಕರಿಸಿದ ಹಾಲು. ಇತರ ಯಾವುದೇ ಹಾಲುಗಳ ಶಿಶುಗಳಿಗೆ ಹೊಂದುವುದಿಲ್ಲ.

ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ 
ಹಸು ಅಥವ ಆಡಿನ ಹಾಲನ್ನು ನೀಡುವಾಗ ಅನುಸರಿಸಬೇಕಾದ ಕ್ರಮಗಳು (ಪ್ರತೀ ಹಾಲುಣಿಸುವಿಕೆ)

– ಒಂದು ತಿಂಗಳು ವಯಸ್ಸಿನ ಶಿಶುವಿಗೆ 40 ಮಿ.ಲೀ. ಹಾಲನ್ನು 20 ಮಿ.ಲೀ. ಕುದಿದು ಆರಿಸಿದ ನೀರು, 4 ಗ್ರಾಂ ಸಕ್ಕರೆಯ ಜತೆಗೆ ಬೆರೆಸಿ ನೀಡಬೇಕು. 
– ಎರಡು ತಿಂಗಳು ವಯಸ್ಸಿನ ಶಿಶುವಿಗೆ 60 ಮಿ. ಲೀ. ಹಾಲನ್ನು 30 ಮಿ. ಲೀ. ಕುದಿದು ಆರಿಸಿದ ನೀರು, 6 ಗ್ರಾಂ ಸಕ್ಕರೆಯ ಜತೆಗೆ ಬೆರೆಸಿ.
– 3-4 ತಿಂಗಳು ವಯಸ್ಸಿನ ಶಿಶುಗಳಿಗೆ 80 ಮಿ. ಲೀ. ಹಾಲನ್ನು 40 ಮಿ. ಲೀ. ಕುದಿದು ಆರಿಸಿದ ನೀರು, 8 ಗ್ರಾಂ ಸಕ್ಕರೆಯ ಜತೆಗೆ ಬೆರೆಸಿ.
– 5-6 ತಿಂಗಳು ವಯಸ್ಸಿನ ಹಸುಳೆಗಳಿಗೆ 100 ಮಿ. ಲೀ. ಹಾಲನ್ನು 50 ಮಿ. ಲೀ. ಕುದಿದು ಆರಿಸಿದ ನೀರು ಮತ್ತು 10 ಗ್ರಾಂ ಸಕ್ಕರೆಯ ಜತೆಗೆ ಮಿಶ್ರ ಮಾಡಿ ಕೊಡಬಹುದು.

– ಮುಂದಿನ ವಾರಕ್ಕೆ 

Advertisement

Udayavani is now on Telegram. Click here to join our channel and stay updated with the latest news.

Next